ಸಿನಿವಾಣಿ

ರಾಷ್ಟ್ರಮಟ್ಟದಲ್ಲಿ ರೈತರ ಡೇಟಾ ಬೇಸ್ ರಚನೆ; ಕೃಷಿ ಸಚಿವ ಮಾಹಿತಿ..

ನವದೆಹಲಿ: ಜಮೀನಿನ ಡಿಜಿಟಲ್ ದಾಖಲೆಗಳನ್ನು ಆಧರಿಸಿ ರಾಷ್ಟ್ರಮಟ್ಟದಲ್ಲಿ ರೈತರ ಡೇಟಾ ಬೇಸ್ ರಚಿಸುವ ಕಾರ್ಯ ಆರಂಭವಾಗಿದೆ. ಇದರಿಂದ ಅವಶ್ಯಕತೆ ಇರುವ ರೈತರಿಗೆ ವೈಯಕ್ತಿಕ ನೆಲೆಗಟ್ಟಿನಲ್ಲಿ ನೆರವು ದೊರೆಯಲು ಸಹಾಯವಾಗುತ್ತದೆ. ಜತೆಗೆ ಸರ್ಕಾರಕ್ಕೆ ಕೃಷಿಕರಿಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಲು ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಅನುಕೂಲ ಆಗುತ್ತದೆ. ರೈತರ ಆದಾಯ ಹೆಚ್ಚಳಕ್ಕೂ ಅವಕಾಶವಾಗುತ್ತದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಗಳವಾರ ಲೋಕಸಭೆಗೆ ತಿಳಿಸಿದರು.

ಈ ಡೇಟಾ ಬೇಸ್ ರಚನೆಯ ಸಂಬಂಧದ ಕಾರ್ಯಗಳನ್ನು ಕೃಷಿ ಸಚಿವಾಲಯ ಈಗಾಗಲೇ ಆರಂಭಿಸಿದ್ದು, ಇದಕ್ಕೆ ಇದಕ್ಕೆ ‘ಅಗ್ರಿಸ್ಟಾಕ್’ ಎಂದು ಹೆಸರಿಸಿದೆ. ಇದು ಕೃಷಿಯ ಇಕೋವ್ಯವಸ್ಥೆಯ ಡಿಜಿಟಲ್ ಸ್ವರೂಪವಾಗಿದೆ. ಇದರ ಒಟ್ಟಾರೆ ಆಶಯ ಕೃಷಿ ವಲಯದ ಕಾರ್ಯಕ್ಷಮತೆ ಹೆಚ್ಚುಸುವುದಾಗಿದೆ ಎಂದು ಲಿಖಿತ ಉತ್ತರ ನೀಡಿದರು. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಸಂಘಟಿತರಾಗಿರುವ ರೈತರ ಮಾಹಿತಿಯನ್ನು ಗ್ರಾಮ, ಜಿಲ್ಲಾ ಮಟ್ಟದಲ್ಲಿ ಕ್ರೋಡೀಕರಿಸಿ, ದಾಖಲಿಸಲಾಗುತ್ತಿದೆ. ಇದರಲ್ಲಿ ಯಾವುದೇ ಖಾಸಗಿ ವಲಯ ನೇರವಾಗಿ ಭಾಗಿಯಾಗಿಲ್ಲ. ಪರಿಕಲ್ಪನೆಯ ಪುರಾವೆ (ಪ್ರೂಫ್ ಆಫ್ ಕಾನ್ಸೆಪ್ಟ್) ಅಭಿವೃದ್ಧಿ ಪಡಿಸಲು ತಾಂತ್ರಿಕ, ಕೃಷಿ ತಂತ್ರಜ್ಞಾನದ ಮತ್ತು ಸ್ಟಾರ್ಟಪ್​ಗಳ ನೆರವನ್ನು ಕೋರಲಾಗಿದೆ ಎಂದರು.

ಮಳೆಗೆ 2 ಲಕ್ಷ ಹೇಕ್ಟರ್​ನಲ್ಲಿ ಹಾನಿ: ಈ ವರ್ಷದಲ್ಲಿ ಈವರೆಗೆ ಮಳೆ ಮತ್ತು ನೆರೆ ಹಾವಳಿಯಿಂದ 2 ಲಕ್ಷ ಹೆಕ್ಟೇರ್​ಗೂ ಹೆಚ್ಚು ಜಮೀನಿನಲ್ಲಿ ಬೆಳೆಗಳು ಹಾಳಾಗಿವೆ. ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಒಡಿಶಾ, ಗೋವಾದಲ್ಲಿ ಹೆಚ್ಚು ನಷ್ಟ ಸಂಭವಿಸಿದೆ. 2020-21ರಲ್ಲಿ 66.55 ಲಕ್ಷ ಹೆಕ್ಟೇರ್​ನಲ್ಲಿ ಬೆಳೆ ಹಾನಿ ಆಗಿತ್ತು ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ. ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ನಾಟಿ ಕಾರ್ಯ ಚುರುಕುಗೊಂಡಿದ್ದು, ಭತ್ತ ಬೆಳೆಯುವ ರಾಜ್ಯಗಳಲ್ಲಿ ಬಿತ್ತನೆ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಅತಿ ಸಣ್ಣ ಮತ್ತು ಸಣ್ಣ ರೈತರಿಗೆ ಪಿಂಚಣಿ ನೀಡುವ ಪಿಎಂ-ಕಿಸಾನ್ ಮಾನಧನ ಯೋಜನೆಯಲ್ಲಿ 21.40 ಲಕ್ಷ ರೈತರು ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದೆ.