ಬೆಂಗಳೂರು: ಉದ್ಯಮ ಮತ್ತಷ್ಟು ವಿಸ್ತರಿಸಲು ಕಡಿಮೆ ಬಡ್ಡಿ ದರಕ್ಕೆ 10 ಕೋಟಿ ರೂ. ಸಾಲ ಕೊಡಿಸುವುದಾಗಿ ಪ್ರಿಂಟಿಂಗ್ ಪ್ರೆಸ್ ಮಾಲೀಕನಿಗೆ ನಂಬಿಸಿ 10 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ. ಕುರುಬರಹಳ್ಳಿಯ ಹರ್ಷ ನಾಡಿಗೇರ್ ಎಂಬಾತ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಮಹೇಶ್ ಗೌಡ ಪಾಟೀಲ್ ಮತ್ತು ಸುರೇಶ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹಲವು ದಿನಗಳಿಂದ ಪರಿಚಯವಿದ್ದ ಮಹೇಶ್ ಮತ್ತು ಸುರೇಶ್ ಶೇ.3 ದರದಲ್ಲಿ ಬಡ್ಡಿ ಕೊಡಿಸುವುದಾಗಿ ನಂಬಿಸಿ 25 ಸಾವಿರ ರೂ. ಮೌಲ್ಯದ ಅಗ್ರಿಮೆಂಟ್ ಪೇಪರ್ ಅವಶ್ಯಕತೆ ಇದೆ. ಅದನ್ನು ಸಿದ್ದಪಡಿಸಲು 10 ಲಕ್ಷ ರೂ. ಬೇಕೆಂದು ಹೇಳಿದ್ದಾರೆ. ಅಷ್ಟೊಂದು ಹಣ ಇಲ್ಲವೆಂದು ಹರ್ಷ ಮತ್ತು ಅವರ ತಂದೆ ಹೇಳಿದ್ದಾರೆ. ಆದರೂ ಬಿಡದೆ ಸಬೂಬು ಹೇಳಿ ನಂಬಿಸಿದ ಆರೋಪಿಗಳು ಮೇ 18ರಂದು 10 ಲಕ್ಷ ರೂ. ಪಡೆದು ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಸ್ಟೇಟ್ಮೆಂಟ್ ಪಡೆದು ಹೋಗಿದ್ದಾರೆ. ಹಣ ಪಡೆದ ಮೇಲೆ ಆರೋಪಿಗಳು ಮೊಬೈಲ್ಫೋನ್ ನಂಬರ್ ಕಡಿತ ಮಾಡಿಕೊಂಡಿದ್ದಾರೆ. ನೊಂದ ಹರ್ಷ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಪಿಗೇಹಳ್ಳಿ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.