ಸಿನಿವಾಣಿ

ಹಾಲಿವುಡ್ ಸಾಹಸ ನಿರ್ದೇಶಕರಿಂದ ಮೆಚ್ಚುಗೆ ಪಡೆದ ಸಮಂತಾ!

ಹೈದರಾಬಾದ್: ಐಕಿಡೊ, ಕಿಕ್ ಬಾಕ್ಸಿಂಗ್, ಜಿಮ್ನಾಸ್ಟಿಕಗಸ್ ಮುಂತಾದ ಸಾಹಸ ಕಲೆಗಳಲ್ಲಿ ಪರಿಣಿತರಾಗಿರುವ ಯಾನಿಕ್​ ಬೆನ್ ಇದುವರೆಗೂ ಹಲವಾರು ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ. ದೊಡ್ಡದೊಡ್ಡ ನಟರ ಜತೆಗೆ ಕೆಲಸ ಮಾಡಿರುವ ಬೆನ್​, ಸಮಂತಾ ಕಾರ್ಯವೈಖರಿಯನ್ನು ನೋಡಿ ಮೆಚ್ಚಿಕೊಂಡಿದ್ದಾರಂತೆ.

ಹಾಲಿವುಡ್​ನ ‘ಟ್ರಾನ್ಸ್ಪೋರ್ಟರ್’, ‘ಇನ್ಸೆಪ್ಷನ್’, ಬಾಲಿವುಡ್ನ ‘ಟೈಗರ್ ಜಿಂದಾ ಹೈ’, ‘ರಯೀಸ್’, ತೆಲುಗಿನ ‘ಅತ್ತಾರಿಂಟಿಕಿ ದಾರೇದಿ’, ‘ನೇನೋಕ್ಕೊಡೇನ್’ ಮುಂತಾದ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿರುವ ಬೆನ್​, ಇದೀಗ ಹರಿ-ಹರೀಶ್ ನಿರ್ದೇಶನದ ಸಮಂತಾ ಅಭಿನಯದ 'ಯಶೋದ' ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಇದೊಂದು ಆಕ್ಷನ್​ ಥ್ರಿಲ್ಲರ್​ ಚಿತ್ರವಾಗಿದ್ದು, ಇದರಲ್ಲಿ ಸಮಂತಾ ಹೊಡೆದಾಡಿದ ರೀತಿ ನೋಡಿ, ಯಾನಿಕ್ ಬೆನ್ ಬೆರಗಾಗಿದ್ದಾರಂತೆ.

ಶ್ರೀದೇವಿ ಮೂವೀಸ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿರುವ 'ಯಶೋದ' ಚಿತ್ರವು ನ.11ರಂದು ಐದು ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಚಿತ್ರದಲ್ಲಿ ಹೈ-ವೋಲ್ಟೇಜ್ ಫೈಟ್ಸ್ ಮತ್ತು ಸ್ಟಂಟ್‌ಗಳು ಮೂಡಿಬಂದಿದ್ದು, ಅದಕ್ಕೆ ಕಾರಣರಾಗಿರುವ ಸಮಂತಾ ಶ್ರದ್ಧೆಗೆ ಯಾನಿಕ್ ಬೆನ್ ಖುಷಿಯಾಗಿದ್ದಾರೆ.

ಸಮಂತಾ ಮತ್ತು ಬೆನ್ ಒಟ್ಟಿಗೆ ಕೆಲಸ ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಸಮಂತಾ ಅವರೊಂದಿಗೆ 'ಫ್ಯಾಮಿಲಿ ಮ್ಯಾನ್ 2' ವೆಬ್‌ಸೀರೀಸ್‌ಗಾಗಿ ಕೆಲಸ ಮಾಡಿದ್ದರು. ಈಗ 'ಯಶೋದ' ಚಿತ್ರಕ್ಕಾಗಿ ಸಮಂತಾಗೆ ಹೊಡೆದಾಟ ಹೇಳಿಕೊಟ್ಟಿರುವ ಬೆನ್​, ಆಕ್ಷನ್​ ದೃಶ್ಯಗಳು ಚೆನ್ನಾಗಿ ಮೂಡಿಬಂದಿರುವುದಕ್ಕೆ ಸಮಂತಾ ಅವರ ಸಮರ್ಪಣಾ ಮನೋಭಾವ ಮತ್ತು ಇಚ್ಛಾಶಕ್ತಿಯೇ ಕಾರಣ ಎಂದು ಹೇಳಿದ್ದಾರಂತೆ.

‘ಯಶೋದ’ ಚಿತ್ರದಲ್ಲಿ ಚಿತ್ರದಲ್ಲಿ ಸಮಂತಾ ಜೊತೆಗೆ ವರಲಕ್ಷ್ಮಿ ಶರತ್‌ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮಾ ಮುಂತಾದವರು ನಟಿಸಿದ್ದಾರೆ.