ಸಿನಿವಾಣಿ

ನಿಮಗಾದ ನೋವಿಗೆ ಕ್ಷಮೆಯಾಚಿಸುತ್ತೇನೆ: ಯುವ ಪತ್ನಿ ಶ್ರೀದೇವಿ ಭೈರಪ್ಪ ಭಾವುಕ, ಏನಾಯ್ತು ಡಿವೋರ್ಸ್​ ಕೇಸ್​?

ಬೆಂಗಳೂರು: ದೊಡ್ಮನೆ ಕುಡಿ ನಟ ಯುವ ರಾಜ್​ಕುಮಾರ್​ ತಮ್ಮ ಪತ್ನಿ ಶ್ರೀದೇವಿ ಭೈರಪ್ಪರಿಂದ ಡಿವೋರ್ಸ್​ ಕೋರಿ ಕೋರ್ಟ್​ ಮೆಟ್ಟಿಲೇರಿರುವ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಇಂದು (ಜುಲೈ 04) ಡಿವೋರ್ಸ್​ ಅರ್ಜಿ ವಿಚಾರಣೆ ನಡೆಯಲಿದೆ. ಇದಕ್ಕೂ ಮುನ್ನ ಶ್ರೀದೇವಿ ಹಂಚಿಕೊಂಡಿರುವ ಇನ್​ಸ್ಟಾಗ್ರಾಂ ಸ್ಟೋರಿ ಇದೀಗ ಎಲ್ಲರ ಗಮನ ಸೆಳೆದಿದೆ.

ಇನ್​ಸ್ಟಾ ಸ್ಟೋರಿಯಲ್ಲಿ ಏನಿದೆ?

ಕಳೆದ 15 ದಿನದಿಂದ ನಾನು ಕರ್ನಾಟಕದಲ್ಲಿ ನನ್ನ ಕುಟುಂಬದ ಜೊತೆ ಇದ್ದಾಗ, ನನ್ನ ಖಾಸಗಿ ಬದುಕನ್ನು ಗೌರವಿಸಿ, ನನ್ನ ಘನತೆಯನ್ನು ಕಾಪಾಡುವಲ್ಲಿ, ಅತ್ಯಂತ ಸೂಕ್ಷ್ಮ ಮತ್ತು ಜವಾಬ್ದಾರಿಯುತ ನಡೆ ತೋರಿದ ಮಾಧ್ಯಮದ ಪ್ರತಿಯೊಬ್ಬರಿಗೂ ನಾನು ಪ್ರಾಮಾಣಿಕವಾಗಿ ನನ್ನ ಹೃದಯಾಂತರಾಳದಿಂದ ಧನ್ಯವಾದ ಹೇಳಲು ಬಯಸುತ್ತೇನೆ. ಕಳೆದ ದಶಕಗಳಿಂದ ನನ್ನ ಜೊತೆಯಾಗಿದ್ದ ನನ್ನ ಸ್ನೇಹಿತರ ಬಳಗ, ಕೆಲವು ದಿನಗಳ ಹಿಂದಿನ ಸುಳ್ಳಿನ ಸರಮಾಲೆಗೆ ಬಲಿಯಾದದ್ದು ತೀರ ದುರದೃಷ್ಟಕರ. ಆದರೂ ಸಹ, ನಿಮ್ಮ ತಾಳ್ಮೆಗೆ, ಸತ್ಯದ ಪರ ಧೃತಿಗೆಡದೆ ನಿಲ್ಲುವ ನಿಮ್ಮ ಹಾಗೂ ನಿಮ್ಮ ಕುಟುಂಬದ ಧೈರ್ಯಕ್ಕೆ, ಸಹಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಈ ವಿಚಾರದಲ್ಲಿ ನಿಮಗಾದ ನೋವಿಗೆ ನಾನು ವಿನಮ್ರತೆಯಿಂದ ಕ್ಷಮೆಯಾಚಿಸುತ್ತೇನೆ. ಎಲ್ಲರಿಗೂ ನಿಮ್ಮಂಥ ಸಹೃದಯಿ ಸ್ನೇಹ ಬಳಗ ಸಿಗುವ ಅದೃಷ್ಟ ಸಿಗಲಿ ಎಂದು ಹಾರೈಸುತ್ತೇನೆ.

ಕಳೆದ ಏಳು ತಿಂಗಳುಗಳು ತೀವ್ರ ಒತ್ತಡ ಮತ್ತು ಆಘಾತದಿಂದ ಕೂಡಿದ್ದವು. ನನ್ನೊಂದಿಗೆ ಶಕ್ತಿಯಾಗಿ ನಿಂತ ನನ್ನ ಕುಟುಂಬ, ಸ್ನೇಹಿತರು, ಚಲನಚಿತ್ರರಂಗದ ಬಂಧುಗಳು, ಅನ್ಯಾಯದ ವಿರುದ್ಧ ದನಿಯೆತ್ತಿ ನನ್ನ ಪರ ನಿಂತ ಪ್ರತಿಯೊಬ್ಬರಿಗೂ, ವಿಶೇಷವಾಗಿ ನನ್ನೊಂದಿಗೆ ದುಃಖಿಸಿ ಸಾಂತ್ವಾನ ಹೇಳಿದ ನನ್ನ ವಿದ್ಯಾರ್ಥಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ಶಕ್ತಿಯನ್ನು ಮರಳಿ ಪಡೆಯಲು ಮತ್ತು ನ್ಯಾಯದ ಪರ ಹೋರಾಡಲು ನೀವೆಲ್ಲರೂ ನನಗೆ ಸಹಾಯ ಮಾಡಿದ್ದೀರಿ. ನಿಮ್ಮ ಪ್ರೀತಿ, ದಯೆಯ ಋಣ ತೀರಿಸುವ ಅವಕಾಶ ನನಗೆ ಸಿಗಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ ಹಾಗೂ ಅದಕ್ಕಾಗಿ ಹೋರಾಡುತ್ತೇನೆ ಎಂದು ನಾನು ಪುನರುಚ್ಚರಿಸುತ್ತೇನೆ. ನನ್ನ ಮೇಲೆ ಮಾಡಿರುವ ಪ್ರತಿಯೊಂದು ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೆ ನನ್ನ ದಾರಿಗೆ ಏನೇ ಎದುರಾದರೂ ಹೆದರುವುದಿಲ್ಲ. ಹಾರ್ವರ್ಡ್​​ನಲ್ಲಿ ನಾನೊಂದು ಶೈಕ್ಷಣಿಕ ಯೋಜನೆಯನ್ನು ಶುರುಮಾಡಿದ್ದು, ಆ ಕಾಯಕವನ್ನು ಮುಂದುವರಿಸಲು ನಾನು ಅಮೆರಿಕಗೆ ಹಿಂತಿರುಗುತ್ತಿದ್ದೇನೆ. ಈ ಸಮಯವು, ನನಗೆ ಇನ್ನಷ್ಟು ಕಲಿಯಲು, ಬೆಳೆಯಲು ಮತ್ತು ಎಲ್ಲಾ ಆಘಾತಗಳಿಂದ ಗುಣಮುಖಳಾಗಲು ಸಹಾಯ ಮಾಡುತ್ತದೆ ಎಂದು ನಾನು ನಂಬಿದ್ದೇನೆ. ಸರಿಯಾದ ಸಮಯ ಬಂದಾಗ ನಾನು ಹಿಂದಿರುಗುತ್ತೇನೆ ಮತ್ತು ಇಲ್ಲಿನ ಕೆಲಸಗಳನ್ನು ಮುಂದುವರಿಸುತ್ತೇನೆ. ದೇವರ ಆಶೀರ್ವಾದ ಸದಾ ಎಲ್ಲರ ಮೇಲೆ ಇರಲಿ ಎಂದು ಶ್ರೀದೇವಿ ಬರೆದುಕೊಂಡಿದ್ದಾರೆ.

ಏನಾಯ್ತು ಡಿವೋರ್ಸ್​ ಕೇಸ್​?

ಯುವರಾಜ್​ಕುಮಾರ್​ ಮತ್ತು ಶ್ರೀದೇವಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಎಂಸಿ ಆ್ಯಕ್ಟ್​ ಸೆಕ್ಷನ್ 13(1)(ia) ಅಡಿಯಲ್ಲಿ ಯುವ ರಾಜ್‌ಕುಮಾರ್ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇಂದು ವಿಚಾರಣೆ ನಿಗದಿಯಾಗಿದೆ. ಆದರೆ, ಶ್ರೀದೇವಿ ಮತ್ತೆ ಅಮೆರಿಕಕ್ಕೆ ಹಿಂದಿರುಗಿದ್ದು, ಡಿವೋರ್ಸ್​ ಕೇಸ್​ ಏನಾಯ್ತು ಎಂಬ ಪ್ರಶ್ನೆ ಉದ್ಬವವಾಗಿದೆ. ಇಂದು ವಿಚಾರಣೆ ನಡೆಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಅಂದಹಾಗೆ 2019ರಲ್ಲಿ ಯುವ ಮತ್ತು ಶ್ರೀದೇವಿ ಪ್ರೀತಿಸಿ ಮದುವೆಯಾಗಿದ್ದರು. ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು. ಯುವರಾಜ್​ ಕುಮಾರ್​ ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಡಿವೋರ್ಸ್‌ ಪಡೆದುಕೊಳ್ಳಲು ಮುಂದಾಗಿದ್ದಾರೆ. ಶ್ರೀದೇವಿ ಅವರು ರಾಜ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು. ಮೈಸೂರು ಮೂಲದ ಹುಡುಗಿ ಶ್ರೀದೇವಿಯನ್ನ ವರಿಸಿದ್ದ ಯುವ, ಇದೀಗ ಪತ್ನಿಗೆ ಡಿವೋರ್ಸ್ ನೋಟಿಸ್‌ ಕೊಟ್ಟಿದ್ದಾರೆ. ಸದ್ಯಕ್ಕೆ ಅಮೆರಿಕದಲ್ಲಿ ಶ್ರೀದೇವಿ ನೆಲೆಸಿದ್ದಾರೆ. ಶಾಂತಿನಗರ ಫ್ಯಾಮಿಲಿ ಕೋರ್ಟ್‌ನಲ್ಲಿ ಜೂನ್​ 6ರಂದು ಯುವರಾಜ್​ಕುಮಾರ್​ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು.