ಸಿನಿವಾಣಿ

ಯಶ್ v/s ಆಮೀರ್!; ಲಾಲ್​ಸಿಂಗ್ ಛಡ್ಡಾ, ಕೆಜಿಎಫ್ 2 ಒಂದೇ ದಿನ ತೆರೆಗೆ

ಬೆಂಗಳೂರು: ಕನ್ನಡ ಸೇರಿ ಪರಭಾಷೆಯಲ್ಲಿಯೂ ನಿರೀಕ್ಷೆ ಮೂಡಿಸಿರುವ ಸಿನಿಮಾ ಎಂದರೆ ಅದು ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’. ಈ ಸಿನಿಮಾ ಸಿದ್ಧವಾಗಿ ಒಂದು ವರ್ಷದ ಮೇಲಾಯಿತಾದರೂ, ಬಿಡುಗಡೆಗೆ ಕಾಲ ಕೂಡಿಬಂದಿರಲಿಲ್ಲ. ಮುಂದಿನ ವರ್ಷ ಏಪ್ರಿಲ್ 14ರಂದು ವಿಶ್ವದಾದ್ಯಂತ ‘ಕೆಜಿಎಫ್ 2’ ರಿಲೀಸ್ ಆಗಲಿದೆಯೆಂದು ತಂಡ ಕೆಲವು ದಿನಗಳ ಹಿಂದೆ ಅಧಿಕೃತವಾಗಿ ಘೋಷಿಸಿತ್ತು. ಈಗ ಅದೇ ದಿನ ಆಮೀರ್ ಖಾನ್ ಅಭಿನಯದ ‘ಲಾಲ್​ಸಿಂಗ್ ಛಡ್ಡಾ’ ಚಿತ್ರ ಕೂಡ ತೆರೆಗೆ ಬಿಡುಗಡೆಯಾಗುತ್ತಿದೆ. ಈ ಮೂಲಕ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕ್ಲ್ಯಾಷ್ ಏರ್ಪಡಲಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಫೆಬ್ರವರಿ ಮೂರನೇ ವಾರದಲ್ಲಿ ‘ಲಾಲ್​ಸಿಂಗ್ ಛಡ್ಡಾ’ ತೆರೆಗೆ ಬರಬೇಕಿತ್ತು. ಆದರೆ, ಆಮೀರ್ ಖಾನ್ ಪಾತ್ರಕ್ಕೆ ಸಂಬಂಧಿಸಿದ ಗ್ರಾಫಿಕ್ಸ್ ಕೆಲಸಗಳು ಹೇರಳವಾಗಿರುವುದರಿಂದ, ನಿರ್ವಪಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಏ.14 ದಿನಾಂಕವನ್ನು ಅಂತಿಮಮಾಡಿದ್ದಾರೆ.

ಆಮೀರ್​ಗೆ ಗೆಲುವಿಲ್ಲದೆ 3ವರ್ಷವಾಯ್ತು: 2018ರಲ್ಲಿ ತೆರೆಗೆ ಬಂದಿದ್ದ ‘ಥಗ್ಸ್ ಆಫ್ ಹಿಂದೂಸ್ತಾನ್’ ಸಿನಿಮಾ ಹೊರತುಪಡಿಸಿದರೆ, ಆಮೀರ್ ನಟನೆಯ ಬೇರಾವ ಸಿನಿಮಾ ಸುದ್ದಿ ಇಲ್ಲ. ಇದೀಗ ಸುದೀರ್ಘ ಮೂರೂವರೆ ವರ್ಷದ ಬಳಿಕ ಅವರ ಆಗಮನವಾಗುತ್ತಿದ್ದು, ಈಗಲಾದರೂ ಗೆಲುವು ದಕ್ಕುತ್ತದಾ ಎಂಬುದನ್ನು ನೋಡಬೇಕಿದೆ.

ಯಶ್ ಎದುರು ಸೋತಿದ್ದ ಶಾರುಖ್ ಖಾನ್: 2018ರಲ್ಲಿ ಶಾರುಖ್ ಖಾನ್ ನಟನೆಯ ‘ಜೀರೋ’ ಚಿತ್ರ ಯಶ್ ‘ಕೆಜಿಎಫ್’ ಎದುರು ಬಿಡುಗಡೆಯಾಗಿತ್ತು. ಅಂದು ಬಾಕ್ಸ್ ಆಫೀಸ್​ನಲ್ಲಿ ‘ಜೀರೋ’ ಮಕಾಡೆ ಮಲಗಿದರೆ, ‘ಕೆಜಿಎಫ್’ ಗೆಲುವಿನ ನಗೆ ಬೀರಿತ್ತು. ಇದೀಗ ಮತ್ತೇ ಅಂಥ ಸನ್ನಿವೇಶವನ್ನು ನೆನಪಿಸುವ ಕ್ಷಣ ಬಂದಿದೆ. ‘ಲಾಲ್ ಸಿಂಗ್ ಛಡ್ಡಾ’, ‘ಕೆಜಿಎಫ್ 2’ ಪೈಕಿ ಗೆಲುವು ಯಾರಿಗೆ ಎಂಬುದನ್ನು ಕಾದು ನೋಡಬೇಕಿದೆ.