ಇವತ್ತು ನಾನು ನಿಮಗೆ ಹೇಳ ಹೊರಟಿರೋದು 15 ವರ್ಷಗಳ ಹಿಂದೆ ನಡೆದ ಒಂದು ನಿಜವಾದ ಕಥೆ. ಕಥೆ ಅನ್ನೋದಕ್ಕಿಂತ ಇದನ್ನು ವ್ಯಥೆ ಅನ್ನೋದೇ ಸೂಕ್ತ. ಜಗತ್ತಿನ ಕಣ್ಣಿಗೆ ಅತ್ಯಂತ ಆದರ್ಶ ಕುಟುಂಬ ಅನಿಸಿಕೊಂಡಿದ್ದ ನನ್ನದೇ ಸ್ವಂತ ಮನೆಯಲ್ಲಿ ನಡೆದ ಘೊರ ಕಥೆಯಿದು.
ನನಗಾಗ ಹದಿನಾಲ್ಕು ವರ್ಷ. ನಮ್ಮಪ್ಪ ಶ್ರೀವರ್ಧನ್, ಈ ಊರಿನ ದೊಡ್ಡ ಕೋಟ್ಯಧೀಶ ಉದ್ಯಮಿ. ಸಮಾಜದಲ್ಲಿ ಅಪಾರ ಗೌರವವಿದ್ದ ಮನುಷ್ಯ. ನನ್ನ ಆತ್ಮವಿಶ್ವಾಸವೇ ಅಪ್ಪ. ನನಗೆ ಚಿಕ್ಕಂದಿನಿಂದಲೇ ಧರ್ಮ, ದರ್ಶನ, ಸಾಹಿತ್ಯ, ಕಲೆ, ಆಟೋಟ ಎಲ್ಲದರ ಬಗ್ಗೆ ಆಸಕ್ತಿ, ಅಭಿರುಚಿ ಬೆಳೆಸಿದ್ದೇ ನಮ್ಮಪ್ಪ. ಅಮ್ಮ ಹೇಳುತ್ತಿದ್ದ ಕಥೆಗಳಲ್ಲಿ ಲಾಜಿಕ್ಕೇ ಇಲ್ಲವಲ್ಲ ಅನಿಸುತ್ತಿತ್ತು. ಆದರೆ ಅಮ್ಮ ತುಂಬ ಚಂದ. ಯಾವಾಗಲೂ ನಗುಮುಖ. ಅಮ್ಮ ಅಂದರೆ ನನಗೆ ದೇವತೆಯೇ. ಅಪ್ಪ ಹೀರೋ... ನಮ್ಮ ತಾತ-ಅಜ್ಜಿಗಂತೂ ನಮ್ಮಮ್ಮ ಅಂದರೆ ಸ್ವಂತ ಮಗಳಿಗಿಂತ ಹೆಚ್ಚು ಪ್ರೀತಿ. ನಮ್ಮಮ್ಮನ ಹೆಸರು ಅನನ್ಯಾ. ಆಗ ಅಮ್ಮನಿಗೆ 36 ವರ್ಷ ವಯಸ್ಸಿರಬೇಕು. ಅಜ್ಜಿ ತಾತ ಇಬ್ಬರೂ ಅಮ್ಮನನ್ನು ಮಹಾಲಕ್ಷ್ಮಿ ಅಂತಲೇ ಕರೆಯುತ್ತಿದ್ದರು. ಒಂದು ಪ್ರತಿಷ್ಠಿತ ರಿಸರ್ಚ್ ಲ್ಯಾಬೊರೇಟರಿಯಲ್ಲಿ ಸೀನಿಯರ್ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತಿದ್ದಳು ಅಮ್ಮ. ಅದರ ಹೆಸರನ್ನು ನಾನು ಈಗ ಹೇಳಬಹುದು- ಆರ್ಗನೋನ್ ಅಡ್ವಾನ್ಸ್ ಕೆಮಿಕಲ್ ಆಂಡ್ ಬಯೋರಿಸರ್ಚ್ ಲ್ಯಾಬೋರೇಟರಿ... ಆಗ ಸಣ್ಣವನಿದ್ದಾಗ ಅಮ್ಮ ಎಲ್ಲಿ ಕೆಲಸ ಮಾಡೋದಂತ ಯಾರಾದರೂ ಕೇಳಿದರೆ ನಾನು ಆತುನೋನ್ ತೇಮಿಕಲ್ ಲಿಲತ್ತಲಾಯ್ಟಿ ಅಂತಿದ್ದೆನಂತ ಮನೆಯ ಮಂದಿ ಆಗಾಗ ನನ್ನ ಕಾಡ್ತಿರ್ತಾರೆ.
ಹೇಳಿದೆನಲ್ಲ ಅಮ್ಮ ದೇವತೆ ಅಂತ. ಆಕೆ ಮನೆಯಲ್ಲಿ ಅತ್ತೆಮಾವನ ಸೇವೆ, ಪೂಜೆ, ಅಡುಗೆ- ಎಲ್ಲವನ್ನೂ ನಗುಮುಖದಿಂದಲೇ ಮಾಡುತ್ತಿದ್ದಳು. ಆಕೆಯನ್ನು ನೋಡಿ ಬಂಧುಗಳೆಲ್ಲ ‘ಅನುರೂಪದ ಹೆಂಡತಿ...’ ‘ಸೊಸೆ ಅಂದರೆ ಹೀಗಿರಬೇಕು...’ ಅಂತೆಲ್ಲ ಹೆಮ್ಮೆಯಿಂದ ಹೇಳ್ತಿದ್ರು. ನಾನು ಸ್ವಲ್ಪ ಬೆಳೆದ ಮೇಲೆ ಅಪ್ಪ ನನ್ನನ್ನು ಊಟಿಯ ನೀಲಗಿರಿ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಶಾಲೆಗೆ ಸೇರಿಸಿದರು. ಇದನ್ನು ಅಜ್ಜಿ-ಅಜ್ಜ ವಿರೋಧಿಸಿದರೂ ಅಪ್ಪ ಹಟ ಹಿಡಿದರು. ಅವನು ಸ್ವಾವಲಂಬಿಯಾಗಿ ಬದುಕುವುದನ್ನು ರೂಢಿಸಿಕೋಬೇಕು.. ಹೀಗಾಗಿ ಅಲ್ಲಿಯೇ ಸೇರಿಸಬೇಕು ಅಂತ ತೀರ್ವನಿಸಿದರು. ನಾನು ಖುಷಿಯಿಂದಲೇ ಶಾಲೆಗೆ ಸೇರಿದೆ. ರಜೆ ಬಂದಾಗಷ್ಟೇ ಮನೆಗೆ ಬರ್ತಿದ್ದೆ. ಆ ದಿನಗಳಲ್ಲಿ ನಮ್ಮ ಪ್ರೀತಿಯಿಂದ ತುಂಬಿದ್ದ ಸ್ವರ್ಗದಂತಿದ್ದ ಕುಟುಂಬ ನನಗೆ ತುಂಬ ನೆನಪಾಗ್ತಿತ್ತು.
ನಮ್ಮಮ್ಮನ ದಿನಚರಿ ಬೆಳಗ್ಗೆ ಆರು ಗಂಟೆಗೆ ಶುರುವಾಗುತ್ತಿತ್ತು. ನಮ್ಮಪ್ಪನಿಗೆ ಆ ವಯಸ್ಸಿನಲ್ಲೇ ಬಿಪಿ, ಶುಗರ್ ಇದ್ದಿದ್ದರಿಂದ ಅವರ ಆರೋಗ್ಯದ ಸಂಪೂರ್ಣ ಜವಾಬ್ದಾರಿಯನ್ನು ಅಮ್ಮನೇ ವಹಿಸಿಕೊಂಡಿದ್ದಳು. ದಿನವೂ ಬೆಳಗ್ಗೆ-ರಾತ್ರಿ ಅಪ್ಪನಿಗೆ ಬೇಕಾದ ಮಾತ್ರೆ, ಇನ್ಸುಲಿನ್, ನ್ಯೂಟ್ರಿಷನ್ ಟಾನಿಕ್ಗಳನ್ನು ಅಮ್ಮನೇ ಸ್ವತಃ ಕೊಡ್ತಿದ್ದಳು. ಲ್ಯಾಬ್ನಲ್ಲಿ ಕೆಲಸ ಮಾಡೋವಳು, ವೈದ್ಯಕೀಯ ಜ್ಞಾನವಿದೆ ಅಂತ ತಾತ-ಅಜ್ಜಿಗೆ ಆಕೆಯ ಬಗ್ಗೆ ಹೆಮ್ಮೆ. ನನ್ನ, ಅಜ್ಜಿ, ತಾತನ ಎಲ್ಲರ ಸಂಪೂರ್ಣ ಆರೋಗ್ಯದ ಜವಾಬ್ದಾರಿ ಅಮ್ಮನದೇ ಆಗಿತ್ತು.
ಆದರೆ ಇದ್ದಕ್ಕಿದ್ದಂತೆ ಅಪ್ಪನ ಆರೋಗ್ಯ ಹದಗೆಡುತ್ತಾ ಹೋಯಿತು. ಡಾಕ್ಟರ್ಗಳಿಂದಲೂ ಅಪ್ಪನಿಗಾದ ಆರೋಗ್ಯ ಸಮಸ್ಯೆ ಏನೆಂದು ಖಚಿತಪಡಿಸಲಾಗಲಿಲ್ಲ. ಕೆಲವೇ ತಿಂಗಳಲ್ಲಿ ಆರಡಿ ಎತ್ತರದ, ಗಂಭೀರ ವ್ಯಕ್ತಿತ್ವದ ನಮ್ಮಪ್ಪ ದಿನದಿಂದ ದಿನಕ್ಕೆ ಕೃಶವಾಗುತ್ತಾ ಬಂದರು. ದೇಹದ ಮಾಂಸವೆಲ್ಲ ಕರಗಿ, ತಲೆಯ ಕೂದಲು ಉದುರಿ ಮೂಳೆ ಚರ್ಮದಂತಾದರು. ವೈದ್ಯರು ಇದನ್ನು ಮಧುಮೇಹದ ತೊಂದರೆ ಅಂತಲೇ ಮೊದಲಿಗೆ ಭಾವಿಸಿದರು. ಅಮ್ಮ ದಿನವಿಡೀ ಅಪ್ಪನ ಹಾಸಿಗೆ ಬಳಿಯಲ್ಲೇ ಕುಳಿತು ಕಣ್ಣೀರು ಹಾಕ್ತಿದ್ರು, ಕಾಲು ಒತ್ತುತ್ತಿದ್ರು, ಕಷಾಯ ಮಾಡಿ ಕುಡಿಸ್ತಿದ್ರು. ತಾತ-ಅಜ್ಜಿಗೂ ಅಮ್ಮನ ಬಗ್ಗೆ ಮರುಕ.. ‘ಗಂಡನನ್ನು ಉಳಿಸಿಕೊಳ್ಳಲು ರಾತ್ರಿ-ಹಗಲು ಸೇವೆ ಮಾಡ್ತಿದ್ದಾಳೆ’ ಅಂತ ಕಣ್ಣೀರು ಹಾಕ್ತಿದ್ರು.
ಆ ಸಮಯದಲ್ಲಿಯೇ ಒಮ್ಮೆ ನಾನು ಊಟಿಯಿಂದ ರಜೆಗೆ ಬಂದಿದ್ದೆ. ಅಪ್ಪನನ್ನು ನೋಡಿ ನನಗೆ ಭಯವೇ ಆಯಿತು. ಹೇಗಿದ್ದರು ನನ್ನಪ್ಪ ಈಗ ಹೀಗ್ಯಾಕಾದರು? ಏನಾಯ್ತಿದು ಅಪ್ಪನಿಗೆ ಅಂತ ತುಂಬ ದುಃಖ, ನೋವು.. ನನ್ನ ರೂಮಿಗೆ ಹೋಗಿ ಬಹಳ ಅತ್ತಿದ್ದು ನನಗಿನ್ನೂ ನೆನಪಿದೆ. ಅಮ್ಮನೇ ಅವತ್ತು ನನ್ನನ್ನು ಅಪ್ಪಿಕೊಂಡು ಸಮಾಧಾನದ ಮಾತುಗಳಾಡಿದ್ದಳು. ಅಂದು ರಾತ್ರಿ 11 ಗಂಟೆಗೆ ಅಮ್ಮ ವಾಡಿಕೆಯಂತೆ ಅಪ್ಪನಿಗೆ ಹಾಲು ಮತ್ತು ಔಷಧಿ ಕೊಟ್ಟಳು. ಅವರ ಎದೆ ಒತ್ತಿ, ಹಣೆಗೆ ಮುತ್ತಿಟ್ಟು ‘ಬೇಗ ಗುಣಮುಖರಾಗುತ್ತೀರಿ’ ಅಂತ ಹಾರೈಸಿದಳು. ನಡುರಾತ್ರಿ ಎರಡೂವರೆ ಸುಮಾರಿಗೆ ಅಪ್ಪನಿಗೆ ತೀವ್ರ ಎದೆನೋವು, ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಅಜ್ಜಿ ತಾತ ಗಾಬರಿಯಾದರು. ನಾನು ನನ್ನ ಕೋಣೆಯಿಂದ ಎದ್ದು ಬರುವ ಹೊತ್ತಿಗೇ ಅಮ್ಮನ ಕಣ್ಣುಗಳು ಅತ್ತು ಅತ್ತು ಕೆಂಪಾಗಿದ್ದವು. ಆದರೂ ಅಮ್ಮನೇ ಎಲ್ಲರನ್ನೂ ಸಂಭಾಳಿಸುತ್ತಿದ್ದಳು. ನಾನು ಅಪ್ಪನನ್ನೇ ನೋಡಿದೆ. ಅಪ್ಪನ ಕಣ್ಣುಗಳು ನನ್ನನ್ನೇ ನೋಡುತ್ತಿದ್ದವು. ಅವರು ನನ್ನನ್ನು ಸನ್ನೆಯಿಂದಲೇ ಹತ್ತಿರ ಕರೆದರು. ಹೋಗಿ ಅವರ ಪಕ್ಕ ಕುಳಿತು ಅವರ ಕೈ ಹಿಡಿದುಕೊಂಡೆ. ಏದುಸಿರು ಬಿಡುತ್ತಾ ಅಪ್ಪ ಏನೋ ಹೇಳುವ ಪ್ರಯತ್ನ ಮಾಡುತ್ತಿದ್ದರು.. ಇದ್ದಕ್ಕಿದ್ದಂತೆ ಶಾಂತರಾಗಿ ಬಿಟ್ಟರು. ತಕ್ಷಣ ಅಮ್ಮ ಫೋನ್ ಮಾಡಿ ಕರೆಸಿದ್ದು ಡಾಕ್ಟರ್ ಕೌಶಿಕ್ರನ್ನು. ಅವರು ನಮ್ಮ ಫ್ಯಾಮಿಲಿ ಡಾಕ್ಟರ್. ಕೌಶಿಕ್ ಬಂದು ಪರೀಕ್ಷಿಸಿ, ‘ಬಿಪಿ-ಶುಗರ್ ಹೆಚ್ಚಾಗಿ ತೀವ್ರ ಹೃದಯಾಘಾತದಿಂದ ತೀರಿಕೊಂಡಿದ್ದಾರೆ’ ಅಂತ ಹೇಳಿದರು. ಡೆತ್ ಸರ್ಟಿಫಿಕೇಟ್ ಕೂಡ ಹಾಗೆಯೇ ಬರೆದುಕೊಟ್ಟರು. ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿತು. ಅಪ್ಪನ ಶವದ ಮೇಲೆ ಬಿದ್ದು ಅಮ್ಮ ರೋದಿಸಿದ ರೀತಿ ಕಂಡು ನನಗೆ ದುಃಖ ತಡೆಯಲಾಗಲಿಲ್ಲ. ನನಗೆ ಅಪ್ಪನ ನಿಸ್ತೇಜ ಕಣ್ಣುಗಳೇ ಕಾಡುತ್ತಿದ್ದವು. ಸಾಯುವ ಘಳಿಗೆಯಲ್ಲಿ ಏನೋ ಹೇಳ ಹೊರಟ ಅಪ್ಪನ ಮುಖವನ್ನು ನಾನೆಂದೂ ಮರೆಯಲಾಗದು. ಊರಿಗೆ ಊರೇ ಸೇರಿತ್ತು ಮನೆ ಅಂಗಳದಲ್ಲಿ. ಗೌರವಾನ್ವಿತರೆಲ್ಲ ಬಂದು ಅಪ್ಪನ ದರ್ಶನ ಪಡೆದರು. ಅಪ್ಪನ ಶವವನ್ನು ನಮ್ಮ ತೋಟದಲ್ಲಿಯೇ ಮಣ್ಣು ಮಾಡಿದೆವು.
ಅಪ್ಪ ಸತ್ತ ಕೆಲವೇ ತಿಂಗಳಲ್ಲಿ ಅವರ ಕೋಟ್ಯಂತರ ರೂಪಾಯಿ ಇನ್ಸೂರೆನ್ಸ್ ಹಣ ಅಮ್ಮನ ಹೆಸರಿಗೆ ವರ್ಗಾವಣೆಯಾಯಿತು. ಅಮ್ಮ ತಾತ-ಅಜ್ಜಿಯನ್ನು ಬಿಟ್ಟು ಕೆಲಸಕ್ಕೂ ಹೋಗದೆ ಅವರ ಸೇವೆಯನ್ನೇ ಮಾಡುತ್ತಾ ತ್ಯಾಗಮಯಿಯಾದಳು. ಆ ಇನ್ಸೂರೆನ್ಸ್ ಹಣದಲ್ಲಿಯೇ ಅಪ್ಪನ ಹೆಸರಿನಲ್ಲಿ ಹೊಸ ಆಸ್ಪತ್ರೆ ಕಟ್ಟುವ ಕನಸನ್ನು ಅಮ್ಮ ಕಾಣುತ್ತಿದ್ದಳು.
ವರ್ಷಗಳು ಉರುಳಿದವು. ನಾನು ಬೆಳೆದು ದೊಡ್ಡವನಾಗಿ ಫೊರೆನ್ಸಿಕ್ ಸೈನ್ಸ್, ಅಂದರೆ ವಿಧಿವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪೂರೈಸಿದೆ. ನಮ್ಮಪ್ಪನ ಅಕಾಲಿಕ ಸಾವು ನನ್ನ ಮನಸ್ಸಿನಲ್ಲಿ ಸದಾ ಒಂದು ಪ್ರಶ್ನೆಯಾಗಿಯೇ ಉಳಿದಿತ್ತು. ಅವರ ಕಣ್ಣುಗಳು ಮತ್ತು ಏನನ್ನೋ ಹೇಳಲು ಹೊರಟು ಹೇಳಲಾಗದೇ ತೀರಿಕೊಂಡ ಅವರ ಮುಖದ ಭಾವ ನನ್ನನ್ನು ಸದಾ ಕಾಡುತ್ತಿತ್ತು. ನನ್ನಲ್ಲಿ ಕೆಲವು ಅನುಮಾನಗಳನ್ನೂ ಹುಟ್ಟು ಹಾಕಿತು... ಕೇವಲ ನಲವತ್ತೆರಡು ವರ್ಷದ ಆರೋಗ್ಯವಂತ ಮನುಷ್ಯ ಕೇವಲ ಆರು ತಿಂಗಳಲ್ಲಿ ಅಷ್ಟೊಂದು ಕ್ಷೀಣಿಸಿ ಹೇಗೆ ಸಾಯಲು ಸಾಧ್ಯ ಎನ್ನುವ ಶಂಕೆ ನನ್ನಲ್ಲಿ ಸುಪ್ತವಾಗಿಯೇ ಇತ್ತು. ಊಟಿಯ ಶಾಲೆಯಲ್ಲಿದ್ದಾಗ ನಾನು ಫಸ್ಟ್ ರ್ಯಾಂಕ್ ಬಂದ ಸಂದರ್ಭದಲ್ಲಿ, ಅಪ್ಪ ಸಂಭ್ರಮದಿಂದ ತಾನು ನಿತ್ಯ ತೊಡುತ್ತಿದ್ದ ಪ್ರೀತಿಯ ಸಿಲ್ವರ್ ವಾಚ್ಅನ್ನು ತನ್ನ ಕೈಯಿಂದ ತೆಗೆದು ನನ್ನ ಮುಂಗೈಗೆ ತೊಡಿಸಿದ್ದರು. ಆದರೆ ಅದನ್ನು ನಾನೆಂದೂ ಕಟ್ಟಿಕೊಳ್ಳಲಿಲ್ಲ. ಆ ವಾಚನ್ನು ನಾನು ಅವರ ನೆನಪಿಗಾಗಿ ಭದ್ರವಾಗಿ ಎತ್ತಿಟ್ಟಿದ್ದೆ. ಒಂದು ದಿನ ನಾನು ಫೊರೆನ್ಸಿಕ್ ಲ್ಯಾಬ್ನಲ್ಲಿ ‘ಸ್ವೆಟ್ ಎನಾಲಿಸಿಸ್’ ಅಂದರೆ ಬೆವರಿನ ಕಲೆಗಳ ಪರೀಕ್ಷೆ ಬಗ್ಗೆ ಅಧ್ಯಯನ ಮಾಡುತ್ತಿದ್ದಾಗ, ನನಗೆ ತಕ್ಷಣವೇ ಆ ವಾಚ್ ನೆನಪಾಯಿತು.
ಅಪ್ಪ ಸಾಯುವ ಕೆಲವು ವಾರಗಳ ಮುಂಚೆಯಷ್ಟೇ ಆ ವಾಚ್ ಧರಿಸುತ್ತಿದ್ದರು. ನಾನು ಮನೆಗೆ ಹೋಗಿ ಆ ಹಳೆಯ ವಾಚ್ ತಂದು, ಅದರ ಸ್ಟೇನ್ಲೆಸ್ ಸ್ಟೀಲ್ ಪಟ್ಟಿಯ ಸಂದಿಗಳಲ್ಲಿ ಒಣಗಿ ಗಟ್ಟಿಯಾಗಿದ್ದ ಅಪ್ಪನ ಹಳೆಯ ಬೆವರಿನ ಕಲೆಗಳನ್ನು ಸೂಕ್ಷ್ಮವಾಗಿ ಸ್ಯಾಂಪಲ್ ತೆಗೆದು ಲ್ಯಾಬ್ನಲ್ಲಿ ಪರೀಕ್ಷೆಗೆ ಒಳಪಡಿಸಿದೆ. ವರದಿ ಬಂದಾಗ ನನ್ನ ಪಾದಗಳ ಅಡಿಯ ನೆಲವೇ ಕುಸಿದಂತಾಯಿತು. ಆ ಒಣಗಿದ ಬೆವರಿನ ಸ್ಯಾಂಪಲ್ನಲ್ಲಿ ಸಾಮಾನ್ಯ ಮನುಷ್ಯನಲ್ಲಿ ಇರುವುದಕ್ಕಿಂತ ನೂರಾರು ಪಟ್ಟು ಹೆಚ್ಚು ಥ್ಯಾಲಿಯಮ್ ಮತ್ತು ಆರ್ಸೆನಿಕ್ ಪತ್ತೆಯಾಗಿತ್ತು. ವಿಜ್ಞಾನದ ಪ್ರಕಾರ, ರಕ್ತದಿಂದ ಮಾಯವಾಗುವ ಇಂತಹ ವಿಷಗಳು ಚರ್ಮದ ಬೆವರಿನ ಗ್ರಂಥಿಗಳ ಮೂಲಕ ಹೊರಬಂದು ಲೋಹದ ವಸ್ತುಗಳ ಮೇಲೆ ದಶಕಗಳ ಕಾಲ ಹಾಗೆಯೇ ಉಳಿದುಕೊಳ್ಳುತ್ತವೆ.
ನಾನು ನನ್ನ ಪರಿಚಯದ ಡಾಕ್ಟರ್ ಒಬ್ಬರಲ್ಲಿ ಈ ಆರ್ಸೆನಿಕ್ ಮತ್ತು ಥ್ಯಾಲಿಯಮ್ ಬಗ್ಗೆ ವಿಚಾರಿಸಿದಾಗ ಅವರು ಹೇಳಿದ್ದು ಕೇಳಿ ನಿಬ್ಬೆರಗಾದೆ...
‘ಮೈ ಡಿಯರ್ ರವಿ... ಆರ್ಸೆನಿಕ್ ಅನ್ನೋದು ಬಣ್ಣ, ವಾಸನೆ ಅಥವಾ ರುಚಿ ಇಲ್ಲದ ಸೈಲೆಂಟ್ ಕಿಲ್ಲರ್. ಇದನ್ನು ದಿನವೂ ಸಣ್ಣ ಪ್ರಮಾಣದಲ್ಲಿ ನೀಡಿದಾಗ ದೇಹದ ಪೊ›ಟೀನ್ ರಚನೆಯನ್ನು ಒಳಗಿನಿಂದಲೇ ಹಂತ ಹಂತವಾಗಿ ನಾಶ ಮಾಡುತ್ತೆ. ಇದರಿಂದ ವ್ಯಕ್ತಿಗೆ ನಿರಂತರ ವಾಂತಿ, ಹೊಟ್ಟೆಯುರಿ, ತೀವ್ರ ನಿಶ್ಶಕ್ತಿ ಮತ್ತು ಜೀರ್ಣಾಂಗ ವ್ಯೂಹದ ವೈಫಲ್ಯ ಉಂಟಾಗುತ್ತೆ. ವೈದ್ಯರು ಇದನ್ನು ಸಾಮಾನ್ಯ ಮಧುಮೇಹದ ಅಡ್ಡಪರಿಣಾಮ ಅಥವಾ ಕರುಳಿನ ಸೋಂಕು ಅಂತ ತಪ್ಪಾಗಿ ಭಾವಿಸುವಂತೆ ಮಾಡೋದು ಆರ್ಸೆನಿಕ್ನ ನಿಸರ್ಗಸಿದ್ಧ ಲಕ್ಷಣ. ಇನ್ನು ಥ್ಯಾಲಿಯಮ್ನ್ನು ವೈಜ್ಞಾನಿಕವಾಗಿ ‘ಪಾಯ್ಸನರ್ಸ್ ಪಾಯ್ಸನ್’ ಅಂತಲೇ ಕರೀತಾರೆ. ರುಚಿಯಾಗಲಿ, ಯಾವುದೇ ಬಣ್ಣವಾಗಲಿ ಇಲ್ಲದ ಈ ಕೆಮಿಕಲ್ ಜಗತ್ತಿನ ಅತ್ಯಂತ ಭೀಕರ ವಿಷಗಳಲ್ಲಿ ಒಂದು. ಇದು ದೇಹವನ್ನು ಸೇರಿದಾಗ ನರಮಂಡಲವನ್ನು ಸಂಪೂರ್ಣ ಜಜ್ಜುತ್ತದೆ. ಕೈ-ಕಾಲುಗಳಲ್ಲಿ ವಿಪರೀತ ಉರಿ, ಸೂಜಿ ಚುಚ್ಚಿದಂತಹ ನರಗಳ ನೋವು ಮತ್ತು ಕ್ಷಣಕ್ಷಣಕ್ಕೂ ಶಕ್ತಿ ಕುಂದುವಂತೆ ಮಾಡುತ್ತೆ. ಥ್ಯಾಲಿಯಮ್ ಅತ್ಯಂತ ಪ್ರಮುಖ ಲಕ್ಷಣ ಏನಂದ್ರೆ ದೇಹದ ಮಾಂಸಖಂಡಗಳು ಕರಗಿ, ತಲೆಯ ಕೂದಲು ಕಂತೆ-ಕಂತೆಯಾಗಿ ಉದುರಿ ಹೋಗೋದು...’
ಡಾಕ್ಟರ್ ಮಾತು ಕೇಳಿ ನನಗೆ ಅಪ್ಪನ ಇತ್ತೀಚಿನ ಲಕ್ಷಣಗಳೆಲ್ಲ ಕಣ್ಣ ಮುಂದೆ ಬಂದವು. ಖಂಡಿತ ಈ ಮಾರಕ ವಿಷದಿಂದಲೇ ಅಪ್ಪ ಸತ್ತಿದ್ದಾರೆ. ಆದರೆ ಎಲ್ಲಿ ತಪ್ಪಾಗಿದೆ? ಯಾರಿಂದ ತಪ್ಪಾಗಿದೆ? ಮೆಡಿಸಿನ್ ಏನಾದರೂ ತಪ್ಪಾಗಿ ಕೊಟ್ಟರೇ? ಡಾಕ್ಟರ್ ಏನಾದರೂ ತಪ್ಪಾದ ಔಷಧಿ ಇಂಜೆಕ್ಟ್ ಮಾಡಿದರೆ? ಹೀಗಾಗಲು ಹೇಗೆ ಸಾಧ್ಯ? ಅಮ್ಮ ಕಲಿತವಳು. ನಮ್ಮ ಡಾಕ್ಟರ್ ಕೂಡ ಅಪ್ಪನ ಸ್ನೇಹಿತನೇ... ಯಾವುದಾದರೂ ಮಾಫಿಯಾ? ಅಥವಾ ಅಪ್ಪನ ಏಳಿಗೆ ಸಹಿಸದವರು ಯಾರಾದರೂ?? ಯಾರು? ಯಾರು? ಯಾರು?
ನನ್ನ ನಂಬಿಕೆಯೇ ಅಲುಗಾಡಿತು... ಯಾರ ಮೇಲೆ ಅನುಮಾನ ಪಡಲಿ? ಮನೆಯಲ್ಲಿದ್ದದ್ದು ಅಜ್ಜ, ಅಜ್ಜಿ, ಅಮ್ಮ... ಅಪ್ಪನ ಆಫೀಸ್ ಸ್ಟಾಫ್, ಸೆಕ್ರೆಟರಿ ಅಥವಾ ಯಾರು...? ಯಾರ ಮೇಲೆಯೂ ಅನುಮಾನಪಡಲು ಮನಸ್ಸು ಒಪ್ಪದಿದ್ದರೂ, ಸತ್ಯ ಹುಡುಕಲು ನಾನು ಸಿಐಡಿಯ ಹಿರಿಯ ಅಧಿಕಾರಿಯಾಗಿದ್ದ ನಮ್ಮ ಕೌನ್ಸೆಲರ್ ರಘುರಾಮ್ ಅವರ ನೆರವು ಪಡೆದೆ.
ರಘುರಾಮ್ ಎಲ್ಲರನ್ನೂ ಅನುಮಾನದಿಂದಲೇ ಕಂಡು ತನಿಖೆ ಶುರು ಮಾಡಿದರು. ಆಫೀಸಿನಿಂದ ಹಿಡಿದು ಮನೆಯತನಕ, ತೋಟದಿಂದ ಹಿಡಿದು ಅಪ್ಪ ಆರೋಗ್ಯವಾಗಿದ್ದಾಗ ವಾಕಿಂಗ್ ಹೋಗುತ್ತಿದ್ದ ರ್ಪಾನತನಕ, ಮೆಡಿಕಲ್ ಸ್ಟೋರುಗಳಿಂದ ಹಿಡಿದು ಆಸ್ಪತ್ರೆಗಳತನಕ ರಘುರಾಮರದ್ದು ಸಂಶಯದ ಕಣ್ಣುಗಳೇ...
ನಾವು ಅಮ್ಮನ ಹಳೆಯ ಲ್ಯಾಬ್ ರಿಜಿಸ್ಟರ್ಗಳನ್ನು ತನಿಖೆ ಮಾಡಿದಾಗ ಅಮ್ಮ ಕೆಲಸ ಮಾಡುತ್ತಿದ್ದ ಲ್ಯಾಬ್ನಿಂದ ವಿಷಕಾರಿ ರಾಸಾಯನಿಕಗಳು ಕಣ್ಮರೆಯಾಗಿದ್ದ ದಾಖಲೆ ಸಿಕ್ಕಿತು. ಜೊತೆಗೆ ಅಪ್ಪ ಸತ್ತ ಆ ಕರಾಳ ರಾತ್ರಿ 1 ಗಂಟೆಯಿಂದ 2 ಗಂಟೆಯ ನಡುವೆ ಅಮ್ಮ ಮತ್ತು ಡಾಕ್ಟರ್ ಕೌಶಿಕ್ ನಡುವೆ ನಡೆದಿದ್ದ ನಾಲ್ಕು ಸುದೀರ್ಘ ಫೋನ್ ಕರೆಗಳ ರೆಕಾರ್ಡ್ ಸಿಕ್ಕಿತು. ಅಷ್ಟೇ ಅಲ್ಲ, ಅಪ್ಪ ಸತ್ತ ಮೂರು ತಿಂಗಳಿಗೆ ಅಮ್ಮನ ಖಾತೆಯಿಂದ ಡಾಕ್ಟರ್ ಖಾತೆಗೆ 50 ಲಕ್ಷ ರೂಪಾಯಿ ವರ್ಗಾವಣೆಯಾಗಿದ್ದು ಸ್ಪಷ್ಟವಾಯಿತು. ನನ್ನ ಪ್ರೀತಿ, ವಿಶ್ವಾಸ, ವಾತ್ಸಲ್ಯದ ಸೌಧ ಮೆಲ್ಲನೆ ಕುಸಿಯತೊಡಗಿತು... ಆಗ ನನಗಾಗಿದ್ದ ಮನೋವೇದನೆಯನ್ನು, ನನ್ನ ಮನಸಿನ ಪರಿಸ್ಥಿತಿಯನ್ನು ಖಂಡಿತ ವಿವರಿಸಲಾಗದು. ಯಾರನ್ನು ದೇವತೆ ಅಂದುಕೊಂಡಿದ್ದೆನೋ ಆಕೆಯ ಮೇಲೆಯೇ ಗುಮಾನಿ ಪಡುವಂತಾಗಿದ್ದು ಘೊರ ದುರಂತ ನನ್ನ ಪಾಲಿಗೆ.. ಆದರದು ಸತ್ಯವಾಗದಿರಲೆಂದು ಮನಸೋ ಪ್ರಾರ್ಥಿಸಿದೆ.
ಅಪ್ಪನ ಸಾವಿಗೆ ಪಕ್ಕಾ ಸಾಕ್ಷಿ ಬೇಕಾಗಿದ್ದರಿಂದ, ರಘುರಾಮ್ ಒಂದು ಪ್ಲ್ಯಾನ್ ಮಾಡಿದರು. ಅದಕ್ಕೆ ನನ್ನ ಸಹಕಾರವನ್ನು ಕೋರಿದರು. ಅಮ್ಮ ಮತ್ತು ಕೌಶಿಕ್ ಭೇಟಿಯಾಗುತ್ತಿದ್ದದ್ದೆಲ್ಲಿ ಅನ್ನುವುದನ್ನು ರಘುರಾಮ್ ಪತ್ತೆ ಹಚ್ಚಿ ನಮ್ಮ ಫಾರ್ಮ್ಹೌಸ್ನಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದರು. ನನ್ನಿಂದ ಅವರು ಬಯಸಿದಂತೆ ಒಂದು ಸಾಯಂಕಾಲ ನಾನು ಅಮ್ಮನ ಬಳಿ ಹೋಗಿ ಗಾಬರಿಯಿಂದ ‘ಅಮ್ಮ, ಅಪ್ಪ ಸತ್ತಾಗ ಅವರ ವಾಚ್ನಲ್ಲಿದ್ದ ಬೆವರಿನ ಸ್ಯಾಂಪಲ್ನಿಂದಾಗಿ ಪೊಲೀಸರಿಗೆ ಅನುಮಾನ ಬಂದಿದೆ. ನಾಳೆ ಅಪ್ಪನ ಸಮಾಧಿ ತೆರೆದು ಮೂಳೆಗಳ ಕೆಮಿಕಲ್ ಪರೀಕ್ಷೆ ಮಾಡಲಿದ್ದಾರಂತೆ...’ ಅಂತ ನಾಟಕ ಮಾಡಿದೆ. ಈ ಮಾತು ಕೇಳಿ ಅಮ್ಮ ಗಾಬರಿಯಿಂದ ಬಿಳಿಚಿಕೊಂಡಳು.. ಆದರೆ ಒಂದೇ ಕ್ಷಣ.. ತಕ್ಷಣ.. ‘ಮಾಡಲಿ ಬಿಡು... ಏನು ಮಾಡಿದರೇನು ಅವರೇನು ವಾಪಸ್ಸು ಬರುತ್ತಾರಾ ಹೇಳು...’ ಅಂತ ಕಣ್ಣೀರು ಸುರಿಸಿದಳು. ನಾನಲ್ಲಿ ನಿಲ್ಲದೇ ಮನೆಯಿಂದ ಹೊರಬಂದೆ.. ಆದರೆ ಎಲ್ಲಿಯೂ ಹೋಗದೇ ಮನೆಯ ಮೇಲೆ ಕಣ್ಣಿಟ್ಟು ದೂರದ ಪಾರ್ಕ್ನಲ್ಲಿ ಕುಳಿತಿದ್ದೆ. ಇಪ್ಪತ್ತು ನಿಮಿಷದ ನಂತರ ಅಮ್ಮ ಕಾರು ತೆಗೆದುಕೊಂಡು ಹೋದದ್ದು ಕಾಣಿಸಿತು. ನಾನು ತಕ್ಷಣ ರಘುರಾಮ್ ಅವರಿಗೆ ವಿಷಯ ತಿಳಿಸಿದೆ.
ಅಮ್ಮ ಫಾಮ್ರ್ ಹೌಸ್ಗೆ ಓಡಿ ಕೌಶಿಕ್ನನ್ನು ಭೇಟಿಯಾದಳು. ಅಲ್ಲಿ ಆಕೆ ನಡುಗುತ್ತಾ... ‘ಕೌಶಿಕ್, ಶ್ರೀವರ್ಧನ್ ಮೂಳೆಗಳನ್ನು ಪರೀಕ್ಷೆ ಮಾಡ್ತಾರಂತೆ! ನಾವು ಕೊಟ್ಟಿದ್ದ ಥ್ಯಾಲಿಯಮ್ ಆರ್ಸೆನಿಕ್ ಕುರುಹು ಮೂಳೆಗಳಲ್ಲಿ ಇನ್ನು ಹಾಗೆಯೇ ಇರುತ್ತೆ! ರಾತ್ರೋರಾತ್ರಿ ಆ ಮೂಳೆಗಳನ್ನು ಅಲ್ಲಿಂದ ಮಾಯ ಮಾಡಬೇಕು’ ಅಂತ ಹೇಳಿದ್ದು ಕ್ಯಾಮೆರಾದಲ್ಲಿ ಧ್ವನಿಯ ಸಮೇತ ಮುದ್ರಿತವಾಯಿತು. ಅದಕ್ಕೆ ಕೌಶಿಕ್ ‘ಹೆದರಬೇಡ, 15 ವರ್ಷಗಳ ಹಿಂದೆ ಲ್ಯಾಬ್ನಿಂದ ವಿಷ ತಂದುಕೊಟ್ಟಿದ್ದು ನೀನು, ಡೆತ್ ಸರ್ಟಿಫಿಕೇಟ್ ಕೊಟ್ಟಿದ್ದು ನಾನು. ಯಾರ ಬಳಿಯೂ ಸಾಕ್ಷಿಯಿಲ್ಲ.. ಲ್ಯಾಬ್ ರೆಕಾರ್ಡನ್ನು ಈ ಕೂಡಲೇ ಹೋಗಿ ಅಳಿಸಿ ಹಾಕೋಣ’ ಅಂತ ಸಮಾಧಾನ ಪಡಿಸಿದ...
ನನ್ನ ಮೊಬೈಲ್ನಲ್ಲಿ ಒಳಗಿನ ಮಾತುಕತೆಯನ್ನು ಕೇಳುತ್ತಿದ್ದ ನನಗೆ ಅಪ್ಪ ಹೇಳ್ತಿದ್ದ ‘ವಿಷಕುಂಭಂ ಪಯೋಮುಖಮ್ ಅನ್ನುವ ಮಾತು ನೆನಪಾಯ್ತು. ‘ಹೊರಗೆ ಅಮೃತದಂತಹ ಮಾತು, ಒಳಗೆ ಮಾರಕ ವಿಷ’. ಈ ಸತ್ಯ ನನಗೆ ಗೊತ್ತಾಗಲು ದಶಕಗಳೇ ಬೇಕಾಯಿತು. ಪುರಾಣದಲ್ಲಿ ಶ್ರೀಕೃಷ್ಣನಿಗೆ ಚಂದನದ ಲೇಪನದೊಂದಿಗೆ ಹಾಲೂಡಿಸಲು ಬಂದು, ತನ್ನ ಸ್ತನಗಳಿಗೆ ವಿಷ ಸವರಿಕೊಂಡಿದ್ದ ‘ಪೂತನಿ’ಯ ಕಥೆ ಕೇಳಿದ್ದೆ. ಆದರೆ ಸ್ವಂತ ಗಂಡನಿಗೆ, ಕುಟುಂಬದ ಕಣ್ಣೀರನ್ನೇ ತರ್ಪಣವಾಗಿಸಲು ಹೊರಟ ಈ ಆಧುನಿಕ ಪೂತನಿಯನ್ನು ನಾನು ನಮ್ಮ ಸ್ವಂತ ಮನೆಯಲ್ಲೇ, ನಾನಂದುಕೊಂಡಿದ್ದ ದೇವತೆಯಲ್ಲಿಯೇ ಕಾಣಬೇಕಾಗುತ್ತದೆ ಅಂತ ಭಾವಿಸಿರಲಿಲ್ಲ.
ನಂತರ ರಘುರಾಮರೊಂದಿಗೆ ಬಂದ ಪೊಲೀಸರು ಬಾಗಿಲು ಮುರಿದು ಇಬ್ಬರಿಗೂ ಕೈಕೋಳ ತೊಡಿಸಿದರು. ಅಮ್ಮ ತಿರುಗಿ ನೋಡಿದಾಗ, ಪೊಲೀಸರ ಹಿಂದೆ ಕಣ್ಣೀರು ಹಾಕುತ್ತಾ ನಿಂತಿದ್ದದ್ದು ಸ್ವತಃ ನಾನು- ಆಕೆಯ ಮಗ... ಆಕೆಯ ಕಣ್ಣುಗಳಲ್ಲಿ ಭಯ ಮತ್ತು ಅಪರಾಧಿ ಪ್ರಜ್ಞೆಯಿತ್ತು. ನಾನು ಕಣ್ಣೀರು ಒರೆಸಿಕೊಳ್ಳುತ್ತಾ.. ‘ಅಮ್ಮ... ನೀನು ಅಪ್ಪನಿಗೆ ಕೊಟ್ಟಿದ್ದು ವಿಷವಾಗಿರಬಹುದು. ಆದರೆ ಅಪ್ಪನ ಮೇಲಿದ್ದ ನನ್ನ ಪ್ರೀತಿಗೆ ನೀನು ಯಾವುದೇ ವಿಷ ಬೆರೆಸುವುದಕ್ಕೆ ಸಾಧ್ಯವಿರಲಿಲ್ಲ. ನ್ಯಾಯಕ್ಕೆ ಯಾವತ್ತಿದ್ದರೂ ಗೆಲುವು!’ ಅಂದೆ...
ನಾವು ಯಾರೂ ಕೂಡ ಅಮ್ಮನನ್ನು ಅನುಮಾನಿಸಿರಲಿಲ್ಲ. ಆದರೆ ಸುಂದರ ಮುಖವಾಡದ ಹಿಂದೆ ಎಂತಹ ರಾಕ್ಷಸೀ ಸಂಚು ಅಡಗಿದೆ ಅಂತ ನಮ್ಮ ತಾತ-ಅಜ್ಜಿಗಾಗಲಿ, ಪ್ರಾಣ ಬಿಟ್ಟ ನಮ್ಮಪ್ಪನಿಗಾಗಲಿ, ನನಗಾಗಲಿ ತಿಳಿಯಲೇ ಇಲ್ಲ.
ಅಮ್ಮನ ಆ ಬಾಹ್ಯ ಸೌಂದರ್ಯ ಮತ್ತು ನಾಟಕೀಯ ಪ್ರೀತಿಯ ಮುಸುಕಿನ ಹಿಂದೆ ಅತ್ಯಂತ ಕರಾಳವಾದ ಸತ್ಯವೊಂದು ಹುದುಗಿತ್ತು... ಅದನ್ನು ಕೋರ್ಟಿನಲ್ಲಿ ಅಮ್ಮನೇ ಹೊರಹಾಕಿದಳು...
ನಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದ, ಅಪ್ಪನ ಫ್ಯಾಮಿಲಿ ಡಾಕ್ಟರ್ ಕೌಶಿಕ್ ಮತ್ತು ಅಮ್ಮ ಅನನ್ಯಾ ನಡುವೆ ಕಳೆದ ಕೆಲವು ವರ್ಷಗಳಿಂದ ಅನೈತಿಕ ಸಂಬಂಧ ಬೆಳೆದಿತ್ತು. ಅಪ್ಪನ ಅತಿಯಾದ ಉದ್ಯಮದ ಒತ್ತಡ ಮತ್ತು ನಿರಂತರ ಪ್ರಯಾಣಗಳನ್ನೇ ಬಂಡವಾಳ ಮಾಡಿಕೊಂಡ ಈ ಜೋಡಿ, ರಹಸ್ಯವಾಗಿ ತಮ್ಮ ವಿವಾಹೇತರ ಪ್ರೇಮವನ್ನು ಮುಂದುವರಿಸಿತ್ತು. ಆದರೆ ಅಪ್ಪನ ಆಸ್ತಿ, ಸಮಾಜದಲ್ಲಿದ್ದ ಸ್ಥಾನಮಾನ ಮತ್ತು ತಾತ-ಅಜ್ಜಿಯರ ಆಸ್ತಿಯ ಸಂಪೂರ್ಣ ಒಡೆತನ ತನಗೆ ಸಿಗಬೇಕೆಂಬ ದುರಾಸೆ ಅಮ್ಮನಲ್ಲಿ ಚಿಗುರೊಡೆದಿತ್ತು. ಡಾ. ಕೌಶಿಕ್ನ ವೈದ್ಯಕೀಯ ಜ್ಞಾನ ಮತ್ತು ಅಮ್ಮನ ಕೆಮಿಕಲ್ ಲ್ಯಾಬ್ ಆಕ್ಸೆಸ್- ಇವೆರಡೂ ಸೇರಿ ನಮ್ಮಪ್ಪನ ಸಾವಿಗೆ ಅತ್ಯಂತ ಕ್ರೂರವಾದ, ನಿಧಾನಗತಿಯ ಸ್ಲೋ ಪಾಯ್ಸನಿಂಗ್ ತಂತ್ರವನ್ನು ರೂಪಿಸಿದವು.
ಅಪ್ಪನಿಗೆ ದಿನವೂ ನೀಡುತ್ತಿದ್ದ ಆಹಾರ ಮತ್ತು ಟಾನಿಕ್ನಲ್ಲಿ ಅಮ್ಮ ಮತ್ತು ಕೌಶಿಕ್ ಸೇರಿ ಎರಡು ಮಾರಕ ವಿಷಗಳನ್ನು ಅತ್ಯಂತ ಸೂಕ್ಷ್ಮವಾಗಿ ಬೆರೆಸುತ್ತಿದ್ದರು. ಒಂದು ಆರ್ಸೆನಿಕ್, ಇನ್ನೊಂದು ಥ್ಯಾಲಿಯಮ್ ಅಮ್ಮ ಬೆಳಗ್ಗೆ ಕೊಡುವ ಟಾನಿಕ್ನಲ್ಲಿ ಆರ್ಸೆನಿಕ್ ಬೆರೆಸಿದರೆ, ರಾತ್ರಿ ಕೊಡುವ ಹಾಲಿನಲ್ಲಿ ಥ್ಯಾಲಿಯಮ್ ಸೇರಿಸುತ್ತಿದ್ದಳು! ಈ ಎರಡೂ ವಿಷಗಳ ಸಂಯೋಜನೆ ಅಪ್ಪನನ್ನು ಅಕ್ಷರಶಃ ಜೀವಂತ ಹೆಣವಾಗಿ ಮಾರ್ಪಡಿಸಿತು. ಅದೊಂದು ದಿನ ಡೋಸೇಜ್ ಹೆಚ್ಚಾಗಿ ಅಪ್ಪ ತೀರಿಕೊಂಡರು.
ಇವತ್ತು ಅಮ್ಮ ಮತ್ತು ಡಾಕ್ಟರ್ ಕೌಶಿಕ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಸಮಾಜದ ಕಣ್ಣಿಗೆ ಆದರ್ಶ ಹೆಂಡತಿಯಾಗಿದ್ದ ಅನನ್ಯಾ, ಇವತ್ತು ಒಬ್ಬ ಅಪರಾಧಿಯಾಗಿ ಉಳಿದಿದ್ದಾಳೆ. ಅಜ್ಜ ಅಜ್ಜಿಗೆ ಮಗನ ಸಾವಿಗಿಂತ ತಾವು ಮಗಳೆಂದು ಭಾವಿಸಿದ್ದ ಸೊಸೆಯ ದ್ರೋಹ ಕಂಗೆಡಿಸಿದೆ... ಈಗ ಅವರೇ ನನ್ನ ಮಕ್ಕಳು. ಎಷ್ಟೇ ಸೂಕ್ಷ್ಮವಾಗಿ ಮಾಡಿದ ಅಪರಾಧವೂ ಕಾಲದ ಪರೀಕ್ಷೆಯಲ್ಲಿ ತಾನೇ ಹೆಣೆದ ಬಲೆಯಲ್ಲಿ ಸಿಕ್ಕಿಬೀಳುತ್ತದೆ ಅನ್ನೋದಕ್ಕೆ ನನ್ನ ತಾಯಿಯ ಈ ಕಥೆಯೇ ಸಾಕ್ಷಿ...