ಮುಂಬೈ: ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರವಾದ 'ಲಕ್ಷ್ಮೀ' ಕೊನೆಗೂ ಸೋಮವಾರ ರಾತ್ರಿ ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನ ಈ ಚಿತ್ರ ಸಾಕಷ್ಟು ಹೈಪ್ ಹುಟ್ಟುಹಾಕಿದ್ದಷ್ಟೇ ಅಲ್ಲ, ಅತೀ ಹೆಚ್ಚು ಬೆಲೆಗೆ ಓಟಿಟಿಗೆ ಮಾರಾಟವಾದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಇಷ್ಟೆಲ್ಲಾ ಸದ್ದು ಮಾಡಿದ ಈ ಈ ಚಿತ್ರ ಹೇಗಿದೆ? ಜನ ಮತ್ತು ವಿಮರ್ಶಕರು ಈ ಚಿತ್ರದ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲ ಸಹಜ.
'ಲಕ್ಷ್ಮೀ' ನೋಡಿದ ಜನರ ಬಹುತೇಕ ಒಂದೇ ಅಭಿಪ್ರಾಯ. ಬಹುಶಃ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸದಿದ್ದರೆ, ಈ ಚಿತ್ರದಲ್ಲಿ ಏನೂ ಇಲ್ಲ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲ, ಅಕ್ಷಯ್ ಕುಮಾರ್ ಅಭಿನಯ ಬಿಟ್ಟರೆ, ಚಿತ್ರ ಸ್ವಲ್ಪವೂ ಚೆನ್ನಾಗಿಲ್ಲ, ಇದೊಂದು ನಾನ್ಸೆನ್ಸ್ ಚಿತ್ರ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಬರೀ ಜನರಷ್ಟೇ ಅಲ್ಲ, ಎಲ್ಲಾ ಖ್ಯಾತ ಪತ್ರಿಕೆಗಳ ಮತ್ತು ವೆಬ್ಸೈಟ್ಗಳ ವಿಮರ್ಶೆಗಳಲ್ಲೂ ಇದು ವ್ಯಕ್ತವಾಗಿದ್ದು, ಹಲವು ವಿಮರ್ಶಕರು ಚಿತ್ರಕ್ಕೆ ಎರಡು, ಎರಡೂವರೆ ಸ್ಟಾರ್ಗಳನ್ನು ಕೊಟ್ಟಿದ್ದಾರೆ. ಚಿತ್ರವನ್ನು ಕೂತು ನೋಡುವದೇ ಕಷ್ಟ ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ‘ಆ 11ಗಂಟೆ’ಯಲ್ಲಿ ತಮನ್ನಾ ಭಾಟಿಯಾ ಮಾಡುವುದೇನು?
ಇದೇ ಚಿತ್ರ ಮೊದಲಿಗೆ ತಮಿಳಿನಲ್ಲಿ 'ಕಾಂಚನಾ' ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಕನ್ನಡಕ್ಕೆ ಉಪೇಂದ್ರ ಅಭಿನಯದಲ್ಲಿ 'ಕಲ್ಪನಾ' ಎಂದು ರೀಮೇಕ್ ಆಗಿತ್ತು. ಈ ಎರಡು ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರ, ಹಿಂದಿಗೆ 'ಲಕ್ಷ್ಮೀ' ಎಂಬ ಹೆಸರಿನಲ್ಲಿ ರೀಮೇಕ್ ಆಗಿತ್ತು.
ಕೆಲವು ದಿನಗಳ ಹಿಂದೆ 'ಲಕ್ಷ್ಮೀ' ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಸಾಕಷ್ಟು ಹಿಟ್ ಆಗಿತ್ತು. ಆದರೆ, ಟ್ರೈಲರ್ ಚೆನ್ನಾಗಿದೆ ಎಂದ ಮಾತ್ರಕ್ಕೆ ಚಿತ್ರ ಚೆನ್ನಾಗಿರಲೇಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.