ಬೆಂಗಳೂರು: ಬಿಗ್ಬಾಸ್ ಶೋ ( Bigg Boss Show ) ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇದು ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ. ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುವ ಈ ಶೋ ಭಾರಿ ಜನಪ್ರಿಯತೆ ಸಹ ಪಡೆದುಕೊಂಡಿದೆ. ಕನ್ನಡದಲ್ಲಿಯೂ ಕಳೆದ 11 ವರ್ಷಗಳಿಂದ ಈ ಶೋ ಮೂಡಿಬರುತ್ತಿದೆ. ಟಿಆರ್ಪಿ ( TRP - Television Rating Point ) ವಿಚಾರದಲ್ಲೂ ದಾಖಲೆ ಬರೆದಿದೆ. ಈವರೆಗೆ ಸಾಕಷ್ಟು ಸ್ಪರ್ಧಿಗಳು ಭಾಗವಹಿಸಿದ್ದಾರೆ. ಬಿಗ್ಬಾಸ್ ಮನೆಗಳು ಬದಲಾಗಿವೆ, ಶೋ ನಡೆಸುವ ಚಾನೆಲ್ ಸಹ ಬದಲಾಗಿದೆ. ಸ್ಪರ್ಧಿಗಳಿಗೆ ನೀಡುವ ಟಾಸ್ಟ್ಗಳು ಕೂಡ ಬದಲಾಗುತ್ತಿರುತ್ತದೆ. ಅಷ್ಟೇ ಯಾಕೆ ವೀಕ್ಷಕರ ಅಭಿರುಚಿ ಕೂಡ ಆಗಾಗ ಬದಲಾಗುತ್ತಲೇ ಇರುತ್ತದೆ. ಆದರೆ, ಈವರೆಗೆ ಬದಲಾಗದ ಒಂದೇ ಒಂದು ಸಂಗತಿ ಏನೆಂದರೆ ಅದು ನಿರೂಪಕ ಕಿಚ್ಚ ಸುದೀಪ್ ( Kichcha Sudeepa ).
ಹೌದು, ಕಳೆದ 10 ಸೀಸನ್ ಹಾಗೂ ಪ್ರಸ್ತುತ ನಡೆಯುತ್ತಿರುವ 11ನೇ ಸೀಸನ್ ಅನ್ನು ನಟ ಕಿಚ್ಚ ಸುದೀಪ್ ( Kichcha Sudeepa ) ನಿರೂಪಣೆ ಮಾಡಿದ್ದಾರೆ. ಆದರೆ, ಬದಲಾವಣೆ ಜಗದ ನಿಯಮ ಎನ್ನುವಂತೆ ಇದೀಗ ಬಿಗ್ಬಾಸ್ ನಿರೂಪಣೆಯಿಂದ ಹಿಂದೆ ಸರಿಯಲು ಕಿಚ್ಚ ಮನಸ್ಸು ಮಾಡಿದ್ದಾರೆ. ಇದೇ ನನ್ನ ಕೊನೆಯ ಸೀಸನ್ ಎಂದು ಹೇಳಿದ್ದು, ಇದನ್ನು ಕೇಳಿದ ಬಿಗ್ಬಾಸ್ ಪ್ರೇಕ್ಷಕರಿಗೆ ಬಹಳ ಬೇಸರವಾಗಿದೆ. ಕಿಚ್ಚನ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು ಎಂಬ ಚರ್ಚೆಗಳು ಸಹ ಇದೀಗ ನಡೆಯುತ್ತಿವೆ. ಇದರ ನಡುವೆ ಕಿಚ್ಚನ ಈ ಖಡಕ್ ನಿರ್ಧಾರಕ್ಕೆ ಅವರಿಗಾದ ಅವಮಾನವೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇಂಥದ್ದೊಂದು ಗಂಭೀರ ಆರೋಪವನ್ನು ಕನ್ನಡಪರ ಹೋರಾಟಗಾರ ಹಾಗೂ ಬಿಗ್ಬಾಸ್ ಸೀಸನ್ 9ರ ಸ್ಪರ್ಧಿ ರೂಪೇಶ್ ರಾಜಣ್ಣ ಮಾಡಿದ್ದಾರೆ.
ಇದನ್ನೂ ಓದಿ: ಆ ನಟಿಯ ಕಾರಣಕ್ಕೆ ಜಗಳವಾಡಿ 5 ವರ್ಷ ಮಾತುಬಿಟ್ಟಿದ್ದರು ಶಾರುಖ್-ಸಲ್ಮಾನ್! ಜುಲೈ 17ರ ರಹಸ್ಯ ಬಯಲು | Shah Rukh – Salman
ಅಷ್ಟಕ್ಕೂ ಕಿಚ್ಚ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದೇನು ಅನ್ನೋದನ್ನು ನೋಡುವುದಾದರೆ, ಸೀಸನ್ 11ರ ಗ್ರಾಂಡ್ ಓಪನಿಂಗ್ ಎಪಿಸೋಡ್ 9.9 ಟಿಆರ್ಪಿಯೊಂದಿಗೆ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಇದಕ್ಕೆ ಸಂಬಂಧಿಸಿದ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಕಿಚ್ಚ, ಬಿಗ್ಬಾಸ್ ಸೀಸನ್ 11ರ ಮೇಲೆ ನೀವು ತೋರಿದ ಸ್ಪಂದನೆಗೆ ಧನ್ಯವಾದಗಳು. ಶೋ ಮತ್ತು ನನ್ನ ಮೇಲೆ ನೀವು ತೋರಿದ ಪ್ರೀತಿ ಮತ್ತು ಗೌರವ ಎಂಥದ್ದು ಎಂಬುದನ್ನು ಟಿಆರ್ಪಿ ನಂಬರ್ ಹೇಳುತ್ತಿದೆ. ಸುಮಾರು 11 ವರ್ಷಗಳ ಕಾಲ ಒಟ್ಟಿಗೆ ನಡೆದಿದ್ದೇನೆ. ಇನ್ನು ಮುಂದೆ ನಾನು ಮಾಡಬೇಕಾಗಿರುವುದನ್ನು ಮಾಡುವ ಸಮಯ ಬಂದಿದೆ. ಬಿಗ್ಬಾಸ್ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್ ಆಗಿರುತ್ತದೆ ಮತ್ತು ನನ್ನ ಈ ನಿರ್ಧಾರವನ್ನು ಕಲರ್ಸ್ ಕನ್ನಡ ಮತ್ತು ಈ ಎಲ್ಲಾ ವರ್ಷಗಳಿಂದ ಬಿಗ್ಬಾಸ್ ಶೋ ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ ಮತ್ತು ನಾನು ಕೂಡ ಸಾಧ್ಯವಾದಷ್ಟು ನಿಮ್ಮೆಲ್ಲರನ್ನು ರಂಜಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಪ್ಪುಗೆ ಸದಾ ಹೀಗೆ ಇರಲಿ ಎಂದು ಕಿಚ್ಚ ಬರೆದುಕೊಂಡಿದ್ದಾರೆ.
ಕಿಚ್ಚನ ಈ ದಿಢೀರ್ ನಿರ್ಧಾರದಿಂದ ಬಿಗ್ಬಾಸ್ ಅಭಿಮಾನಿಗಳು ಶಾಕ್ ಆಗಿದ್ದಾರೆ. ಎಷ್ಟೋ ಮಂದಿ ಸುದೀಪ್ಗಾಗಿಯೇ ಬಿಗ್ಬಾಸ್ ಶೋ ನೋಡುತ್ತಿದ್ದರು. ಅವರಿಲ್ಲದ ಶೋ ಅನ್ನು ಊಹಿಸಿಕೊಳ್ಳುವುದು ಕೂಡ ಕಷ್ಟ ಎಂದು ಹೇಳಿದವರಿದ್ದಾರೆ. ಹೀಗಾಗಿ ಕಿಚ್ಚ ಇದ್ದಕ್ಕಿದ್ದಂತೆ ಈ ನಿರ್ಧಾರ ಘೋಷಣೆ ಮಾಡಿದ್ದೇಕೆ ಎನ್ನುತ್ತಿದ್ದಾರೆ. ಇದರ ನಡುವೆ ಕಿಚ್ಚನ ಅವಮಾನ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇಂಥದ್ದೊಂದು ಗಂಭೀರ ಆರೋಪವನ್ನು ರೂಪೇಶ್ ರಾಜಣ್ಣ ಮಾಡಿದ್ದಾರೆ. ಬಿಗ್ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳೇ ನಿಮ್ಮ ಕಿತ್ತೋದ್ ಆಟಕ್ಕೆ ಕಿಚ್ಚ ಸುದೀಪ್ ಬಿಗ್ಬಾಸ್ ನಿರೂಪಣೆ ಮಾಡುವುದನ್ನು ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸಲ್ಲ. ಏ ಮುಂಬೈ ಮರಾಠಿ ಹಾಗೂ ತಮಿಳು ನಿರ್ದೇಶಕ ಮೊದಲು ಬಿಗ್ಬಾಸ್ ಬಿಡಿ ಇಲ್ಲ ಬಿಗ್ಬಾಸ್ ನಿಲ್ಲಿಸಬೇಕಾಗುತ್ತದೆ. ಅಸಲಿ ವಿಷಯವನ್ನು ನಾಳೆ ಮಾತಾಡ್ತೀನಿ ಎಂದು ರೂಪೇಶ್ ರಾಜಣ್ಣ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರೂಪೇಶ್ ಅವರು ಏನು ಮಾತನಾಡುತ್ತಾರೆ ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಮನೆ ಮಾಡಿದೆ. ಬಹುಶಃ ಇಂದು ಈ ವಿಚಾರವಾಗಿ ರೂಪೇಶ್ ರಾಜಣ್ಣ ಮಾತನಾಡುವ ಸಾಧ್ಯತೆ ಇದೆ.
ಇನ್ನು ಶೋ ಆರಂಭಕ್ಕೂ ಮುನ್ನವೇ ಬಿಗ್ಬಾಸ್ ನಿರೂಪಕರು ಬದಲಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಸುದೀಪ್ ಕೂಡ ಈ ಬಗ್ಗೆ ಮಾತನಾಡಿದ್ದರು. ನಿರೂಪಣೆ ನಿಲ್ಲಿಸಲು ಬಯಸಿದ್ದೆ ಆದರೆ, ಆಯೋಜಕರು ಮನವರಿಕೆ ಮಾಡಿದ ರೀತಿ ಇಷ್ಟವಾಯಿತು ಎಂದಿದ್ದರು. ಶೋ ಆರಂಭಕ್ಕೂ ಮುನ್ನ ರಿಷಭ್ ಶೆಟ್ಟಿ ಅವರ ಹೆಸರು ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಸುದೀಪ್ ಅವರೇ ನಿರೂಪಕರಾಗಿ ಕಾಣಿಸಿಕೊಂಡರು. ಇದೀಗ ಶೋನಿಂದ ಹೊರಹೋಗುವ ನಿರ್ಧಾರ ಘೋಷಣೆ ಮಾಡಿದ್ದಾರೆ. ಸುದೀಪ್ ಬದಲು ಮುಂದಿನ ಶೋ ಯಾರು ನಡೆಸಿಕೊಳ್ಳುತ್ತಾರೆ ಎಂಬ ಕುತೂಹಲವೂ ಮನೆ ಮಾಡಿದೆ.