ಸಿನಿವಾಣಿ

'ಬೊಂಬೆ ಹೇಳುತೈತೆ' ಎಂಬ ಒಂದೇ ಪಾತ್ರದ ಚಿತ್ರ ...

ಬೆಂಗಳೂರು: ಪತ್ರಕರ್ತರಾಗಿ, ಕಲಾವಿದರಾಗಿ ಪರಿಚಿತರಾಗಿದ್ದ ಯತಿರಾಜ್ ಈಗ ನಿರ್ದೇಶಕರಾಗಿ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ನಿರ್ದೇಶನದ 'ಸೀತಮ್ಮನ ಮಗ' ಎಂಬ ಚಿತ್ರ ಬಿಡುಗಡೆಯಾಗಿತ್ತು. 'ಮಾಯಾಮೃಗ' ಎಂಬ ಚಿತ್ರ ಬಿಡುಗಡೆಯ ಹಂತದಲ್ಲಿದೆ. ಇದೀಗ ಅವರ ಮೂರನೇ ಚಿತ್ರ 'ಬೊಂಬೆ ಹೇಳುತೈತೆ' ಸದ್ಯದಲ್ಲೇ ಆರಂಭವಾಗಲಿದೆ.

'ರಾಜ್​ಕುಮಾರ' ಚಿತ್ರದ 'ಬೊಂಬೆ ಹೇಳುತೈತೆ ... ಹಾಡಿನಿಂದ ಸ್ಫೂರ್ತಿಗೊಂಡಿರುವ ಈ ಚಿತ್ರದ ವಿಶೇಷತೆಯೆಂದರೆ, ಪುನೀತ್ ರಾಜ್‍ಕುಮಾರ್ ಅವರ ಪುತ್ಥಳಿಯ ಮೂಲಕ ಸಮಾಜಕ್ಕೆ ಸಂದೇಶ ಸಾರಲಾಗುತ್ತಿದೆ. ಕೇವಲ 15 ದಿನಗಳಲ್ಲಿ ಈ ಚಿತ್ರಕ್ಕೆ ಚಾಲನೆ ದೊರಕಿದೆ. ಕೆಲವು ದಿನಗಳ ಹಿಂದೆ ಯತಿರಾಜ್​ ಅವರ ಮಗ ಪೃಥ್ವಿರಾಜ್ ಒಂದು ಕಥೆ ಹೇಳಿದರಂತೆ. ಅದನ್ನಿಟ್ಟುಕೊಂಡು ಚಿತ್ರಕಥೆ ಸಿದ್ಧಪಡಿಸಲಾಗಿದೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಚನ್ನಪಟ್ಟಣದಲ್ಲಿ ನಡೆಯಲಿದ್ದು, ಅದರಲ್ಲೂ ವಿಶೇಷವಾಗಿ ಕಾವೇರಿ ಆರ್ಟ್ಸ್ ಅಂಡ್ ಕ್ರಾಫ್ಟ್ ಎಂಪೋರಿಯಂನಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಸಿಕ್ಕಿದೆಯಂತೆ.

ಈ ಚಿತ್ರದಬಗ್ಗೆ ಮಾತನಾಡುವ ಯತಿರಾಜ್​, 'ಇಲ್ಲಿ ನಂಬಿಕೆಯ ಪ್ರಶ್ನೆಯಿದೆ. ಸರಿ-ತಪ್ಪುಗಳ ಜಿಜ್ಞಾಸೆಯಿದೆ. ಮಮತೆ - ವಾತ್ಸಲ್ಯಗಳ ವೈರುಧ್ಯವಿದೆ. ಆಸೆ - ದುರಾಸೆಗಳ ಆಳ ಅಗಲವಿದೆ. ವಾಸ್ತವ ಲೋಕದ ಪರಿಚಯಯವಿದೆ. ಅಳುವಿದೆ.. ನಗುವಿದೆ. ಎಲ್ಲರೊಂದಿಗೆ ಬೆರೆಯುವ ವ್ಯಕ್ತಿ ಹೇಗೆ ಏಕಾಂಗಿಯಾಗುತ್ತಾನೆ? ಎಂಬುದೆ ಚಿತ್ರದ ಕೇಂದ್ರ ವಸ್ತು. ಚಿತ್ರದಲ್ಲಿ ಹಲವು ಪಾತ್ರಗಳಿದ್ದರೂ ತೆರೆಯ ಮೇಲೆ ಕಾಣುವುದು ಸಿದ್ದರಾಜು ಪಾತ್ರ ಮಾತ್ರ. ಆ ಪಾತ್ರದಲ್ಲಿ ನಾನೇ ಅಭಿನಯಿಸುತ್ತಿದ್ದೇನೆ. ಈ ಹಿಂದೆ ಒಂದೇ ಪಾತ್ರದ ಕೆಲವು ಚಿತ್ರಗಳು ಬಂದಿದೆಯಾದರೂ ನಮ್ಮ ಚಿತ್ರದ ಕಥೆ ಸಾಗುವ ರೀತಿ ಸ್ವಲ್ಪ ವಿಭಿನ್ನವಾಗಿದೆ' ಯತಿರಾಜ್.

'ಬೊಂಬೆ ಹೇಳುತೈತೆ' ಚಿತ್ರಕ್ಕೆ ಶ್ರೀಕಾಂತ್​ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ವಿದ್ಯಾನಾಗೇಶ್ ಅವರ ಛಾಯಾಗ್ರಹಣವಿದೆ. ಈ ಚಿತ್ರವನ್ನು ಮಾರುತಿ ಪ್ರೊಡಕ್ಷನ್ಸ್ ಮೂಲಕ ಮಾರುತಿ ಪ್ರಸಾದ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.