ಸಿನಿವಾಣಿ

ಅಮೀರ್​​​​ ಖಾನ್​​ ಪ್ರೀತಿಯ ಬಲೆಗೆ ಬೀಳಲು ಕಾರಣವೇನು? ಗೌರಿ ಸ್ಪ್ರಾಟ್​ ಕೊಟ್ಟ ಉತ್ತರ ವೈರಲ್​​... Gauri Spratt

Gauri Spratt : ಈಗಾಗಲೇ ಇಬ್ಬರನ್ನು ಮದುವೆಯಾಗಿ ವಿಚ್ಛೇದನಾ ಪಡೆದುಕೊಂಡಿರುವ ಬಾಲಿವುಡ್ ಮಿ.ಪರ್ಫೆಕ್ಟ್​ ಅಮೀರ್​​ ಖಾನ್​, ಇದೀಗ ಮೂರನೇ ವಿವಾಹಕ್ಕೆ ರೆಡಿಯಾಗುತ್ತಿದ್ದಾರೆ. ಹೌದು, ಬೆಂಗಳೂರು ಮೂಲದ ಮಹಿಳೆ ಗೌರಿ ಸ್ಪ್ರಾಟ್​ ಎಂಬಾಕೆಯೊಂದಿಗೆ ಡೇಟಿಂಗ್​ ಮಾಡುತ್ತಿರುವುದನ್ನು ಸ್ವತಃ ಅಮೀರ್​ ಖಾನ್ ಮಾಧ್ಯಮಗಳ ಮುಂದೆ​ ಖಚಿತಪಡಿಸಿದ್ದಾರೆ.

ತಮ್ಮ 60ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಡೇಟಿಂಗ್​ ಮಾಹಿತಿಯನ್ನು ಅಮೀರ್​ ಖಾನ್​ ಹಂಚಿಕೊಂಡರು. ಕಳೆದ 2 ವರ್ಷಗಳಿಂದ ಗೌರಿ ಸ್ಪ್ರಾಟ್​ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ತಿಳಿಸಿದರು.

ಆರು ವರ್ಷದ ಮಗುವಿನ ತಾಯಿಯಾಗಿರುವ ಸ್ಪ್ರಾಟ್, ಅಮೀರ್ ಖಾನ್ ಪ್ರೀತಿಯ ಬಲೆಯಲ್ಲಿ ಬೀಳಲು ಕಾರಣ ಏನೆಂಬುದನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಅಮೀರ್​ ಖಾನ್​ ಅವರಲ್ಲಿರುವ ದಯೆಯೇ ಅವರ ಪ್ರೀತಿಯಲ್ಲಿ ಬೀಳಲು ನನ್ನನ್ನು ಪ್ರೇರೇಪಿಸಿತು ಎಂದಿದ್ದಾರೆ. ದಯೆ, ಸಜ್ಜನ ಮತ್ತು ಕಾಳಜಿಯುಳ್ಳ ವ್ಯಕ್ತಿ ಬೇಕೆಂದು ನಾನು ಬಯಸಿದ್ದೆ. ಅದೆಲ್ಲವೂ ಅಮೀರ್​ ಖಾನ್ ಅವ​ರಲ್ಲಿದೆ. ಹೀಗಾಗಿ ನಾನು ಅವರನ್ನು ಇಷ್ಟಪಟ್ಟೆ ಎಂದು ಸ್ಪ್ರಾಟ್​ ಹೇಳಿದ್ದಾರೆ.

ಇನ್ನು ಸ್ಪ್ರಾಟ್ ಬಗ್ಗೆ ಮಾತನಾಡಿರುವ ಅಮೀರ್​ ಖಾನ್​, ಆಕೆ ಬೆಂಗಳೂರಿನಲ್ಲಿ ವಾಸಿಸುತ್ತಿರುವುದರಿಂದ ನನ್ನ ಬಹುತೇಕ ಸಿನಿಮಾಗಳನ್ನು ನೋಡಿಲ್ಲ. ಅವರ ಸಿನಿಮಾ ಅಭಿರುಚಿಯೇ ಬೇರೆ ಇತ್ತು. ವಿವಿಧ ರೀತಿಯ ಚಲನಚಿತ್ರಗಳು ಮತ್ತು ಕಲೆಗಳತ್ತ ಗಮನ ಹರಿಸುತ್ತಿದ್ದರು. ಆದ್ದರಿಂದ ಅವರು ಹಿಂದಿ ಚಲನಚಿತ್ರಗಳನ್ನು ನೋಡುವುದಿಲ್ಲ. ಬಹುಶಃ ನನ್ನ ಹೆಚ್ಚಿನ ಸಿನಿಮಾಗಳನ್ನು ನೋಡಿಲ್ಲ ಎಂದು ಅಮೀರ್​ ಖಾನ್​ ಹೇಳಿದರು.

ಅಂದಹಾಗೆ ಖಾನ್ ಮತ್ತು ಸ್ಪ್ರಾಟ್ 25 ವರ್ಷಗಳಿಗೂ ಹೆಚ್ಚು ಕಾಲ ಒಬ್ಬರಿಗೊಬ್ಬರು ಪರಿಚಿತರು. ಆದರೆ, ಇಬ್ಬರ ನಡುವಿನ ಸಂಪರ್ಕ ಕಳೆದುಕೊಂಡ ನಂತರ ಕೇವಲ ಎರಡು ವರ್ಷಗಳ ಹಿಂದೆ ಮತ್ತೆ ಮತ್ತೆ ಒಂದಾದರು. ಇಬ್ಬರ ನಡುವಿನ ಮರು ಪರಿಚಯ ಹೊಸ ಸಂಬಂಧ ಬೆಳೆಯಲು ಕಾರಣವಾಯಿತು. ಇನ್ನು ಮೂರನೇ ಬಾರಿಗೆ ಪ್ರೀತಿಯಲ್ಲಿ ಬೀಳಲು ಕಾರಣವೇನೆಂದು ಅಮೀರ್​ರನ್ನು ಪ್ರಶ್ನಿಸಿದಾಗ, ಜನಪ್ರಿಯ ಬಾಲಿವುಡ್ ನಟನಾದ ನಾನು ಶಾಂತವಾಗಿರಬಹುದಾದ ಮತ್ತು ನನಗೆ ಶಾಂತಿ ನೀಡುವ ವ್ಯಕ್ತಿಗಾಗಿ ನಾನು ಹುಡುಕುತ್ತಿದ್ದೆ. ಅದು ಗೌರಿಯಲ್ಲಿತ್ತು ಎಂದಿದ್ದಾರೆ.

ಖಾನ್ ಮತ್ತು ಸ್ಪ್ರಾಟ್ ಸದ್ಯ ಸಂಬಂಧದಲ್ಲಿದ್ದರೂ, ಮದುವೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲವಂತೆ. ಈಗ 60ನೇ ವಯಸ್ಸಿನಲ್ಲಿ ಮದುವೆಯಾಗುವುದು ನನಗೆ ಸರಿಹೊಂದುವುದಿಲ್ಲ. ಆದರೆ ನೋಡೋಣ ಎಂದು ಹೇಳಿದ್ದಾರೆ.

ಯಾರು ಈ ಗೌರಿ ಸ್ಪ್ರಾಟ್..?

ಗೌರಿ ಬೆಂಗಳೂರಿನವರು. ಬೆಂಗಳೂರಿನಲ್ಲಿ ಸಲೂನ್ ಹೊಂದಿದ್ದ ರೀಟಾ ಸ್ಪ್ರಾಟ್ ಅವರ ಪುತ್ರಿಯೇ ಈ ಗೌರಿ. ತಮ್ಮ ಜೀವನದುದ್ದಕ್ಕೂ ನಗರದಲ್ಲಿ ವಾಸಿಸುತ್ತಿರುವ ಗೌರಿ ಆಕೆಯ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಪ್ರಸ್ತುತ ಮುಂಬೈನಲ್ಲಿ ಬಿಬ್ಲಂಟ್ ಸಲೂನ್ ಅನ್ನು ನಡೆಸುತ್ತಿದ್ದಾರೆ. ಗೌರಿಗೆ ಆರು ವರ್ಷದ ಮಗುವಿದ್ದು, 25 ವರ್ಷಗಳಿಂದ ಅಮೀರ್ ಪರಿಚಯವಿದೆ. ಆದರೆ ಅಮೀರ್​ಗೆ ಪರಿಚಯವಿದ್ದರೂ ಕಳೆದ ಎರಡು ವರ್ಷಗಳಿಂದ ತುಂಬಾ ಅತ್ಮೀಯತೆ ಬೆಳಸಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಸಿದೆ.

ಅಮೀರ್ ಖಾನ್ ಅವರ ಪತ್ನಿಯರ ಬಗ್ಗೆ ವಿಚಾರಕ್ಕೆ ಬರುವುದಾದರೆ, ಅವರು 1986 ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾದರು. ರೀನಾ ಮತ್ತು ಆಮಿರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ 2002 ರಲ್ಲಿ ಬೇರ್ಪಟ್ಟರು. ಅದಾದ ನಂತರ ಆಮಿರ್ 2005 ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದರು. ಹಲವು ವರ್ಷಗಳ ದಾಂಪತ್ಯದ ನಂತರ ಕಿರಣ್ ಮತ್ತು ಆಮಿರ್ 2021 ರಲ್ಲಿ ಬೇರ್ಪಟ್ಟರು. ಆಮಿರ್ ಮತ್ತು ಕಿರಣ್ ದಂಪತಿಗೆ ಒಬ್ಬ ಮಗನೂ ಇದ್ದಾನೆ.

ಅಂದಹಾಗೆ ಅಮೀರ್ ಖಾನ್ ಮಾರ್ಚ್ 14ರಂದು 60ನೇ ವರ್ಷಕ್ಕೆ ಕಾಲಿಟ್ಟರು. ಅವರು ಮುಂದಿನ ಚಿತ್ರ 'ಸೀತಾರೆ ಜಮೀನ್ ಪರ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಈ ವರ್ಷದ ಡಿಸೆಂಬರ್ 25ರಂದು ಕ್ರಿಸ್‌ಮಸ್‌ಗೆ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)