ವಾಣಿಜ್ಯ

70% ಕುಸಿಯಿತಾ ಭಾರತದ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಪ್ರಮಾಣ!!!

ನವದೆಹಲಿ: ಕರೊನಾ ಸೋಂಕು ತಡೆಯುವ ಲಾಕ್​ಡೌನ್​ ಪರಿಣಾಮ ದೇಶದಲ್ಲಿನ ತೈಲ ಮತ್ತು ತೈಲೋತ್ಪನ್ನ ಬಳಕೆ ಸರಿ ಸುಮಾರು ಶೇಕಡ 70 ಕುಸಿತ ಕಂಡಿದೆ ಎನ್ನುತ್ತಿವೆ ಪೆಟ್ರೋಲಿಯಂ ಇಂಡಸ್ಟ್ರಿಯ ಡೇಟಾ. ಆದಾಗ್ಯೂ, ಕಳೆದ 10 ದಿನಗಳ ಅವಧಿಯಲ್ಲಿ ಇಂಧನ ಬಳಕೆಯಲ್ಲಿ ಮತ್ತೆ ಚೇತರಿಕೆ ಕಂಡುಬಂದಿದೆ ಎನ್ನುತ್ತಿವೆ ಇಂಡಸ್ಟ್ರಿ ಮೂಲಗಳು.

ತಾತ್ಕಾಲಿಕ ದತ್ತಾಂಶ ಪ್ರಕಾರ, ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಕಂಪನಿಗಳಲ್ಲಿ ಪೆಟ್ರೋಲ್ ಮಾರಾಟ ಪ್ರಮಾಣ ಏಪ್ರಿಲ್​​ ಮೊದಲ ಅರ್ಧದಲ್ಲಿ ಶೇಕಡ 64 ಕುಸಿತ ಕಂಡರೆ, ಎರಡನೇ ಭಾಗದಲ್ಲೂ ಶೇಕಡ 61 ಕುಸಿತ ಆಗಿತ್ತು. ಇದೇ ರೀತಿ, ಡೀಸೆಲ್ ಮಾರಾಟ ಪ್ರಮಾಣ ಮೊದಲ ಅರ್ಧದಲ್ಲಿ ಶೇಕಡ 56.5 ಕುಸಿತವಾಗಿತ್ತು. ಒಟ್ಟಾರೆಯಾಗಿ ಏಪ್ರಿಲ್ ನಲ್ಲಿ ಪೆಟ್ರೋಲ್ ಮಾರಾಟ ಪ್ರಮಾಣ 8.7 ಲಕ್ಷ ಟನ್​ ಆಗಿದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 2.23 ದಶಲಕ್ಷ ಟನ್​ ಕಡಿಮೆ. ಡೀಸೆಲ್ ಮಾರಾಟ ಪ್ರಮಾಣವೂ ಅಷ್ಟೆ- ಕಳೆದ ವರ್ಷ ಏಪ್ರಿಲ್​ನಲ್ಲಿ 6.56 ದಶಲಕ್ಷ ಟನ್​ ಇದ್ದುದು, ಈ ಏಪ್ರಿಲ್​ನಲ್ಲಿ 2.84 ದಶಲಕ್ಷ ಟನ್ ಮಾರಾಟ ಕಡಿಮೆ ಆಗಿದೆ.

ಇನ್ನು ಏವಿಯೇಷನ್​ ಟರ್ಬೈನ್ ಫ್ಯೂಯೆಲ್​(ಎಟಿಎಫ್​) ಬಳಕ ಶೇಕಡ 91.5 ಇಳಿಕೆಯಾಗಿದೆ. ಬಹುತೇಕ ವಿಮಾನ ಹಾರಾಟ ಸ್ಥಗಿತವಾಗಿರುವುದೇ ಇದಕ್ಕೆ ಕಾರಣ. ಇದೇ ವೇಳೆ, ಅಡುಗೆ ಅನಿಲ ಸಿಲಿಂಡರ್ ಬಳಕೆ ಹೆಚ್ಚಾಗಿದೆ. ಸರ್ಕಾರ ಬಡವರಿಗೆ ಉಚಿತವಾಗಿ ಇದನ್ನು ಪೂರೈಸುತ್ತಿರುವ ಕಾರಣ ಈ ಏರಿಕೆ ಆಗಿದೆ. ಕಳೇದ ವರ್ಷದ ಏಪ್ರಿಲ್​ಗೆ ಹೋಲಿಸಿದರೆ ಈ ವರ್ಷ ಏಪ್ರಿಲ್​ನಲ್ಲಿ ಶೇಕಡ 12 ಹೆಚ್ಚಳ ಕಂಡುಬಂದಿದ್ದು, 2.11 ದಶಲಕ್ಷ ಟನ್ ಬಳಕೆಯಾಗಿದೆ. ಒಟ್ಟಾರೆಯಾಗಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಪ್ರಮಾಣ ಶೇಕಡ 70 ಕುಸಿತ ಕಂಡಿದೆ.

ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚೆಗೆ ಫೇಸ್​ಬುಕ್ ಲೈವ್​ನಲ್ಲಿ ಮಾತನಾಡುತ್ತ, ಜಾಗತಿಕವಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಬಹಳ ಕಡಿಮೆಯಾಗಿದೆ.ಇದು ಹಿಂದೆಂದೂ ಕಂಡರಿಯದ ಮತ್ತು ಕೇಳರಿಯದ ಸನ್ನಿವೇಶ. ಭಾರತದಲ್ಲೂ ಪೆಟ್ರೋಲ್​, ಡೀಸೆಲ್​, ಎಟಿಎಫ್​ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ ಎಂದು ಹೇಳಿದ್ದರು. (ಏಜೆನ್ಸೀಸ್​)