ಸಿನಿವಾಣಿ

ರಾಣಾ ಮದುವೆಗೆ ಪ್ರಭಾಸ್ ಯಾಕೆ ಹೋಗಲಿಲ್ಲ? ಕಾರಣ ಇಲ್ಲಿದೆ ...

ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಅವರ ಮದುವೆ ಆಗಸ್ಟ್ 08ರಂದು ಹೈದರಾಬಾದ್‍ನ ರಾಮಾನಾಯ್ಡು ಸ್ಟುಡಿಯೋದಲ್ಲಿ ಮುಗಿದಿದೆ. ಅಷ್ಟೇ ಅಲ್ಲ, ಅದಾಗಿ ಎರಡು ದಿನಗಳಿಗೆ ಸತ್ಯನಾರಾಯಣ ಪೂಜೆಯಲ್ಲೂ ರಾಣಾ ಮತ್ತು ಮಿಹಿಕಾ ಭಾಗವಹಿಸಿದ್ದಾರೆ.

ರಾಣಾ ಮತ್ತು ಮಿಹಿಕಾಆ ಬಜಾಜ್ ಅವರ ಮದುವೆಯಲ್ಲಿ ನಾಗಾರ್ಜುನ, ನಾಗಚೈತನ್ಯ, ಸಮಂತಾ, ವೆಂಕಟೇಶ್, ರಾಮ್‍ಚರಣ್ ತೇಜ ಸೇರಿದಂತೆ ಕೆಲವರು ಭಾಗವಹಿಸಿದ್ದಾರೆ. ಇನ್ನು ರಾಣಾ ಅಭಿನಯದ ಹಲವು ಚಿತ್ರಗಳ ಕಲಾವಿದರು ಮತ್ತು ತಂತ್ರಜ್ಞರ್ಯಾರೂ ಕಾಣಲಿಲ್ಲ. ಅದರಲ್ಲೂ ಟಾಲಿವುಡ್‍ನಲ್ಲಿ ರಾಣಾ ಅವರ ಆತ್ಮೀಯ ಗೆಳೆಯ ಎಂದು ಗುರುತಿಸಿಕೊಂಡಿರುವ ಪ್ರಭಾಸ್, ನಿರ್ದೇಶಕ ಎಸ್.ಎಸ್. ರಾಜಮೌಳಿ ಮುಂತಾದವರು ಮದುವೆಯಲ್ಲಿ ಕಾಣಿಸಲಿಲ್ಲ. ಅಷ್ಟೊಂದು ಆತ್ಮೀಯರಾದರೂ, ಅವರೆಲ್ಲಾ ಯಾಕೆ ಮದುವೆಯಲ್ಲಿ ಭಾಗವಹಿಸರಲಿಲ್ಲ ಎಂಬ ಪ್ರಶ್ನೆಯೊಂದು ಎಲ್ಲರನ್ನೂ ಕಾಡುತ್ತಿದೆ.

ಈಗ ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ವಿಷಯವೇನೆಂದರೆ, ಪ್ರಭಾಸ್, ರಾಜಮೌಳಿ ಸೇರಿದಂತೆ ಹಲವರಿಗೆ ರಾಣಾ ಮದುವೆಗೆ ಆಹ್ವಾನವೇ ಇರಲಿಲ್ಲವಂತೆ. ಕಾರಣ ಕರೊನಾ ಹಾವಳಿ. ಆಂಧ್ರ ಮತ್ತು ತೆಲಂಗಾಣದಲ್ಲಿ ಕರೊನಾ ಹಾವಳಿ ಹೆಚ್ಚಿರುವುದರಿಂದ, ಮೇಲಾಗಿ ಸಮಾರಂಭಗಳಲ್ಲಿ 50 ಜನರಿಗಿಂತ ಮೇಲ್ಪಟ್ಟು ಜನರು ಸೇರುವಂತಿಲ್ಲ ಎಂಬ ನಿಯಮವಿರುವುದರಿಂದ, ಮದುವೆಗೆ ಹೆಚ್ಚು ಜನರನ್ನು ಆಹ್ವಾನಿಸಲಾಗಿಲ್ಲವಂತೆ.

ಈ ಪೈಕಿ ನಾಗಾರ್ಜುನ, ನಾಗಚೈತನ್ಯ, ಸಮಂತಾ, ವೆಂಕಟೇಶ್ ಎಲ್ಲರೂ ರಾಣಾ ಅವರ ಸಂಬಂಧಿಕರು. ಹಾಗಾಗಿ ಅವರೆಲ್ಲಾ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಾಮ್‍ಚರಣ್ ತೇಜ ಮತ್ತು ರಾಣಾ ದಗ್ಗುಬಾಟಿ ಬಾಲ್ಯದ ಗೆಳೆಯರು. ಇಬ್ಬರೂ ಒಟ್ಟಿಗೆ ಓದಿದವರು. ಹಾಗಾಗಿ ರಾಮ್‍ಚರಣ್ ತೇಜ ಅವರನ್ನು ಮಾತ್ರ ರಾಣಾ ಮದುವೆಗೆ ಆಹ್ವಾನಿಸಿದ್ದಾರೆ. ಮಿಕ್ಕಂತೆ ಬಹಳಷ್ಟು ಜನ ಆತ್ಮೀಯರಿದ್ದರೂ, ಅವರನ್ನೆಲ್ಲಾ ಕರೆದರೆ ಹೆಚ್ಚು ಜನರಾಗುವ ಸಾಧ್ಯತೆ ಇದ್ದುದರಿಂದ, ಅವರ್ಯಾರನ್ನೂ ಮದುವೆಗೆ ಆಹ್ವಾನಿಸಿಲ್ಲ ಎಂದು ಹೇಳಲಾಗುತ್ತಿದೆ.

ಹಾಗಾಗಿ ಪ್ರಭಾಸ್, ರಾಜಮೌಳಿ ಸೇರಿದಂತೆ ರಾಣಾ ಅವರ ಅಪಾರ ಸಂಖ್ಯೆಯ ಸ್ನೇಹಿತರು ದೂರದಲ್ಲಿದ್ದುಕೊಂಡೇ, ತಮ್ಮ ಸ್ನೇಹಿತನ ಮದುವೆಗೆ ಶುಭ ಹಾರೈಸಿದ್ದಾರೆ.