ಬೆಂಗಳೂರು: ಇ-ಸರಕು ಸಾಗಾಣಿಕೆ ಮಾಡುವ ಸಾರಿಗೆ ಕಂಪನಿಗಳ ಅಕ್ರಮಗಳನ್ನು ಪತ್ತೆ ಹಚ್ಚಿ ದಂಡ ವಿಧಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ. ಶನಿವಾರ ವಾಣಿಜ್ಯ ತೆರಿಗೆ ಅಧಿಕಾರಿಗಳ ಸಭೆ ನಡೆಸಿ, ರಾಜ್ಯದ ತೆರಿಗೆ ಸಂಗ್ರಹ ಸ್ಥಿತಿಗತಿಯನ್ನು ಪರಿಶೀಲಿಸಿದರು. 40 ಲಕ್ಷ ರೂ.ಗಳಿಗೂ ಹೆಚ್ಚಿನ ವ್ಯವಹಾರ ಇರುವ ಡೀಲರ್ಗಳ ಸಮೀಕ್ಷೆ ನಡೆಸುವಂತೆ ಹಾಗೂ ಮಾಸಿಕ 20 ಲಕ್ಷ ರೂ. ಗಳಿಗೆ ಹೆಚ್ಚು ಬಾಡಿಗೆ ಸಂಗ್ರಹಿಸುವ ದೊಡ್ಡ ನಗರಗಳ ವಾಣಿಜ್ಯ ಸಂಕೀರ್ಣಗಳ ಸಮೀಕ್ಷೆ ನಡೆಸುವಂತೆ ನಿರ್ದೇಶನ ಅಧಿಕಾರಿಗಳಿಗೆ ನೀಡಿದರು.
ರಾಜ್ಯದಲ್ಲಿ ರಸ್ತೆ ಜಾಗೃತಿ ತಂಡಗಳನ್ನು 77ರಿಂದ 116ಕ್ಕೆ ಹೆಚ್ಚಿಸಲಾಗಿದೆ. ಈ ತಂಡಗಳು 2.89 ಲಕ್ಷ ಸರಕು ವಾಹನಗಳು ಹಾಗೂ 7.46 ಲಕ್ಷ ಇ-ವೇ ಬಿಲ್ಗಳನ್ನು ಪರಿಶೀಲಿಸಿದ್ದು, ಸುಮಾರು 300 ಅಕ್ರಮಗಳು ಪತ್ತೆಯಾಗಿದ್ದು, 6.21 ಕೋಟಿ ರೂ. ತೆರಿಗೆ ಹಾಗೂ ದಂಡ ಸಂಗ್ರಹಣೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ 2019-20ನೇ ಸಾಲಿನ ಡಿಸೆಂಬರ್ನಿಂದ ಫೆಬ್ರುವರಿವರೆಗಿನ ಜಿಎಸ್ಟಿ ಪರಿಹಾರ 4,314.13 ಕೋಟಿ ರೂ. ಬಿಡುಗಡೆ ಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಇತರರಿದ್ದರು.