ಸಿನಿವಾಣಿ

'ಯುವರತ್ನ' ಚಿತ್ರೀಕರಣ ಮುಕ್ತಾಯ; ರಿಲೀಸ್​ ಯಾವಾಗ ಗೊತ್ತ?

manjunathktgns

ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜಕುಮಾರ್ ನಾಯಕತ್ವದ ಯುವರತ್ನ ಚಿತ್ರದ ಬಗ್ಗೆ ಹೊಸ ಅಪ್​ಡೇಟ್ ಮಾಹಿತಿಯೊಂದು ಇದೀಗ ಲಭ್ಯವಾಗಿದೆ. ಹಾಗಂತ ಸಿನಿಮಾ ತಂಡ ಹೊಸ ಟೀಸರ್ ಏನಾದ್ರೂ ಬಿಡುಗಡೆ ಮಾಡುತ್ತ ಎಂದುಕೊಳ್ಳಬೇಡಿ. ಬದಲಿಗೆ ಯುವರತ್ನ ಚಿತ್ರದ ಶೂಟಿಂಗ್​ ಮುಕ್ತಾಯವಾಗಿದೆ.

ಮಾತಿನ ಭಾಗದ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ‘ಯುವರತ್ನ’ ಚಿತ್ರತಂಡ ಎರಡು ಹಾಡಿನ ಶೂಟಿಂಗ್ ಮಾತ್ರ ಬಾಕಿ ಉಳಿಸಿಕೊಂಡಿತ್ತು. ಇದೀಗ ಆರೂವರೆ ತಿಂಗಳ ಬಳಿಕ ಸಿನಿಮಾ ಕೆಲಸಗಳಲ್ಲಿ ತಂಡ ಭಾಗಿಯಾಗಿ, ಬಾಕಿ ಕೆಲಸಗಳನ್ನು ಮುಗಿಸಿಕೊಂಡಿದೆ.

ಇಂಟ್ರೋಡಕ್ಷನ್​ ಹಾಡಿನ ಸಲುವಾಗಿ ಕಂಠೀರವ ಸ್ಟುಡಿಯೋದಲ್ಲಿ ಸೆಟ್​ ಹಾಕಲಾಗಿತ್ತು. ಬಳಿಕ ರೊಮ್ಯಾಂಟಿಕ್​ ಹಾಡೊಂದರ ಶೂಟಿಂಗ್​ ಸಲುವಾಗಿ ಗೋವಾಕ್ಕೆ ಹಾರಿತ್ತು. ಇದೀಗ ಕುಂಬಳಕಾಯಿ ಒಡೆದುಕೊಂಡು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಚಾಲನೆ ನೀಡಿದೆ. ಹಾಗಾದರೆ ಬಿಡುಗಡೆ ಯಾವಾಗ? ಸದ್ಯದ ಮಾಹಿತಿ ಪ್ರಕಾರ, ಕ್ರಿಸ್​ಮಸ್​ಗೆ ಯುವರತ್ನ ಬಿಡುಗಡೆ ಆಗಲಿದೆ ಎಂಬ ಮಾತಿದೆ. ಇನ್ನಷ್ಟೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಈ ಮೊದಲು ನಿರ್ಧಾರವಾದಂತೆ ಕಳೆದ ವರ್ಷದ ಕ್ರಿಸ್​ಮಸ್​ಗೆ ಯುವರತ್ನ ಬಿಡುಗಡೆ ಆಗಬೇಕಿತ್ತು. ಬಳಿಕ ಮೇ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಆ ಲೆಕ್ಕಾಚಾರ ಎಲ್ಲವೂ ತಲೆಕೆಳಗಾಯಿತು.

ಅಂದಹಾಗೆ, ‘ಯುವರತ್ನ’ ಚಿತ್ರದಲ್ಲಿ ಪುನೀತ್​ ಜತೆಗೆ ಸಾಯೇಷಾ ಸೆಹಗಲ್​, ದಿಗಂತ್, ಸೋನು ಗೌಡ, ಧನಂಜಯ್​ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಕಥೆ-ಚಿತ್ರಕಥೆ ಜತೆಗೆ ಸಂಭಾಷಣೆ ರಚಿಸಿ ನಿರ್ದೇಶನ ಮಾಡುತ್ತಿರುವುದು ಸಂತೋಷ್​ ಆನಂದರಾಮ್​. ಈ ಹಿಂದೆ ಪುನೀತ್​ ಅಭಿನಯದಲ್ಲಿ ‘ರಾಜ್​ಕುಮಾರ’ ಮತ್ತು ‘ನಿನ್ನಿಂದಲೇ’ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.