ವಾಣಿಜ್ಯ

ಸಂಬಳಕ್ಕೆ ಹೋಲಿಸಿದರೆ, ಈತ ಅಂಬಾನಿಗಿಂತಲೂ ಮೂರು ಪಟ್ಟು ಶ್ರೀಮಂತ

ನವದೆಹಲಿ: ಭಾರತದ ನಾಲ್ಕನೇ ಅತಿ ದೊಡ್ಡ ಸಾಫ್ಟ್​ವೇರ್​ ಸೇವಾ ಕಂಪನಿಯಾದ ವಿಪ್ರೋದ ನೂತನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಪ್ಯಾರಿಸ್​ ಮೂಲದ ಥಿಯೆರ್ರಿ ಡೆಲಾಪೋರ್ಟೆ ನೇಮಕಗೊಂಡಿದ್ದಾರೆ.

ಆದರೆ, ಇವರ ವಾರ್ಷಿಕ ಸಂಬಳದ ಕಾರಣಕ್ಕೆ ಬಹುದೊಡ್ಡ ಸುದ್ದಿಯಾಗಿದ್ದಾರೆ. ಅಂದಹಾಗೇ ಇವರಿಗೆ ಕಂಪನಿ ಕೊಡುತ್ತಿರುವ ವಾರ್ಷಿಕ ಸಂಬಳ ಬರೋಬ್ಬರಿ 40 ಕೋಟಿ ರೂ.ಗಳಿಗೂ ಅಧಿಕ ಇದಲ್ಲದೇ, ಇನ್ನಷ್ಟು ಮೊತ್ತ ಇವರ ಸಂಬಳದ ಪ್ಯಾಕೇಜ್​ನಲ್ಲಿ ಸೇರಿದೆ. ಹೀಗಾಗಿ, ಭಾರತದಲ್ಲೇ ಅತಿ ಹೆಚ್ಚು ಸಂಬಳ ಪಡೆವ ಸಿಇಒ ಎನಿಸಿದ್ದಾರೆ.

ಈ ಮೊದಲು ಕ್ಯಾಪ್​ ಜೆಮಿನಿ ಕಂಪನಿಯ ಸಿಒಒ ಆಗಿದ್ದ ಡೆಲಾಪೋರ್ಟೆ ವಿಪ್ರೋದ ಸಿಇಒ ಆಗಿ ನೇಮಕಗೊಂಡಿದ್ದಾರೆ. ಇತ್ತೀಚೆಗೆ ನಿವೃತ್ತಗೊಂಡ ಅಬಿದಾಲಿ ನೀಮುಚ್​ವಾಲಾ ಸ್ಥಾನಕ್ಕೆ ಇವರನ್ನು ನೇಮಕಗೊಳಿಸಲಾಗಿದೆ. ಅವರ ಸಂಬಳಕ್ಕೆ ಹೋಲಿಸಿದಲ್ಲಿ, ಡೆಲಾಪೋರ್ಟೆಗೆ ಶೇ.34 ಹೆಚ್ಚು ಸಂಬಳ ನೀಡಲಾಗುತ್ತಿದ್ದು, 2025ರ ಜುಲೈ 5 ವರೆಗೆ ಈ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ಸದ್ಯ ಪ್ಯಾರಿಸ್​ಲ್ಲಿರುವ ಡೆಲಾಪೋರ್ಟ್​, ದೇಶಾಂತರ ವೆಚ್ಚವಾಗಿ ಅಂದಾಜು 4.50 ಕೋಟಿ ಪಡೆಯಲಿದ್ದಾರೆ. ವೆರಿಯೇಬಲ್​ ಪೇ ಮೊತ್ತ 21.2 ಕೋಟಿ ರೂ. ಪಡೆಯಲಿದ್ದಾರೆ. ಇದಲ್ಲದೇ, ಮುಂದಿನ ಒಂದು ವರ್ಷದಲ್ಲಿ ಎರಡು ಕಂತುಗಳಲ್ಲಿ 22.5 ಕೋಟಿ ರೂ. ಇವರಿಗೆ ನೀಡಲಾಗುತ್ತದೆ. ಇದಲ್ಲದೇ. 27 ಕೋಟಿ ರೂ.ಗಳ ಷೇರುಗಳನ್ನು ಒಂದು ವರ್ಷದಲ್ಲಿ ಪಡೆಯಲಿದ್ದಾರೆ. ಇಷ್ಟೊಂದು ವೇತನ ಪಡೆಯುವ ಕೆಲವೇ ಗಣ್ಯರ ಸಾಲಿಗೆ ಡೆಲಾಪೋರ್ಟೆ ಸೇರಿದಂತಾಗಿದೆ.

ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್​ ಅಂಬಾನಿ ವಾರ್ಷಿಕ ಸಂಬಳವನ್ನು 15 ಕೋಟಿ ರೂ.ಗೆ ಮಿತಿಗೊಳಿಸಿಕೊಂಡಿದ್ದಾರೆ. ಅವರಿಗೆ ಹೋಲಿಸಿದಲ್ಲಿ ಡೆಲಾಪೋರ್ಟೆ ಮೂರುಪಟ್ಟು ಶ್ರೀಮಂತರೆನ್ನಬಹುದು.