ವಾಣಿಜ್ಯ

ಎಸ್​ಬಿಐ ಗ್ರಾಹಕರಿಗೊಂದು ಸಿಹಿ ಸುದ್ದಿ: ಸಾಲದ ದರ 15 ಮೂಲಾಂಶ ಕಡಿತ

chandru

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಗುರುವಾರ ಸಾಲದ ದರದಲ್ಲಿ 15 ಮೂಲಾಂಶ ಕಡಿತಗೊಳಿಸಿರುವುದಾಗಿ ಘೋಷಿಸಿದೆ. ಇದರಂತೆ, ಬ್ಯಾಂಕಿನ ಎಲ್ಲ ರೀತಿ ಸಾಲದ ಮೇಲಿನ ಎಂಸಿಎಲ್​ಆರ್ ದರ 15 ಬಿಪಿಎಸ್​ ಕಡಿಮೆಯಾಗಿದೆ. ಇದು ಮೇ 10 ರಿಂದ ಚಾಲ್ತಿಗೆ ಬರಲಿದೆ ಎಂದು ಬ್ಯಾಂಕ್ ತಿಳಿಸಿದೆ.

ಇದರಂತೆ ಒಂದು ವರ್ಷದ ಎಂಸಿಎಲ್​ಆರ್​ ದರ ಶೇಕಡ 7.4ರಿಂದ ಶೇಕಡ 7.25ಕ್ಕೆ ಇಳಿಕೆಯಾಗಿದೆ. ಇದಕ್ಕೆ ಪೂರಕವಾಗಿ ಗೃಹ ಸಾಲದ ಇಎಂಐಗೆ ಸಂಬಂಧಿಸಿದ ಎಂಸಿಎಲ್​ಆರ್ ಇಳಿಕೆಯಾಗಲಿದೆ. ಉದಾಹರಣೆಗೆ 25 ಲಕ್ಷ ರೂಪಾಯಿಯ ಸಾಲ ಇದ್ದು 30 ವರ್ಷದ ಅವಧಿಯ ಇಎಂಐ ಇದ್ದರೆ ಆಗ ಸಾಲದ ಇಎಂಐ 255 ರೂಪಾಯಿ ಕಡಿಮೆ ಆಗಲಿದೆ.

ಇದೇ ರೀತಿ, ಠೇವಣಿಗಳ ಮೇಲಿನ ಬಡ್ಡಿದರದಲ್ಲೂ ವ್ಯತ್ಯಾಸವಾಗಲಿದ್ದು ಮೂರು ವರ್ಷ ತನಕದ ಬಡ್ಡಿದರ 20 ಬಿಪಿಎಸ್ ಕಡಿಮೆ ಆಗಲಿದೆ. ಇದು ಮೇ 12ರಿಂದ ಚಾಲ್ತಿಗೆ ಬರಲಿದೆ. ಹಿರಿಯ ನಾಗರಿಕರಿಗೆ ಇದರಿಂದ ತೊಂದರೆ ಆಗಬಾರದು ಎಂದು ಹೊಸದಾಗಿ ಎಸ್​ಬಿಐ ವಿಕೇರ್​ ಡೆಪಾಸಿಟ್​ ಅನ್ನು ಪರಿಚಯಿಸಲಾಗುತ್ತಿದೆ. ಇದು ಚಿಲ್ಲರೆ ಅವಧಿ ಠೇವಣಿ ವಿಭಾಗದಲ್ಲಿ ಹೊಸ ಉತ್ಪನ್ನವಾಗಿದೆ. 5 ವರ್ಷ ಮತ್ತು ಮೇಲ್ಪಟ್ಟ ಅವಧಿಯ ಠೇವಣಿಗೆ ಈ ಉತ್ಪನ್ನದಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ 30 ಬಿಪಿಎಸ್​ ಬಡ್ಡಿದರ ಸಿಗಲಿದೆ. ಇದು 2020ರ ಸೆಪ್ಟೆಂಬರ್ 30ರ ತನಕ ಚಾಲ್ತಿಯಲ್ಲಿ ಇರಲಿದೆ. ಉಳಿದಂತೆ ಯಾವುದೇ ವ್ಯತ್ಯಾಸ ಇಲ್ಲ ಎಂದು ಬ್ಯಾಂಕ್ ತಿಳಿಸಿದೆ.