ಸಿನಿವಾಣಿ

ಚಿತ್ರ ಮಾಡೋದಕ್ಕೆ ಕಾಸರವಳ್ಳಿ ಅವರಿಗೆ ಅಂಜಿಕೆ ಯಾಕೆ?

manjunathktgns

ಬೆಂಗಳೂರು: ಹಿರಿಯ ನಿರ್ದೇಶಕ ಗಿರೀಶ್​ ಕಾಸರವಳ್ಳಿ ಅವರ 15ನೇ ಚಿತ್ರ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಚಿತ್ರವು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರ, ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ಚಿತ್ರದ ಬಿಡುಗಡೆ ಯಾವಾಗ ಆಗಬಹುದು ಎಂದು ಸ್ವತಃ ಕಾಸರವಳ್ಳಿ ಅವರಿಗೂ ಗೊತ್ತಿಲ್ಲ.

ಇನ್ನು ಇದು ಅವರ ನಿರ್ದೇಶನದ 15ನೇ ಚಿತ್ರವಂತೆ. ಕಾಸರವಳ್ಳಿ ತಮ್ಮ 43 ವರ್ಷಗಳ ವೃತ್ತಿಜೀವನದಲ್ಲಿ ನಿರ್ದೇಶಿಸಿರುವುದು ಕೇವಲ 15 ಚಿತ್ರಗಳನ್ನು. ಈ ಸಂಖ್ಯೆ ಬಹಳ ಕಡಿಮೆಯಾಗಲಿಲ್ಲವಾ? ಎಂದರೆ, ಬಹಳ ಕಡಿಮೆಯಾಯಿತು ಎಂಬ ಉತ್ತರ ಅವರಿಂಬ ಬರುತ್ತದೆ. ಇನ್ನೂ ಕನಿಷ್ಠ 10 ಸಿನಿಮಾಗಳನ್ನಾದರೂ ಮಾಡಬಹುದಿತ್ತು ಎಂದು ಅವರು ಹೇಳುತ್ತಾರೆ.

ಈ ಕುರಿತು ಮಾತನಾಡಿರುವ ಅವರು, 'ನಿಜ ಹೇಳಬೇಕೆಂದರೆ, ಅನ್ಯಾಯ ಮಾಡಿಕೊಂಡೆ ಎಂದು ಆಗಾಗ ಅನಿಸುವುದುಂಟು. ಇನ್ನೂ ಕನಿಷ್ಠ 10 ಚಿತ್ರಗಳನ್ನಾದರೂ ನಿರ್ದೇಶಿಸಬಹುದಿತ್ತು. ನಿರ್ಮಾಪಕರೂ ಚಿತ್ರ ಮಾಡುವುದಕ್ಕೆ ಮುಂದೆ ಬಂದಿದ್ದರು. ಆದರೆ, ಅವರಿಗೆ ಎಲ್ಲಿ ಲಾಸ್​ ಆಗುತ್ತದೋ ಎಂಬ ಭಯ ಯಾವಾಗಲೂ ಕಾಡುತ್ತದೆ. ಹಾಗಾಗಿ ಎಷ್ಟೋ ಚಿತ್ರಗಳನ್ನು ನಿರ್ದೇಶಿಸುವುದಕ್ಕೆ ಹೋಗಲೇ ಇಲ್ಲ' ಎನ್ನುತ್ತಾರೆ ಅವರು.

ಕೆಲವು ವರ್ಷಗಳ ಹಿಂದೆ ಒಂದು ಚಿತ್ರ ಮಾಡಿಕೊಡಿ ಎಂಬ ಒಬ್ಬ ನಟಿ, ಕಾಸರವಳ್ಳಿ ಅವರ ಹತ್ತಿರ ಬಂದಿದ್ದರಂತೆ. 'ಒಂದು ಪಕ್ಷ ಚಿತ್ರದಿಂದ ನಷ್ಟವಾದರೆ ನಿಮಗೆ ತಡೆದುಕೊಳ್ಳುವುದಕ್ಕೆ ಸಾಧ್ಯವಾ? ಎಂದು ಕೇಳಿದೆ. ಏಕೆಂದರೆ, ಅದಕ್ಕೂ ಮುನ್ನ ಸೌಂದರ್ಯ, ತಾರಾ ಮತ್ತು ಜಯಮಾಲಾ ಅವರಿಗೆ ಚಿತ್ರ ಮಾಡಿಕೊಟ್ಟಿದ್ದೆ. ಅವರಿಗೆ ನಷ್ಟವಾದರೂ ತಡೆದುಕೊಳ್ಳುವ ಶಕ್ತಿ ಇತ್ತು. ಆ ಶಕ್ತಿ ಆ ನಟಿಗೆ ಇದೆ ಅಂತ ಅನಿಸಲಿಲ್ಲ. ಹಾಗಾಗಿ ಅವರಿಗೆ ಚಿತ್ರ ಮಾಡೋದು ಬೇಡ ಎಂದು ಹೇಳಿ ಕಳುಹಿಸಿದೆ' ಎನ್ನುತ್ತಾರೆ ಗಿರೀಶ್​ ಕಾಸರವಳ್ಳಿ.

ಈಗಲೂ ಒಬ್ಬ ನಿರ್ಮಾಪಕರು ಕಾಸರವಳ್ಳಿ ಅವರಿಗೆ ಚಿತ್ರ ಮಾಡಿಕೊಡಿ ಎಂದು ಅಡ್ವಾನ್ಸ್​ ಕೊಟ್ಟಿದ್ದಾರಂತೆ. 'ಈ ಚಿತ್ರ ಬಿಡುಗಡೆಯಾಗಲಿ, ಅದರ ಹಣೆಬರಹ ನೋಡಿಕೊಂಡು ಮುಂದುವರೆಯೋಣ ಅಂತ ಹೇಳಿದ್ದೇನೆ. ಈ ಸಿನಿಮಾ ಗೆಲ್ಲಲಿಲ್ಲ ಎಂದರೆ ಅವರ ಹತ್ತಿರ ಖರ್ಚು ಮಾಡಿಸಿ, ಬೈಸಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ಸದ್ಯ ಇದುವರೆಗೂ ಯಾವ ನಿರ್ಮಾಪಕರೂ ನನಗೆ ಹಾಗೆ ಬೈದಿಲ್ಲ. ಹಾಗೆಯೇ, ಇಲ್ಲಿಯವರೆಗೂ ಯಾವ ನಿರ್ಮಾಪಕರಿಗೂ ನನ್ನಿಂದ ಸಮಸ್ಯೆ ಆಗಿಲ್ಲ. ಕೆಲವು ಚಿತ್ರಗಳು ಚೆನ್ನಾಗಿಯೇ ದುಡ್ಡು ಮಾಡಿದವು' ಎಂದು ನೆನಪಿಸಿಕೊಳ್ಳುತ್ತಾರೆ ಕಾಸರವಳ್ಳಿ.