ಸಿನಿವಾಣಿ

ಬಚ್ಚನ್ ಮನೆಯಲ್ಲಿ ಐಶ್ವರ್ಯಾ ರೈ ಜೀವನ ಹೇಗಿತ್ತು? ನೆರೆಮನೆಯ ನಿರ್ದೇಶಕ ಬಿಚ್ಚಿಟ್ಟ ಅಸಲಿ ಸಂಗತಿ ಇಲ್ಲಿದೆ... Aishwarya Rai

Aishwarya Rai : ಬಾಲಿವುಡ್ ತಾರಾ ದಂಪತಿಯಾದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಕೆಲವು ಸಮಯದಿಂದ ಆಗಾಗ ಕೇಳಿಬರುತ್ತಲೇ ಇದೆ. ಐಶ್ವರ್ಯಾ ಅವರು ತಮ್ಮ ಮಗಳ ಜೊತೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೆ ಬಚ್ಚನ್ ಕುಟುಂಬದೊಂದಿಗೆ ಹಾಜರಾಗದಿದ್ದಾಗ ಈ ವದಂತಿಗಳು ಪ್ರಾರಂಭವಾದವು. ಅಂದಿನಿಂದ ಐಶ್ವರ್ಯಾ ಮತ್ತು ಅಭಿಷೇಕ್​ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.

ಅಭಿಷೇಕ್ ಅವರು ನಟಿ ನಿಮ್ರಿತ್ ಕೌರ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾರೆ. ಈ ಕಾರಣಕ್ಕೆ ಐಶ್ವರ್ಯಾ ಮತ್ತು ಅಭಿಷೇಕ್ ನಡುವೆ ವೈಮನಸ್ಸು ಮೂಡಿದೆ ಎಂಬ ಕೆಲ ವಂದತಿಗಳು ಹರಡಿದವು. ಅಲ್ಲದೆ, ಐಶ್ವರ್ಯಾ ಅವರು ಬಚ್ಚನ್ ಮನೆಯಲ್ಲಿ ವಾಸಿಸುತ್ತಿಲ್ಲ, ಬದಲಾಗಿ ತಮ್ಮ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬು ಸುದ್ದಿಗಳು ಹರಿದಾಡಿದವು. ಇಂದಿಗೂ ಹರಿದಾಡುತ್ತಲೇ ಇವೆ.

ಇದೀಗ, ಖ್ಯಾತ ಜಾಹೀರಾತು ನಿರ್ದೇಶಕ ಪ್ರಹ್ಲಾದ್ ಕಕ್ಕರ್ ಈ ಎಲ್ಲ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಅಂದಹಾಗೆ, ಪ್ರಹ್ಲಾದ್ ತಮ್ಮ ವೃತ್ತಿಜೀವನದ ಆರಂಭದಿಂದಲೂ ಐಶ್ವರ್ಯಾ ಜತೆಗಿದ್ದಾರೆ. ಕಕ್ಕರ್ ಅವರು ಮುಂಬೈನಲ್ಲಿರುವ ಐಶ್ವರ್ಯಾ ಅವರ ತಾಯಿಯ ಕಟ್ಟಡದಲ್ಲೇ ವಾಸಿಸುತ್ತಿದ್ದಾರೆ. ಐಶ್ವರ್ಯಾ ಮತ್ತು ಅಭಿಷೇಕ್ ಪ್ರತ್ಯೇಕವಾಗಿದ್ದಾರೆ ಎಂಬ ಸುದ್ದಿಗೆ ಕಕ್ಕರ್ ಅವರು ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.

ಬಾಲಿವುಡ್​ನ ತಾರಾ ದಂಪತಿ ಬೇರೆಯಾಗುತ್ತಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಪ್ರಹ್ಲಾದ್ ಕಕ್ಕರ್ ಹೇಳಿದ್ದಾರೆ. ನೀವು ಕೇಳುತ್ತಿರುವ ವದಂತಿಗಳು ನಿಜವಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಒಂದೇ ಕಟ್ಟಡದಲ್ಲಿ ವಾಸಿಸುತ್ತೇವೆ. ಐಶ್ವರ್ಯಾ ಇಲ್ಲಿ ಎಷ್ಟು ಸಮಯ ಕಳೆಯುತ್ತಾರೆಂದು ನನಗೆ ತಿಳಿದಿದೆ. ಅದಕ್ಕೆ ಒಂದು ಕಾರಣವಿದೆ. ಆಕೆಯ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬೆಳಗ್ಗೆ ಮಗಳನ್ನು ಶಾಲೆಗೆ ಕಳುಹಿಸಿದ ನಂತರ, ಅವರು ತಮ್ಮ ತಾಯಿಯೊಂದಿಗೆ ಮೂರು ಗಂಟೆಗಳ ಕಾಲ ಕಳೆಯುತ್ತಾರೆ. ಬಳಿಕ ಒಂದು ಗಂಟೆಗೆ ತಮ್ಮ ಮಗಳನ್ನು ಕರೆದುಕೊಂಡು ಬಚ್ಚನ್​ ಮನೆಗೆ ಹೋಗುತ್ತಾರೆ. ಕೆಲವೊಮ್ಮೆ ಅಭಿಷೇಕ್ ಕೂಡ ಐಶ್ವರ್ಯಾ ತಾಯಿಯನ್ನು ನೋಡಲು ಬರುತ್ತಾರೆ. ಅವರಿನ್ನೂ ಬಚ್ಚನ್ ಕುಟುಂಬದ ಸೊಸೆ. ಅವರು ಇನ್ನೂ ಬಚ್ಚನ್​ ಮನೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಕಕ್ಕರ್ ಸ್ಪಷ್ಟಪಡಿಸಿದರು.

ಐಶ್ವರ್ಯಾ ಮತ್ತು ಅವರ ಅತ್ತೆ ಜಯಾ ಬಚ್ಚನ್ ಮತ್ತು ನಾದಿನಿ ಶ್ವೇತಾ ಬಚ್ಚನ್ ನಡುವಿನ ವದಂತಿಯ ಬಗ್ಗೆ ಕೇಳಿದಾಗ, ಅದೆಲ್ಲ ಸುಳ್ಳು. ಅವರ ನಡುವೆ ಯಾವುದೇ ವೈಮನಸ್ಸಿಲ್ಲ. ಐಶ್ವರ್ಯಾ ಅವರು ಆ ಮನೆಯ ಒಡತಿ. ಅವರಿನ್ನೂ ಆ ಮನೆಯನ್ನು ನಿರ್ವಹಿಸುತ್ತಿದ್ದಾರೆ ಎಂದರು.

ಎಲ್ಲರೂ ಹೇಳುತ್ತಿದ್ದಾರೆ ಆಕೆ ಬಚ್ಚನ್​ ಕುಟುಂಬದೊಂದಿಗೆ ಇರದೇ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾಳೆ ಎಂದು. ಆದರೆ, ಅವಳ ಮಗಳು ಶಾಲೆಯಲ್ಲಿದ್ದಾಗ ಬೆಳಗ್ಗೆ ಮಾತ್ರ ಆಕೆಯ ತನ್ನ ತಾಯಿಯನ್ನು ಭೇಟಿ ಮಾಡುತ್ತಾಳೆ. ಭಾನುವಾರ ಮಾತ್ರ ಬರುವುದಿಲ್ಲ. ಐಶ್ವರ್ಯಾಗೆ ತನ್ನ ತಾಯಿಯೆಂದರೆ ತುಂಬಾ ಇಷ್ಟ. ಆಕೆಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಕೆಲವೊಮ್ಮೆ, ಅಭಿಷೇಕ್ ಕೂಡ ಮನೆಗೆ ಬರುತ್ತಾರೆ. ಹೀಗಿರುವಾಗ ವೈಮನಸ್ಸು ಎನ್ನುವಂಥದ್ದು ಏನಿದೆ ಎಂದು ಕಕ್ಕರ್​ ಹೇಳಿದ್ದಾರೆ.

ಇನ್ನು ಸಾಕಷ್ಟು ವದಂತಿಗಳ ನಡುವೆಯೂ ಗೌರವಯುತವಾಗಿ ಮೌನವನ್ನು ಕಾಯ್ದುಕೊಂಡಿದ್ದಕ್ಕಾಗಿ ಪ್ರಹ್ಲಾದ್ ಕಕ್ಕರ್ ದಂಪತಿಯನ್ನು ಶ್ಲಾಘಿಸಿದರು. ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಯಾವಾಗಲೂ ತಮ್ಮ ಘನತೆಯನ್ನು ಉಳಿಸಿಕೊಂಡಿದ್ದಾರೆ ಎಂದರು. (ಏಜೆನ್ಸೀಸ್​)