ಬೆಳಗಾವಿ: ಕುರಿಗಾಹಿಯೊಬ್ಬರ ದೀಪಾವಳಿಯ ಖುಷಿಯನ್ನು ಟಿಪ್ಪರ್ ಚಾಲಕನೊಬ್ಬ ಹಾಳುಗೆಡವಿದ್ದಾನೆ. ಮಾತ್ರವಲ್ಲ, ಆತನಿಗೆ ಭಾರಿ ನಷ್ಟ ಉಂಟು ಮಾಡುವ ಮೂಲಕ ಕಂಗಾಲಾಗಿಸಿದ್ದಾನೆ. ಬೆಳಗಾವಿಯ ಅಗಸಗಿ ಎಂಬಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ಹೀಗೆ ಹಬ್ಬದ ಖುಷಿಯನ್ನು ಕಳೆದುಕೊಂಡ ಕುರಿಗಾಹಿಯ ಹೆಸರು ಬೀರಪ್ಪ ಶಾಪೂರ್ಕರ್. ಅಷ್ಟಕ್ಕೂ ಈ ಕುರಿಗಾಹಿಯ ಹಬ್ಬದ ಖುಷಿ ಹಾಳಾಗಲು ಕಾರಣ ಅಪಘಾತ. ಕಡೋಲಿ ಗ್ರಾಮದ ಬೀರಪ್ಪ ಕುರಿ ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಬ್ಲೇಡ್ನಿಂದ APPU ಅಂತ ಕೈ ಮೇಲೆ ಕೊಯ್ದುಕೊಂಡು, ಐ ಲವ್ ಯೂ ಅಪ್ಪು ಎಂದು ರಕ್ತದಲ್ಲಿ ಬರೆದ ವಿದ್ಯಾರ್ಥಿನಿ!
ಅಜಾಗರೂಕತೆಯಿಂದ ಟಿಪ್ಪರ್ ಚಲಾಯಿಸಿದ ವ್ಯಕ್ತಿ ಏಕಾಏಕಿ ಕುರಿಮಂದೆ ಮೇಲೆಯೇ ನುಗ್ಗಿಸಿದ್ದು, 12 ಕುರಿಗಳು ದಾರುಣ ಸಾವು ಕಂಡಿವೆ. ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಟಿಪ್ಪರ್ ಸಹಿತ ಪರಾರಿಯಾಗಿ ತಲೆ ಮರೆಸಿಕೊಂಡಿದ್ದಾನೆ. ಒಂದು ಡಜನ್ ಕುರಿಗಳನ್ನು ಕಳೆದುಕೊಂಡಿರುವ ಬೀರಪ್ಪ ಕಂಗಾಲಾಗಿದ್ದಾನೆ. ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಟಿಪ್ಪರ್ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.