ವಾಣಿಜ್ಯ

ಈರುಳ್ಳಿ ಬೆಲೆ ಏರಿಕೆ ತಡೆಗೆ ಆಮದು ನಿಯಮ ಸಡಿಲು

ನವದೆಹಲಿ: ಈರುಳ್ಳಿ ಬೆಲೆ ಏರಿಕೆ ತಡೆಗಟ್ಟುವ ಸಲುವಾಗಿ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಹೆಚ್ಚಿಸುವುದಕ್ಕಾಗಿ ಕೇಂದ್ರ ಸರ್ಕಾರ ಇಂದು ಆಮದು ನಿಯಮಗಳನ್ನು ಸಡಿಲಗೊಳಿಸಿದೆ. ಈ ಸಡಿಲಿಕೆ ಡಿಸೆಂಬರ್ 15ರ ತನಕ ಮುಂದುವರಿಯಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯ ತಿಳಿಸಿದೆ.

ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಹೆಚ್ಚಾಗಬೇಕು. ಅದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಒಂದು ಅಂದಾಜು ಪ್ರಕಾರ, ಖಾರಿಫ್​ ಬೆಳೆಯ 37 ಲಕ್ಷ ಟನ್ ಈರುಳ್ಳಿ ಶೀಘ್ರವೇ ಮಾರುಕಟ್ಟೆಗೆ ಆಗಮಿಸಲಿದೆ. ಈರುಳ್ಳಿ ಪೂರೈಕೆ ಹೆಚ್ಚಾದರೆ ಬೆಲೆ ಏರಿಕೆಗೆ ಬ್ರೇಕ್​ ಬೀಳಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ.

ಸಚಿವಾಯದ ದತ್ತಾಂಶ ಪ್ರಕಾರ, ಕಳೆದ ಹತ್ತು ದಿನಗಳ ಅವಧಿಯಲ್ಲಿ ಈರುಳ್ಳಿ ಬೆಲೆ ಕಿಲೋ ಮೇಲೆ 11.56 ರೂಪಾಯಿ ಏರಿಕೆ ಆಗಿದ್ದು, 51.95 ರೂಪಾಯಿ ದರದಲ್ಲಿ ಬಿಕರಿಯಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈರುಳ್ಳಿ ಬೆಲೆ 46.33 ರೂಪಾಯಿ ಇತ್ತು.

ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಈರುಳ್ಳಿ ಬೆಲೆಯು ಆಗಸ್ಟ್ ತಿಂಗಳ ಅಂತ್ಯದಿಂದ ಏರಿಕೆ ಕಾಣಲಾರಂಭಿಸಿದೆ. ಸದ್ಯದ ಬೆಲೆ ಏರಿಕೆಗೆ ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶದ ಈರುಳ್ಳಿ ಬೆಳೆಯುವ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಈರುಳ್ಳಿ ಬೆಳೆ ನಷ್ಟವಾಗಿದ್ದೂ ಕಾರಣ ಎಂದು ಸಚಿವಾಲಯ ಹೇಳಿದೆ. (ಏಜೆನ್ಸೀಸ್)