ಗಂಗೊಳ್ಳಿ: ಬ್ರಾಹ್ಮಣರು ಸಮಾಜಮುಖಿ ಕಾರ್ಯ ಮಾಡುವುದರೊಂದಿಗೆ ಸಮಾಜವನ್ನು ಬೆಳೆಸಬೇಕು. ಈ ಮೂಲಕ ಉನ್ನತಿ ಸ್ಥಾನ ಪಡೆಯುವಲ್ಲಿ ಶ್ರಮ ವಹಿಸಬೇಕು. ಬ್ರಾಹ್ಮಣ್ಯ ಉಳಿಸುವಲ್ಲಿ ಧರ್ಮದ ಮೂಲಕ ಕಾರ್ಯ ಮಾಡುವುದರೊಂದಿಗೆ ಬ್ರಾಹ್ಮಣ್ಯಕ್ಕೆ ಅರ್ಥ ನೀಡಬೇಕು ಎಂದು ವಿದ್ವಾನ್ ಉಡುಪಿ ಕೊರಂಗ್ರಪಾಡಿಯ ತಂತ್ರಿ ವಿದ್ವಾನ್ ಕೆ.ಪಿ.ಕುಮಾರಗುರು ಹೇಳಿದರು.
ಹಂಗಳೂರಲ್ಲಿ ಕುಂದಾಪುರ ತಾಲೂಕು ದ್ರಾವಿಡ ಪರಿಷತ್ ಕುಂದಾಪುರ ವಲಯದ ವಾರ್ಷಿಕ ಅಧಿವೇಶನ, 101ನೇ ವಿಪ್ರವಾಣಿ ಬಿಡುಗಡೆ ಮತ್ತು ಮಹಾಸಭೆ ಬುಧವಾರ ಉದ್ಘಾಟಿಸಿ ಮಾತನಾಡಿದರು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಅಧ್ಯಕ್ಷ ಡಾ.ಕೆ.ಎಸ್.ಕಾರಂತ್ 101ನೇ ವಿಪ್ರವಾಣಿ ಬಿಡುಗಡೆಗೊಳಿಸಿದರು. ದ್ರಾವಿಡ ಬ್ರಾಹ್ಮಣ ಪರಿಷತ್ ಕುಂದಾಪುರ ವಲಯ ಅಧ್ಯಕ್ಷ ಜಿ.ಎಸ್.ಭಟ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ ಮಂಜ, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಶುಭಚಂದ್ರ ಹತ್ವಾರ್, ವಿಪ್ರವಾಣಿ ಪ್ರಧಾನ ಸಂಪಾದಕ ಪ್ರೊ.ಶಂಕರ್‌ರಾವ್ ಕಾಳಾವರ, ನಿವೃತ್ತ ಮುಖ್ಯಶಿಕ್ಷಕ ಯು.ವೆಂಕಟರಮಣ ಹೊಳ್ಳ ಶುಭಾಶಂಸನೆಗೈದರು.
ದ್ರಾವಿಡ ಬ್ರಾಹ್ಮಣ ಪರಿಷತ್, ಕುಂದಾಪುರ ವಲಯ ಗೌರವಾಧ್ಯಕ್ಷ ಚಂದ್ರಶೇಖರ ಐತಾಳ್, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ, ತಾಲೂಕು ಯುವ ವೇದಿಕೆ ಅಧ್ಯಕ್ಷ ಯು.ಅವನೀಶ್ ಹೊಳ್ಳ, ತಾಲೂಕು ಮಹಿಳಾ ವೇದಿಕೆ ಕುಂದಾಪುರ ವಲಯ ಕಾರ್ಯದರ್ಶಿ ಜಯಲಕ್ಷ್ಮೀ ಕಾರಂತ, ಕುಂದಾಪುರ ವಲಯ ಖಜಾಂಚಿ ಜಿ.ಎಸ್.ಹೆಗ್ಡೆ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ರಾವ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಅವನೀಶ್ ಹೊಳ್ಳ ವರದಿ ಮಂಡಿಸಿದರು. ಜಯಲಕ್ಷ್ಮೀ ಕಾರಂತ ವಂದಿಸಿದರು, ಯುಕ್ತ ಹೊಳ್ಳ, ಅವನೀಶ್ ಹೊಳ್ಳ ಮತ್ತು ಶಂಕರನಾರಾಯಣ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡೆಯಲ್ಲಿ ಸಾಧನೆ ಮಾಡಿದ ವಿಪ್ರ ಕ್ರಿಕೆಟ್ ತಂಡ ಮತ್ತು ವಿಪ್ರ ಮಹಿಳಾ ತ್ರೋಬಾಲ್ ತಂಡದವರನ್ನು ಅಭಿನಂದಿಸಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ನೇತ್ರ ತಜ್ಞ ಡಾ.ವಿ.ನರಸಿಂಹ ಹೊಳ್ಳ, ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಸಂಗೀತ ವಿದೂಷಿ ನಳಿನಿ ವಿ.ರಾವ್, ಸಮಾಜಸೇವಕ ಹೊಳೆಬದಿ ಕೆ.ರಾಮಕೃಷ್ಣ ಕಾರಂತ, ಕ್ರೀಡಾಪಟು ಡಾ.ಸುಚೇತಾ ಅವರನ್ನು ಅಭಿನಂದಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.