More

    ಸ್ಯಾಂಡಲ್​ವುಡ್​ನಲ್ಲಿ ದೀಪಾವಳಿ ಧಮಾಕಾ..

    ಬೆಳಕಿನ ಹಬ್ಬ ದೀಪಾವಳಿ ಭಾರತದಾದ್ಯಂತ ಜನ ಆಚರಿಸುವ ಕೊನೆಯ ಹಬ್ಬ. ಕರ್ನಾಟಕದಲ್ಲೂ ದೀಪಗಳ ಹಬ್ಬಕ್ಕೆ ಅದರದ್ದೇ ಆದ ಪ್ರಾಮುಖ್ಯತೆಯಿದೆ. ಇನ್ನು ಚಿತ್ರರಂಗದಲ್ಲೂ ವರ್ಷದ ಈ ಕೊನೆಯ ಹಬ್ಬಕ್ಕೆ ಅದರದೇ ಆದ ವೈಶಿಷ್ಠತೆ ಇದೆ. ಈ ವರ್ಷವೂ ಚಿತ್ರತಂಡಗಳು ದೀಪಾವಳಿ ಹಬ್ಬದ ಸಡಗರದಲ್ಲಿ ಹೊಸ ಹೊಸ ಟೀಸರ್, ಪೋಸ್ಟರ್, ಟ್ರೇಲರ್ ಬಿಡುಗಡೆ ಮಾಡಿವೆ.
    ಘೋಸ್ಟ್ ಪೋಸ್ಟರ್ ಬಿಡುಗಡೆ

    ಶಿವರಾಜಕುಮಾರ್ ಅಭಿನಯದ, ಎಂ.ಜಿ. ಶ್ರೀನಿವಾಸ್ ನಿರ್ದೇಶಿಸುತ್ತಿರುವ ‘ಘೋಸ್ಟ್’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಪ್ರಾರಂಭವಾಗಿದೆ. ಆಕ್ಷನ್ ಚಿತ್ರದಲ್ಲಿ ವಿಭಿನ್ನ ಲುಕ್​ನಲ್ಲಿ ಶಿವರಾಜಕುಮಾರ್ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಅವರ ಲುಕ್ ಕೂಡ ರಿವೀಲ್ ಆಗಿದೆ. ಸದ್ಯ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮೂಡಿಬರುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ.

    ಅಜೇಯ್ ರಾವ್ ಹೊಸ ಚಿತ್ರ ಘೋಷಣೆ

    ಟೀಸರ್, ಪೋಸ್ಟರ್, ಟ್ರೇಲರ್ ಮಾತ್ರವಲ್ಲ ದೀಪಾವಳಿ ಹಬ್ಬದಂದು ನಟ ಅಜೇಯ್ ರಾವ್ ಅವರ ಹೊಸ ಚಿತ್ರದ ಘೋಷಣೆ ಕೂಡ ಆಗಿದೆ. ಈ ಹಿಂದೆ ನಿರ್ದೇಶಕ ಸಿಂಪಲ್ ಸುನಿ ಬಳಿ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿರುವ ಅಭಿಷೇಕ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಚಿತ್ರಕ್ಕೆ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಎಂದು ಶೀರ್ಷಿಕೆ ಇಡಲಾಗಿದ್ದು, ಮೊದಲ ಪೋಸ್ಟರ್​ಅನ್ನೂ ಚಿತ್ರತಂಡ ಬಿಡುಗಡೆ ಮಾಡಿದೆ. ಬ್ಯಾಂಕ್ ದರೋಡೆ ಮಾಡಲು ಹೊರಟವರ ಸುತ್ತ ಕಥೆ ಹೆಣೆಯಲಾಗಿದ್ದು, ಚಿತ್ರದ ಪೋಸ್ಟರ್ ಸಹ ಸಾಕಷ್ಟು ಕುತೂಹಲ ಮೂಡಿಸುವಂತಿದೆ. ನಾಯಕಿ ಸೇರಿದಂತೆ ಉಳಿದ ತಾರಾಗಣದ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಜನವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

    ಆರ್​ಸಿ ಬ್ರದರ್ಸ್ ಟೀಸರ್ ಬಿಡುಗಡೆ

    ತಬಲಾ ನಾಣಿ ಮತ್ತು ಕುರಿ ಪ್ರತಾಪ್ ಹೀರೋಗಳಾಗಿರುವ ಚಿತ್ರ ‘ಆರ್​ಸಿ ಬ್ರದರ್ಸ್’. ಪ್ರಕಾಶ್ ಕುಮಾರ್ ನಿರ್ದೇಶನದ ಈ ಚಿತ್ರದ ಟೀಸರ್​ಅನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿದೆ. ತಬಲಾ ನಾಣಿ ಅಣ್ಣನಾಗಿದ್ದರೆ, ಕುರಿ ಪ್ರತಾಪ್ ತಮ್ಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಹೋದರರ ನಡುವಿನ ಬಾಂಧವ್ಯ, ಜಗಳಗಳನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನ ನಿರ್ದೇಶಕರದು. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಸಂಭ್ರಮಶ್ರೀ, ನಯನ ಮತ್ತು ನೀತು ರಾಯ್ ನಟಿಸಿದ್ದಾರೆ.

    ಮಕ್ಕಳ ಜತೆ ಅಮೂಲ್ಯ ದೀಪಾವಳಿ

    ನಟಿ ಅಮೂಲ್ಯ ಅವರಿಗೆ ಈ ವರ್ಷದ ಬೆಳಕಿನ ಹಬ್ಬ ಮತ್ತಷ್ಟು ವಿಶೇಷ. ಅದಕ್ಕೆ ಕಾರಣ ಮುದ್ದು ಮಕ್ಕಳೊಂದಿಗೆ ಅವರು ಮೊದಲ ದೀಪಾವಳಿ ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಮಾರ್ಚ್​ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ, ಮನೆಯಲ್ಲಿಯೇ ಕುಟುಂಬದವರ ಜತೆ ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮಕ್ಕಳೊಂದಿಗೆ ಹಬ್ಬದ ಸಂಭ್ರಮದಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಮೂಲ್ಯ, ‘ನಮ್ಮ ಮುದ್ದು ಕಣ್ಮಣಿಗಳ ಮೊದಲ ಬೆಳಕಿನ ಹಬ್ಬ’ ಎಂದು ಸಂತಸ ಹಂಚಿಕೊಂಡಿದ್ದಾರೆ.

    ರಾಣನಿಗೆ ಕೆಡಿ ಬೆಂಬಲ!

    ನಂದಕಿಶೋರ್ ನಿರ್ದೇಶನದ ಶ್ರೇಯಸ್ ಮಂಜು, ರೀಷ್ಮಾ ನಾಣಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ ‘ರಾಣ’. ಚಿತ್ರತಂಡ ಭಾನುವಾರ ಆಕ್ಷನ್ ಟ್ರೇಲರ್ ಬಿಡುಗಡೆ ಸಮಾರಂಭ ಆಯೋಜಿಸಿತ್ತು. ನಟ ಧ್ರುವ ಸರ್ಜಾ ‘ರಾಣ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಬೆಳಕಿನ ಹಬ್ಬದ ಸುಸಂದರ್ಭದಲ್ಲಿ ಸೋಮವಾರ ಯೂಟ್ಯೂಬ್​ನಲ್ಲಿ ಟ್ರೇಲರ್​ಅನ್ನು ರಿಲೀಸ್ ಮಾಡಲಾಗಿದ್ದು, ಸದ್ಯ ವೈರಲ್ ಆಗಿದೆ.

    ಸೂರಿ ಅಣ್ಣನ ಮಾರಿಗುಡ್ಡದ ಗಡ್ಡಧಾರಿಗಳು…

    ‘ಸಲಗ’ ಚಿತ್ರದ ಸೂರಿ ಅಣ್ಣ ಈಗ ನಾಯಕನಾಗಿದ್ದಾರೆ. ‘ಮಾರಿಗುಡ್ಡದ ಗಡ್ಡಧಾರಿಗಳು’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವುದಲ್ಲದೇ, ನಿರ್ವಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇತ್ತೀಚೆಗಷ್ಟೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ ಚಿತ್ರದ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 90ರ ಕಾಲಘಟ್ಟದ ಕಾಲ್ಪನಿಕ ಕಥೆಗೆ ರಾಜೀವ್ ಚಂದ್ರಶೇಖರ್ ಆಕ್ಷನ್ ಕಟ್ ಹೇಳಿದ್ದು, ಕೆ.ಎಂ. ಇಂದ್ರ ಸಂಗೀತ ನೀಡಿದ್ದಾರೆ.

    ಚಂದನ್ ಶೆಟ್ಟಿ ಅಭಿನಯಿಸುತ್ತಿರುವ ‘ಸೂತ್ರಧಾರಿ’, ಮನೋಜ್ ನಟಿಸುತ್ತಿರುವ ‘ಮರಳಿ ಮನಸಾಗಿದೆ’, ಬಿರಾದಾರ್ ನಾಯಕನಾಗಿರುವ ‘90 ಹೊಡಿ ಮನೀಗ್ ನಡಿ’, ನಿರಂಜನ್ ಸುಧೀಂದ್ರ ನಾಯಕನಾಗಿರುವ ‘ಸೂಪರ್​ಸ್ಟಾರ್’, ಭರತ್ ನಂದ ನಟಿಸುತ್ತಿರುವ ‘ನಮಸ್ತೆ ಗೋಷ್ಟ್’ ಸೇರಿದಂತೆ ಹಲವು ಚಿತ್ರಗಳ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗಿದೆ.

    ‘ಕಾಂತಾರ’ ಮತ್ತೊಂದು ದಾಖಲೆ; ಹೊಂಬಾಳೆ ಫಿಲ್ಮ್ಸ್​ಗೆ ಇದು ಸಂಭ್ರಮದ ಸಂಗತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts