ಸಿನಿವಾಣಿ

ಹೋರಾಟಕ್ಕೆ ಸಿದ್ಧರಾದ ಯಶ್​ ಮತ್ತು ರಾಧಿಕಾ!; ಪುತ್ರಿ ಐರಾ ಸಹ ಭಾಗಿ..

ಬೆಂಗಳೂರು: ಕೋವಿಡ್ 19 ಪ್ರಕರಣಗಳು ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ನಾಡಿನ ಜನರನ್ನು ಎಚ್ಚರಿಸುತ್ತಿದೆ. ಅದೇ ರೀತಿ ಸೆಲೆಬ್ರಿಟಿಗಳೂ ತಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಅಭಿಮಾನಿಗಳಿಗೆ ಜಾಗೃತಿ ಸಂದೇಶ ರವಾನಿಸುತ್ತಿದ್ದಾರೆ. ಆ ಪೈಕಿ ಯಶ್ ಕುಟುಂಬ ಇದೀಗ ಮಾಸ್ಕ್ ಬಗ್ಗೆ ಅಭಿಮಾನಿಗಳಿಗೆ ಕಿವಿ ಮಾತು ಹೇಳಿದೆ.

ಹೌದು, ಯಶ್, ರಾಧಿಕಾ ಪಂಡಿತ್ ಮತ್ತು ಮಗಳು ಐರಾ ಮುಖಕ್ಕೆ ಮಾಸ್ಕ್ ಧರಿಸಿದ ಫೋಟೋವೊಂದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ಹೋರಾಟ ಇಲ್ಲಿಗೆ ಮುಗಿದಿಲ್ಲ. ಸದ್ಯ ನಾವು ಅತೀ ಕಠಿಣ ಪರಿಸ್ಥಿತಿಯಲ್ಲಿದ್ದೇವೆ. ಅಷ್ಟೇ ಬೇಗ ಈ ಸ್ಥಿತಿ ನಮ್ಮಿಂದ ಹೋಗಲಿದೆ. ಅಲ್ಲಿಯವರೆಗೂ ಮಾಸ್ಕ್ ಹಾಕುವುದನ್ನು ಮರೆಯಬೇಡಿ. ನೆನಪಿರಲಿ ದಯವಿಟ್ಟು ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಆರಾಮವಾಗಿರಿ, ಮನೆಯಲ್ಲೇ ಇರಿ’ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆನ ಕೆಲ ದಿನಗಳಿಂದ ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳೊಂದಿಗೆ ಕ್ವಾಲಿಟಿ ಸಮಯವನ್ನು ಕಳೆಯುದ್ದಾರೆ. ಮಕ್ಕಳ ವಿಡಿಯೋಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಇದೀಗ ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದ್ದಂತೆ, ಜಾಗೃತಿ ಮೂಡಿಸುವ ಉದ್ದೇಶದಿಂದ ಮಾಸ್ಕ್‌ನ ಬಳಕೆ ನಿಲ್ಲಿಸಬೇಡಿ ಎಂದು ಹೇಳಿಕೊಂಡಿದ್ದಾರೆ.