ಸಿನಿವಾಣಿ

ಇದ್ದಲ್ಲೇ ಹಾರೈಸಿ ... ಅಭಿಮಾನಿಗಳಿಗೆ 'ರಾಕಿಂಗ್​ ಸ್ಟಾರ್' ಮನವಿ

manjunathktgns

ಬೆಂಗಳೂರು: ಕರೊನಾ ಸೋಂಕು ಹರಡುವ ಭಯದಿಂದ ಕಳೆದ ವರ್ಷ ಹಲವು ಸ್ಟಾರ್​ ನಟರು ತಮ್ಮ ಹುಟ್ಟುಹಬ್ಬವನ್ನು ಕ್ಯಾನ್ಸಲ್​ ಮಾಡಿದ್ದರು. ಬರೀ ಕನ್ನಡದ ನಟರಷ್ಟೇ ಅಲ್ಲ, ಪರಭಾಷೆಯ ಎಲ್ಲಾ ಸ್ಟಾರ್ ನಟರು ಸಹ ಕಳೆದ ವರ್ಷದ ತಮ್ಮ ಹುಟ್ಟುಹಬ್ಬವನ್ನು ಕರೊನಾ ಹರಡುವ ಭಯದಿಂದ ಕ್ಯಾನ್ಸಲ್​ ಮಾಡಿ, ಅಭಿಮಾನಿಗಳಿಗೆ ತಾವು ಇದ್ದಲ್ಲಿಂದಲೇ ಹರಸಿ-ಹಾರೈಸುವುದಕ್ಕೆ ಮನವಿ ಮಾಡಿದ್ದರು.

ಈ ಸಾಲಿಗೆ ಯಶ್​ ಸಹ ಸೇರಿದ್ದಾರೆ. ಕಳೆದ ವರ್ಷ ತಮ್ಮ ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಿಕೊಂಡಿದ್ದ ಅವರು, ಈ ಬಾರಿ ಕರೊನಾ ಕಾರಣದಿಂದ ತಮ್ಮ ಹುಟ್ಟುಹಬ್ಬಕ್ಕೆ ಬ್ರೇಕ್​ ಹಾಕಿದ್ದಾರೆ. ಅಭಿಮಾನಿಗಳ ಸುರಕ್ಷತೆಯ ದೃಷ್ಟಿಯಿಂದ ಹುಟ್ಟುಹಬ್ಬವನ್ನು ಕ್ಯಾನ್ಸಲ್​ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಈ ವಿಷಯವಾಗಿ ಅವರೊಂದು ವೀಡಿಯೋ ಮಾಡಿದ್ದು, ಆ ವೀಡಿಯೋದಲ್ಲಿ ಅವರು ಅಭಿಮಾನಿಗಳಿಗೆ ಮನವಿ ಸಲ್ಲಿಸಿದ್ದಾರೆ. 'ತುಂಬಾ ಜನ ಸೇರುವುದರಿಂದ ಸುರಕ್ಷಿತವಾಗಿರುವುದಿಲ್ಲ. ಅದರಿಂದ ನಿಮಗೇನಾದರೂ ಸಮಸ್ಯೆ ಆದರೆ, ನಿಮ್ಮ ಮನೆಯವರಿಗೆ ಸಮಸ್ಯೆಯಾದರೆ ನಾನು ಸಂತೋಷವಾಗಿರುವುದಿಲ್ಲ, ಹಾಗಾಗಿ ನೀವು ಎಲ್ಲಿರುತ್ತೀರೋ, ಇದ್ದಲ್ಲೇ ಹಾರೈಸಿ. ಸೋಷಿಯಲ್​ ಮೀಡಿಯಾ ಮೂಲಕ ಆಶೀರ್ವದಿಸಿ' ಎಂದು ಹೇಳಿದ್ದಾರೆ.

ಇನ್ನು, ಜನವರಿ 08ಕ್ಕೆ 'ಕೆಜಿಎಫ್​ 2' ಚಿತ್ರದ ಟೀಸರ್​ ಬಿಡುಗಡೆಯಾಗುತ್ತಿರುವ ಬಗ್ಗೆ ಮಾತನಾಡಿರುವ ಅವರು, ಅದನ್ನು ನೋಡಿ ಹಾರೈಸಿ ಎಂದು ಮನವಿ ಸಲ್ಲಿಸಿದ್ದಾರೆ.