

ಬೆಂಗಳೂರು: ಟಾಲಿವುಡ್ನಲ್ಲಿ ಸದ್ಯ ಬಯೋಪಿಕ್ಗಳು ಸದ್ದು ಮಾಡುತ್ತಿವೆ. ಒಂದಾದ ನಂತರ ಒಂದು ಸುದ್ದಿಯಲ್ಲಿವೆ. ಜಯಲಲಿತಾ, ಕರಣಂ ಮಲ್ಲೇಶ್ವರಿ, ಪುಲ್ಲೇಲ ಗೋಪಿಚಂದ್ ಅವರ ಬಯೋಪಿಕ್ಗೆ ತಯಾರಿ ನಡೆಯುತ್ತಿದೆ. ಇವೆಲ್ಲದರ ಜತೆಗೆ 90ರ ದಶಕದಲ್ಲಿ ಮನೆಮಾತಾಗಿದ್ದ ಕನ್ನಡತಿ ಸೌಂದರ್ಯ ಕುರಿತು ಬಯೋಪಿಕ್ ಮಾಡುವುದಕ್ಕೂ ನಿರ್ವಪಕರು ಮುಂದೆ ಬಂದಿದ್ದಾರೆ.
90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ನಟಿ ಸೌಂದರ್ಯ, 2004ರ ವಿಮಾನ ದುರಂತದಲ್ಲಿ ಇಹಲೋಕ ತ್ಯಜಿಸಿದ್ದರು. ಇತ್ತೀಚಿನ ಕೆಲ ವರ್ಷಗಳಲ್ಲಿ ಸೌಂದರ್ಯ ಅವರ ಜೀವನವನ್ನು ಮೂಲವಾಗಿಟ್ಟುಕೊಂಡು ಸಿನಿಮಾ ಮಾಡುವ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಸೌಂದರ್ಯ ಪಾತ್ರ ಮಾಡುವವರು ಯಾರು ಎಂಬ ಪ್ರಶ್ನೆಯೂ ಎದುರಾಗಿತ್ತು. ಇದೀಗ ಅವೆಲ್ಲದಕ್ಕೂ ಉತ್ತರ ಸಿಕ್ಕಿದೆ.
ಟಾಲಿವುಡ್ನ ಮೂಲಗಳ ಪ್ರಕಾರ ಸೌಂದರ್ಯ ಬಯೋಪಿಕ್ನಲ್ಲಿ ಸಾಯಿಪಲ್ಲವಿ ನಟಿಸುವ ಸಾಧ್ಯತೆಗಳಿವೆ. ಈಗಾಗಲೇ ಸಿನಿಮಾ ತಂಡ ಸಾಯಿಪಲ್ಲವಿ ಜತೆಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದೆ ಎಂದೇ ಹೇಳಲಾಗುತ್ತಿದೆ. ಆದರೆ, ಇನ್ನಷ್ಟೇ ಆ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಹಲವು ಸಿನಿಮಾಗಳಿಗೆ ಸಹಿ ಮಾಡಿರುವ ಸಾಯಿಪಲ್ಲವಿ, ಸದ್ಯ ‘ಲವ್ಸ್ಟೋರಿ’ ಸಿನಿಮಾದ ಶೂಟಿಂಗ್ನಲ್ಲಿದ್ದಾರೆ. ಇದರ ಜತೆಗೆ ತಮಿಳಿನ ‘ವೇದಾಳಂ’ ಚಿತ್ರ ತೆಲುಗಿನಲ್ಲಿ ರಿಮೇಕ್ ಆಗುತ್ತಿದ್ದು, ಚಿರಂಜೀವಿ ನಾಯಕನಾಗಿ ನಟಿಸಲಿದ್ದಾರೆ. ವಿಶೇಷ ಎಂಬಂತೆ ಆ ಚಿತ್ರದಲ್ಲಿ ಚಿರಂಜೀವಿಗೆ ತಂಗಿಯಾಗಿ ಸಾಯಿಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. -ಏಜೆನ್ಸೀಸ್