ನವದೆಹಲಿ: ಮುಂದಿನ ವರ್ಷ ಮಾರ್ಚ್ 31ರೊಳಗೆ ಎಲ್ಲ ಖಾತೆಗಳೂ ಆಧಾರ್ ಜತೆಗೆ ಲಿಂಕ್ ಆಗಿರಬೇಕು. ಇದನ್ನು ಖಾತರಿಗೊಳಿಸುವ ಹೊಣೆಗಾರಿಕೆ ಬ್ಯಾಂಕುಗಳದ್ದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ. ಅವರು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ)ನ 73ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದರು.
ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಖಾತೆಗಳಿಗೆ ಒಂದು ಪ್ಯಾನ್ ನಂಬರ್ ಕೂಡ ಇರಬೇಕು. ಪ್ರತಿಯೊಬ್ಬರ ಬ್ಯಾಂಕ್ ಖಾತೆ ಕೂಡ ಆಧಾರ್ ಜತೆಗೆ ಲಿಂಕ್ ಆಗಿರಬೇಕು. ಇದನ್ನು 2021ರ ಮಾರ್ಚ್ 31ರ ಒಳಗೆ ಪೂರ್ಣಗೊಳಿಸಿ ಖಾತರಿಪಡಿಸಿಕೊಳ್ಳಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ನಗದು ಅಥವಾ ಇನ್ಯಾವುದೇ ರೀತಿಯಲ್ಲಿ ಡಿಜಿಟಲೇತರ ಪಾವತಿಯನ್ನು ಪ್ರೋತ್ಸಾಹಿಸಬೇಡಿ. ಬ್ಯಾಂಕ್ಗಳು ಕೂಡ ಡಿಜಿಟಲ್ ಪಾವತಿಯ ತಂತ್ರಗಳನ್ನು ಅನ್ವಯಿಸಿಕೊಂಡು ಅವುಗಳ ಬಳಕೆಗೆ ಗ್ರಾಹಕರನ್ನು ಉತ್ತೇಜಿಸಬೇಕು. ಯುಪಿಐ ಚಾಲಿತ ಪಾವತಿ ವ್ಯವಸ್ಥೆಯೂ ಈಗಾಗಲೇ ಸಾಕಷ್ಟು ಬಳಕೆಯಲ್ಲಿದೆ. ಇದು ನಮ್ಮೆಲ್ಲ ಬ್ಯಾಂಕುಗಳ ಸಾಮಾನ್ಯ ವ್ಯವಹಾರ ವೇದಿಕೆಯಾಗಬೇಕು. ಬ್ಯಾಂಕುಗಳು ರುಪೇ ಕಾರ್ಡ್ಗಳನ್ನು ಮಾತ್ರವೇ ಉತ್ತೇಜಿಸಬೇಕು ಎಂದು ಅವರು ಹೇಳಿದರು. (ಏಜೆನ್ಸೀಸ್)