ನವದೆಹಲಿ: ದೇಶದಲ್ಲಿರುವ ಆರ್ಗಾನಿಕ್ ಹತ್ತಿ ಬೆಳೆಗಾರರಿಗೆ ಒಂದು ಶುಭ ಸುದ್ದಿ. ದೇಶದ ಬ್ಯಾಂಕಿಂಗ್ ಸೆಕ್ಟರ್ನ ಮುಂಚೂಣಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಆರ್ಗಾನಿಕ್ ಹತ್ತಿ ಬೆಳೆಗಾರರಿಗೆ ನೆರವಾಗುವ ದೃಷ್ಟಿಯಿಂದ 'ಸಫಲ್' ಎಂಬ ಸಾಲ ಯೋಜನೆಯನ್ನು ಪರಿಚಯಿಸಲು ಚಿಂತನೆ ನಡೆಸಿದೆ. ಇದುವರೆಗೂ ಸಾಲ ಪಡೆಯದೇ ಇರುವ ಆರ್ಗಾನಿಕ್ ಹತ್ತಿ ಬೆಳೆಗಾರರೇ ಇದರ ಫಲಾನುಭವಿಗಳು.
ಎಸ್ಬಿಐ ಮ್ಯಾನೇಜಿಂಗ್ ಡೈರೆಕ್ಟರ್ ಸಿ.ಎಸ್.ಸೆಟ್ಟಿ ಅವರು ಫಿಕ್ಕಿ ಆಯೋಜಿಸಿದ್ದ ಫಿನ್ಟೆಕ್ ಕಾನ್ಫರೆನ್ಸ್ನಲ್ಲಿ ಮಾತನಾಡುತ್ತ, ವಹಿವಾಟು ಕುದುರಿಸುವುದಕ್ಕಾಗಿ ಬ್ಯಾಂಕ್ ಈಗ ದೊಡ್ಡ ಪ್ರಮಾಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಷಿನ್ ಲರ್ನಿಂಗ್ (ಎಂಎಲ್) ಅನ್ನು ಬಳಸಲಾರಂಭಿಸಿದೆ. ನಾವು ತಥಾ ಕಥಿತ ರಿಟೇಲ್ ಸೆಗ್ಮೆಂಟ್ನಲ್ಲಿ ಸಾಮರ್ಥ್ಯ ಮೀರಿ ಮುನ್ನುಗ್ಗುವುದಕ್ಕೆ ಬಯಸುತ್ತೇವೆ. ಇನ್ನಷ್ಟು ರೈತರನ್ನೂ ತಲುಪಲಿದ್ದೇವೆ. ನಾವು ಈಗ ಕ್ರಾಪ್ ಲೋನ್ ಮಾತ್ರವಲ್ಲ, ಸದ್ಯದಲ್ಲೇ ಸೇಫ್ ಆ್ಯಂಡ್ ಫಾಸ್ಟ್ ಅಗ್ರಿಕಲ್ಚರ್ ಲೋನ್ (ಸಫಲ್) ಅನ್ನು ಶೀಘ್ರವೇ ಪರಿಚಯಿಸಲಿದ್ದೇವೆ ಎಂದು ಹೇಳಿದರು.
ಆರ್ಗಾನಿಕ್ ಹತ್ತಿ ಬೆಳೆಗಾರರನ್ನೆಲ್ಲ ಸಂಘಟಿಸಿರುವಂತಹ ಒಂದು ಕಂಪನಿ ಇದೆ. ಅದು ಒಂದು ಬ್ಲಾಕ್ಚೇನ್ ಡೇಟಾ ಬೇಸ್ ಅನ್ನೂ ರಚಿಸಿಕೊಂಡಿದೆ. ಜಗತ್ತಿನಾದ್ಯಂತ ಇರುವ ಯಾವುದೇ ಖರೀದಿದಾರರೂ ರೈತ ನಿಜವಾಗಿಯೂ ಆರ್ಗಾನಿಕ್ ಹತ್ತಿ ಬೆಳೆಯುತ್ತಿದ್ದಾನೋ ಇಲ್ಲವೋ ಎಂಬುದನ್ನು ಖಾತರಿಪಡಿಸುವಲ್ಲಿ ಈ ಪ್ಲಾಟ್ಫಾರಂ ನೆರವಾಗುತ್ತದೆ ಎಂದು ಸೆಟ್ಟಿ ಹೇಳಿದರು.
ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಷಿನ್ ಲರ್ನಿಂಗ್ (ಎಂಎಲ್) ಅನ್ನು ಬಳಸುವ ಮೂಲಕ ಬ್ಯಾಂಕ್ ಸಾಧಿಸಿದ್ದೇನು ಎಂಬುದನ್ನು ವಿವರಿಸಿದ ಅವರು, ಇದರ ಮೂಲಕ ಲಾಕ್ಡೌನ್ ಅವಧಿಯಲ್ಲಿ ಬ್ಯಾಂಕ್ 1.7 ದಶಲಕ್ಷ ಪ್ರೀ - ಅಪ್ರೂವ್ಡ್ ಲೋನ್ ಬಿಡುಗಡೆ ಮಾಡಿದ್ದು, 21, 000 ಕೋಟಿ ವಹಿವಾಟು ನಡೆಸಿದೆ ಎಂದರು. (ಏಜೆನ್ಸೀಸ್)