ಸಿನಿವಾಣಿ

ಕಾಲಿವುಡ್​ ಖ್ಯಾತ ನಟ ರೋಬೋ ಶಂಕರ್​ ಹಠಾತ್​ ನಿಧನಕ್ಕೆ ಕಾರಣವೇನು? ಪಾಂಡಿಯಮ್ಮಗೆ ಪಿತೃ ವಿಯೋಗ! Robo Shankar

Robo Shankar : ಜನಪ್ರಿಯ ತಮಿಳು ನಟ ಹಾಗೂ ಹಾಸ್ಯ ಕಲಾವಿದ ರೋಬೋ ಶಂಕರ್ ಅವರ ಹಠಾತ್ ನಿಧನವು ಕಾಲಿವುಡ್​ ಸಿನಿಮಾ ರಂಗಕ್ಕೆ ಬಿಗ್​ ಶಾಕ್​ ನೀಡಿದೆ. ಅವರ ಸಾವಿರಾರು ಅಭಿಮಾನಿಗಳನ್ನು ದುಃಖದ ಕಡಲಲ್ಲಿ ಮುಳುಗಿಸಿದೆ.

ರೋಬೋ ಶಂಕರ್ ಅವರು ತಮ್ಮ ಕಾಮಿಡಿ ಟೈಮಿಂಗ್​ ಮತ್ತು ವಿಶಿಷ್ಟ 'ರೋಬೋ-ಶೈಲಿಯ' ನೃತ್ಯಕ್ಕೆ ಜನಪ್ರಿಯರಾಗಿದ್ದರು. ಗುರುವಾರ (ಸೆ.18) ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ. ಕೇವಲ 46ನೇ ವಯಸ್ಸಿನಲ್ಲಿ ಹಠಾತ್ ನಿಧನ ಹೊಂದಿದ್ದು, ಅವರ ಸಾವಿನ ಹಿಂದಿರುವ ಕಾರಣಗಳ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ರೋಬೋ ಶಂಕರ್ ಸಾವಿನ ಬಗ್ಗೆ ವೈದ್ಯರು ನೀಡಿದ ವಿವರಗಳ ಪ್ರಕಾರ, ಜಟಿಲವಾದ ಹೊಟ್ಟೆಯ ಕಾಯಿಲೆ ಮತ್ತು ತೀವ್ರ ಜಠರಗರುಳಿನ ರಕ್ತಸ್ರಾವದಿಂದಾಗಿ ರೋಬೋ ಅವರ ಸ್ಥಿತಿ ಹದಗೆಟ್ಟಿತು. ವೈದ್ಯಕೀಯ ತಂಡದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಬಹು ಅಂಗಾಂಗ ವೈಫಲ್ಯದಿಂದಾಗಿ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಹಲವಾರು ವರದಿಗಳ ಪ್ರಕಾರ, ರೋಬೋ ಶಂಕರ್ ಇತ್ತೀಚೆಗೆ ಕಾಮಾಲೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ದೀರ್ಘಕಾಲೀನ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಯ ನಂತರ, ಅವರು ಗಮನಾರ್ಹ ಪ್ರಮಾಣದ ತೂಕವನ್ನು ಕಳೆದುಕೊಂಡಿದ್ದರು ಎನ್ನಲಾಗಿದೆ. ದಿಢೀರನೇ ತೂಕ ಕಳೆದುಕೊಂಡಿದ್ದು ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಚಿಂತೆಗೀಡು ಮಾಡಿತು. ಅಲ್ಲದೆ, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು ಆದರೆ, ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಮೊದಲೇ ಒಪ್ಪಿಕೊಂಡಿದ್ದ ಚಲನಚಿತ್ರಗಳನ್ನು ಮುಗಿಸಲು ಮತ್ತೆ ನಟನೆ ಆರಂಭಿಸಿದ್ದರು. ಈ ಮಧ್ಯೆ, ಅವರ ಆರೋಗ್ಯ ತೀವ್ರ ಹದಗೆಟ್ಟಿತು. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಶಂಕರ್ ಅವರ ಸಾವು ಕುಟುಂಬ ಸದಸ್ಯರು ಮತ್ತು ಇಡೀ ಚಲನಚಿತ್ರೋದ್ಯಮ ವಲಯವನ್ನು ದುಃಖದಲ್ಲಿ ಮುಳುಗಿಸಿದೆ. ಅವರ ಅತಿಯಾದ ಮದ್ಯಪಾನ, ಕಾಮಾಲೆ ಮತ್ತು ದಿಢೀರ್​ ತೂಕ ನಷ್ಟವು ಅವರ ಜೀವನದ ಮೇಲೆ ಪರಿಣಾಮ ಬೀರಿತು ಎಂದು ನಂಬಲಾಗಿದೆ. ರೋಬೋ ಶಂಕರ್, ಅಜಿತ್, ಸೂರ್ಯ, ಧನುಷ್ ಮತ್ತು ಶಿವಕಾರ್ತಿಕೇಯನ್ ಅವರಂತಹ ಅನೇಕ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ. ಹೀರೋ, ಚಕ್ರ, ಮಾರಿ 2, ಇರುಂಬು ಥಿರೈ ಮತ್ತು ಸಿಂಗಂ 3 ಸೇರಿದಂತೆ ಪ್ರಮುಖ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅಂದಹಾಗೆ, ರೋಬೋ ಶಂಕರ್ ಅವರು ತಮ್ಮ ಕೊನೆಯ ದಿನಗಳಲ್ಲಿ ಪತ್ನಿ ಪ್ರಿಯಾಂಕಾ ಶಂಕರ್ ಅವರ ಪಕ್ಕದಲ್ಲಿದ್ದರು. ಪ್ರಿಯಾ ಶಂಕರ್ ಅವರು ನಟಿ ಮತ್ತು ಪ್ಲಸ್-ಸೈಜ್ ಮಾಡೆಲ್ ಆಗಿಯೂ ಹೆಸರುವಾಸಿಯಾಗಿದ್ದಾರೆ. ಪ್ರಿಯಾಂಕಾ 2020 ರಲ್ಲಿ ಕನ್ನಿ ಮದನ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ಕುಕ್ ವಿತ್ ಕೋಮಲಿ ಸೀಸನ್ 1 ಮತ್ತು ಕಲಕ್ಕ ಪೊವತು ಯಾರು ಸೀಸನ್ 8 ನಂತಹ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದರು.

ಇನ್ನು ರೋಬೋ ಶಂಕರ್ ಅವರ ಪುತ್ರಿ ಇಂದ್ರಜಾ, ಪಾಂಡಿಯಮ್ಮ ಎಂದೇ ಖ್ಯಾತಿ ಪಡೆದಿದ್ದಾರೆ. ನಟ ವಿಜಯ್​ ನಟನೆಯ ಸೂಪರ್​ ಹಿಟ್​ ಬಿಗಿಲ್​ ಸಿನಿಮಾದಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದರು. ಕೇವಲ ಒಂದು ವರ್ಷದ ಹಿಂದಷ್ಟೇ ಇಂದ್ರಜಾ ಅವರ ಮದುವೆ ಆಗಿತ್ತು. ಇದೀಗ ಕುಟುಂಬಕ್ಕೆ ಆಧಾರವಾಗಿದ್ದ ರೋಬೋ ಶಂಕರ್​ ಅವರನ್ನು ಕಳೆದುಕೊಂಡ ಕುಟುಂಬ ಬಡವಾಗಿದೆ. (ಏಜೆನ್ಸೀಸ್​)