ಬೆಂಗಳೂರು: ಯಶ್ ಅಭಿನಯದ 'ಕೆಜಿಎಫ್ 2' ಚಿತ್ರ ಬಿಡುಗಡೆಯಾಗಿ ಆರು ತಿಂಗಳುಗಳಾಗಿವೆ. ಈ ಆರು ತಿಂಗಳಲ್ಲಿ ಯಶ್ ಅಭಿನಯದ ಹೊಸ ಚಿತ್ರ ಘೋಷಣೆಯಾಗಿಲ್ಲ. ಆ ಚಿತ್ರ ಯಾವುದಿರಬಹುದು? ಯಾರು ನಿರ್ದೇಶಿಸಬಹುದು? ಯಾರು ನಿರ್ಮಿಸಬಹುದು? ಯಶ್ ಈ ಬಾರಿ ಯಾವ ರೀತಿಯ ಪಾತ್ರ ಮಾಡಬಹುದು? ಹೀಗೆ ಸಾಕಷ್ಟು ಪ್ರಶ್ನೆಗಳು ಅಭಿಮಾನಿ ವಲಯದಲ್ಲಿದೆ. ಆದರೆ, ಯಶ್ ಮಾತ್ರ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ. ತಮ್ಮ ಮುಂದಿನ ಚಿತ್ರ ಯಾವುದು ಎಂದು ಬಹಿರಂಗಗೊಳಿಸಿಲ್ಲ.
ಯಶ್ ಅಭಿನಯದ 19ನೇ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಿಸುತ್ತಿದೆ, ನರ್ತನ್ ನಿರ್ದೇಶನ ಮಾಡುತ್ತಿದ್ದಾರೆ ಎಂದು ಸಾರುವ ಪೋಸ್ಟರ್ಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ಕೆವಿಎನ್ ಪ್ರೊಡಕ್ಷನ್ಸ್ನ ಲೋಗೋಗಳಿರುವ ಪೋಸ್ಟರ್ಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿವೆ. ಆದರೆ, ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯವರಾಗಲೀ, ಯಶ್ ಕಡೆಯಿಂದಾಗಲೀ ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ನರ್ತನ್ ನಿರ್ದೇಶನದಲ್ಲಿ ಯಶ್ ಒಂದು ಸಿನಿಮಾ ಮಾಡುತ್ತಾರೆ ಎಂಬುದು ಹಳೆಯ ಸುದ್ದಿ. ನರ್ತನ್ ನಿರ್ದೇಶನದ 'ಮಫ್ತಿ' ಚಿತ್ರ ಹಿಟ್ ಆದಾಗಲೇ ಇಂಥದ್ದೊಂದು ಸುದ್ದಿ ಇತ್ತು. ಆದರೆ, ಇತ್ತೀಚಿನ ಸುದ್ದಿಗಳ ಪ್ರಕಾರ, ಯಶ್ ಮೊದಲು ಇನ್ನೊಂದು ದೊಡ್ಡ ಚಿತ್ರದಲ್ಲಿ ನಟಿಸಿ ಆ ನಂತರ ನರ್ತನ್ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಹಾಗಾದರೆ, ಯಾರ ನಿರ್ದೇಶನದಲ್ಲಿ ಯಶ್ ಅಭಿನಯಿಸುತ್ತಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ತೆಲುಗು ನಿರ್ದೇಶಕ ಬೋಯಾಪಾಟಿ ಸೀನು, ತಮಿಳು ನಿರ್ದೇಶಕ ಶಂಕರ್ ಸೇರಿದಂತೆ ಹಲವು ನಿರ್ದೇಶಕರ ಹೆಸರುಗಳು ಕೇಳಿ ಬರುತ್ತಿವೆಯಾದರೂ, ಇನ್ನೂ ಯಾವುದೂ ಪಕ್ಕಾ ಆಗಿಲ್ಲ.
ಈ ಮಧ್ಯೆ, ಕೆವಿಎನ್ ಪ್ರೊಡಕ್ಷನ್ಸ್ನ ವೆಂಕಟ್ ಕೋನಾಂಕಿ, ಯಶ್ಗೆ ಇತ್ತೀಚಿನ ದಿನಗಳಲ್ಲಿ ಬಹಳ ಹತ್ತಿರವಾಗಿರುವುದರಿಂದ, ಅವರಿಗೇ ಯಶ್ ಮುಂದಿನ ಕಾಲ್ಶೀಟ್ ಎಂಬ ಮಾತಿದೆ. ಅದೇ ಕಾರಣಕ್ಕೆ ಇಂಥದ್ದೊಂದು ಪೋಸ್ಟರ್ ಮಾಡಿ ಬಿಡಲಾಗಿದೆಯಾ? ಎಂಬ ಅನುಮಾನವಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಈ ಪೋಸ್ಟರ್ ಬಿಟ್ಟಿರುವುದರಿಂದ, ಇದು ನಿಜವಿರಬಹುದು ಎಂದು ಬಹಳಷ್ಟು ಜನ ನಂಬಿದ್ದಾರೆ. ಆದರೆ, ಇದಕ್ಕೆ ಯಾವುದೇ ಅಧಿಕೃತ ಮುದ್ರೆ ಇಲ್ಲವಾದ್ದರಿಂದ, ಈ ಸುದ್ದಿ ನಿಜ ಎಂದು ನಂಬುವುದು ಕಷ್ಟ.
ಇದನ್ನೂ ಓದಿ: ಸ್ಯಾಂಡಲ್ವುಡ್ನಲ್ಲಿ ದೀಪಾವಳಿ ಧಮಾಕಾ..
ಇನ್ನೊಂದು ಮೂಲದ ಪ್ರಕಾರ, ಜನವರಿ ಎಂಟರಂದು ಯಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಆ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಕುರಿತು ಅಧಿಕೃತ ಘೋಷಣೆ ಮಾಡುತ್ತಾರಂತೆ. ಇದರಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.