ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಮುಗಿದು, ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಶುರುವಾಗಬೇಕಿತ್ತು. ಲಾಕ್‌ಡೌನ್‌ನಿಂದ ರಾಜಮೌಳಿ ಅವರ ಯೋಚನೆಗಳೆಲ್ಲಾ ತಲೆಕೆಳಗಾಗಿವೆ.
ಈಗ ಲಾಕ್‌ಡೌನ್ ಮುಗಿದು, ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿರುವಾಗಲಾದರೂ ಬೇಗ ಚಿತ್ರೀಕರಣ ಮುಗಿಸುವಾ ಎಂದು ರಾಜಮೌಳಿ ಪ್ಲಾನ್ ಹಾಕಿಕೊಂಡು ಕುಳಿತಿದ್ದರೆ, ಕರೊನಾ ಹಾವಳಿ ಹೆಚ್ಚಾಗಿರುವುದರಿಂದ ಶೂಟಿಂಗ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್‌ಚರಣ್ ತೇಜ ಹೇಳಿರುವುದರಿಂದ ಚಿತ್ರೀಕರಣ ಸದ್ಯಕ್ಕೆ ಪ್ರಾರಂಭವಾಗುವುದು ಸಹ ಸಂಶಯವಾಗಿದೆ.
ಈ ಮಧ್ಯೆ, ಚಿತ್ರದ ಬಗ್ಗೆ ಒಂದು ವಿಚಿತ್ರ ಸುದ್ದಿ ಕೇಳಿ ಬಂದಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೆ, ಜನ ಬರುತ್ತಾರೋ ಇಲ್ಲವೋ ಎಂಬ ಭಯದಿಂದ, ಚಿತ್ರವನ್ನು ಪರ್ಸನಲೈಸ್ಡ್ ಆ್ಯಪ್ ರಾಜಮೌಳಿ ಬಿಡುಗಡೆ ಮಾಡುವುದಕ್ಕೆ ಚಿಂತನೆ ನಡೆಸುತ್ತಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಹಾಗೆ ಸುದ್ದಿ ಮಾಡುತ್ತಿರುವವರು ಕಮಾಲ್ ಖಾನ್. ಬಾಲಿವುಡ್ ಚಿತ್ರಗಳ ಬಾಕ್ಸ್-ಆಫೀಸ್ ಲೆಕ್ಕಾಚಾರ ಮತ್ತು ವಿಮರ್ಶೆ ಮಾಡುವ ಕಮಾಲ್ ಆರ್. ಖಾನ್ ಇತ್ತೀಚೆಗಷ್ಟೇ, ಹಿಂದಿ ಚಿತ್ರರಂಗವನ್ನು ಕೇವಲ ಎಂಟು ನಿರ್ಮಾಣ ಸಂಸ್ಥೆಗಳು ಆಳುತ್ತಿವೆ ಎಂದು ಬಾಂಬ್ ಸಿಡಿಸಿದ್ದರು.
ಈಗ ಅವರು, ‘ಆರ್.ಆರ್.ಆರ್’ ಚಿತ್ರವನ್ನು ರಾಜಮೌಳಿ ಆ್ಯಪ್‌ನಲ್ಲಿ ಬಿಡುಗಡೆ ಮಾಡುವುದಕ್ಕೆ ಯೋಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವಿಷಯ ಅವರಿಗೆ ಖಚಿತ ಮೂಲಗಳಿಂದ ತಿಳಿದು ಬಂದಿದೆಯಂತೆ. ಕಮಾಲ್ ಪ್ರಕಾರ, ರಾಜಮೌಳಿ ತಮ್ಮ ಚಿತ್ರವನ್ನು ಎಂಟು ಭಾಷೆಗಳಿಗೆ ಡಬ್ ಮಾಡಿ ಏಕಕಾಲಕ್ಕೆ ಬಿಡುಗಡೆ ಮಾಡುತ್ತಾರಂತೆ. ಒಮ್ಮೆ ಚಿತ್ರ ನೋಡುವುದಕ್ಕೆ 500 ರೂಪಾಯಿ ನಿಗದಿಪಡಿಸಲಾಗಿದ್ದು, ಐದು ತಾಸಿನಲ್ಲಿ 1,200 ಕೋಟಿ ಬಾಚಿಕೊಳ್ಳಲಿದ್ದಾರೆ ಎಂದು ಕಮಾಲ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸುಶಾಂತ್ ಆತ್ಮಹತ್ಯೆ: ಬನ್ಸಾಲಿ ವಿಚಾರಣೆ ಸಾಧ್ಯತೆ
ಈಗಾಗಲೇ ರಾಮ್‌ಗೋಪಾಲ್ ವರ್ಮಾ ಇಂಥದ್ದೊಂದು ಪ್ರಯೋಗ ಮಾಡಿ ಯಶಸ್ವಿಯಾಗಿದ್ದು, ಒಂದು ಪಕ್ಷ ರಾಜಮೌಳಿ ಸಹ ಇದೇ ಹಾದಿಯಲ್ಲಿ ಮುಂದುವರೆದು ಗೆದ್ದರೆ, ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳ ಅವಶ್ಯಕತೆಯೇ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.
ಆದರೆ, ರಾಜಮೌಳಿ ತಮ್ಮ ಮಹತ್ವಾಕಾಂಕ್ಷೆಯ ಚಿತ್ರವನ್ನು ಚಿತ್ರಮಂದಿರಗಳನ್ನು ಬಿಟ್ಟು, ಆ್ಯಪ್‌ನಲ್ಲಿ ಬಿಡುಗಡೆ ಮಾಡುವುದಕ್ಕೆ ಮನಸ್ಸು ಮಾಡುತ್ತಾರಾ? ಈ ಪ್ರಶ್ನೆಗೆ ಅವರೇ ಉತ್ತರಿಸಬೇಕು.