ನವದೆಹಲಿ: ಸ್ಯಾಂಡಲ್ವುಡ್ನಲ್ಲಿ ಮಳೆಯಲಿ ಜೊತೆಯಲಿ ಸಿನಿಮಾ ಮೂಲಕ ಚಂದನವನಕ್ಕೆ ಬಂದು ಕನ್ನಡಿಗರ ಹೃದಯ ಕದ್ದಿದ್ದ ಚೆಲುವೆ ಯುವಿಕಾ ಚೌಧರಿ ವಿರುದ್ಧ ಇದೀಗ ಹರಿಯಾಣದಲ್ಲಿ ಎಫ್ಐಆರ್ ದಾಖಲಾಗಿದೆ. ದಲಿತ ಸಮುದಾಯದ ವಿರುದ್ಧ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೇಚಿಗೆ ಸಿಲುಕಿದ್ದಾರೆ.
ತುಚ್ಯವಾಗಿ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪದಡಿ ದಲಿತ ಹಕ್ಕುಗಳ ಹೋರಾಟಗಾರ ರಜತ್ ಕಲ್ಸನ್ ಎಂಬುವವರು ಹರಿಯಾಣದ ಹಾನ್ಸಿ ಠಾಣೆಯಲ್ಲಿ ವಿಡಿಯೋ ಸಮೇತ ಹಾಜರುಪಡಿಸಿ ದೂರು ನೀಡಿದ್ದು, ದೂರಿನನ್ವಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿತಾ ಅಹ್ಲವತ್ ಯುವಿಕಾ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಕಳೆದ ನಾಲ್ಕು ದಿನದ ಹಿಂದಷ್ಟೇ ಯುವಿಕಾ ತಮ್ಮ ಮನೆಯಲ್ಲಿಯೇ ಪತಿಯೊಂದಿಗೆ ಹೇರ್ ಕಟ್ ಮಾಡುವ ವೇಳೆ ವಿಡಿಯೋ ಚಿತ್ರೀಕರಿಸಲಾಗಿತ್ತು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅರೆಸ್ಟ್ ಯುವಿಕಾ ಎಂಬ ಅಭಿಯಾನ ಆರಂಭವಾಗಿತ್ತು. ಕೆಳಜಾತಿ ಎಂದು ದೂರಿದ್ದಲ್ಲದೆ, ಯುವಿಕಾ ಬಳಸಿದ ಭಾಷೆಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದರು. ಬಂಧಿಸುವಂತೆಯೂ ಆಗ್ರಹಿಸಿದ್ದರು. ಅದರಂತೆ ಇದೀಗ ಹರಿಯಾಣದಲ್ಲಿ ಅವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಬಳಸಿದ ಭಾಷೆಯ ಅರ್ಥ ನನಗೆ ಗೊತ್ತಿರಲಿಲ್ಲ ಎಂದು ಕ್ಷಮೆ ಕೇಳಿದ್ದರಾದರೂ ಅವರ ವಿರುದ್ಧವೇ ಜನ ತಿರುಗಿ ಬಿದ್ದಿದ್ದರು. ಬಾಲಿವುಡ್ನಲ್ಲಿ ಓಂ ಶಾಂತಿ ಓಂ ಚಿತ್ರದ ಮೂಲಕ ಸಿನಿಮಾಕ್ಕೆ ಎಂಟ್ರಿ ಪಡೆದಿದ್ದ ಯುವಿಕಾ, ಅದಾದ ಬಳಿಕ ಕನ್ನಡ, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ಸಿನಿಮಾ ಮಾಡಿದ್ದರು.