ಸಿನಿವಾಣಿ

ವೈರಲ್​ ಆಗ್ತಿವೆ ವಿಕಿ-ಕತ್ರಿನಾ 'ಮದುವೆ' ಫೋಟೋಗಳು!

ಬೆಂಗಳೂರು: ಇಂದು 'ಸಾತ್​​ ಫೇರೆ' ಪೂರೈಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಎಂದು ನಂಬಲಾಗಿರುವ ಬಾಲಿವುಡ್​ ಹಾಟ್​ ಕಪಲ್​ ಕತ್ರೀನಾ ಕೈಫ್​ ಮತ್ತು ವಿಕಿ ಕೌಶಲ್​ ತಮ್ಮ ಮದುವೆಯ ಯಾವ ಫೋಟೋ-ವಿಡಿಯೋಗಳೂ ಹೊರಬೀಳದಂತೆ ಭಾರೀ ಎಚ್ಚರಿಕೆ ವಹಿಸಿದ್ದಾರೆ. ರಾಜಸ್ಥಾನದ ಸವಾಯಿ ಮಾಧೋಪುರದ ಫೋರ್ಟ್​ ಬರ್ವಾರದಲ್ಲಿ ನಡೆಯುತ್ತಿರುವ ಅವರ ವಿವಾಹ ಸಮಾರಂಭದ ರಸಕ್ಷಣಗಳ ಪ್ರಸಾರ ಹಕ್ಕುಗಳನ್ನು ಒಟಿಟಿ ವೇದಿಕೆಗಳು ಖರೀದಿಸುತ್ತಿವೆ ಎಂಬುದೂ ಚರ್ಚೆಯಾಗುತ್ತಿದೆ.

ಹೀಗಿರುವಾಗ ಜಾಲತಾಣದಲ್ಲಿ ವಿಕಿ ಮತ್ತು ಕತ್ರೀನಾರ ಮದುವೆ ಸಂದರ್ಭದ ಹಲವು ಚಿತ್ರಗಳು ಜಾಲತಾಣದಲ್ಲಿ ವೈರಲ್ ಆಗುತ್ತಿವೆ! ಆದರೆ ಅವುಗಳನ್ನು ಆಸೆಗಣ್ಣಿನಿಂದ ನೋಡುವ ಮುನ್ನ, ಎಚ್ಚರದಿಂದಿರಿ. ಯಾಕಂತೀರಾ, ಸಾಮಾಜಿಕ ಮಾಧ್ಯಮಗಳಲ್ಲಿ ಈ ಸೆಲೆಬ್ರಿಟಿ ವಧು-ವರರ ಎಷ್ಟೋ ಹಳೆಯ ಚಿತ್ರಗಳನ್ನು ಹಲವರು ಇಂದಿನ ಸ್ಪೆಷಲ್​ ಅಕೇಶನ್​ನ ಚಿತ್ರಗಳೆಂದು ಶೀರ್ಷಿಕೆ ನೀಡಿ ಶೇರ್​ ಮಾಡುತ್ತಿದ್ದಾರೆ. ಇಲ್ಲಿವೆ ಕೆಲವು ವೈರಲ್​​ ಆದ ನಕಲಿ ಫೋಟೋಗಳು!

ಡಿಸೆಂಬರ್​ 7 ಮತ್ತು 8 ರಂದು ಮೆಹೆಂದಿ ಮತ್ತು ಸಂಗೀತ್​​ ಸಮಾರಂಭವಿದ್ದು, ಕತ್ರೀನಾ ಮನಃಪೂರ್ತಿಯಾಗಿ ಬಂಧುಮಿತ್ರರೊಂದಿಗೆ ಕುಣಿದು ಕುಪ್ಪಳಿಸಿದರು ಎಂದು ಸುದ್ದಿ ಬಂದಿದೆ. ಆದರೆ, ಇದೇ ಸಮಾರಂಭದ ಫೋಟೋ ಎಂದು ಹೇಳಿ ಟ್ವಿಟರಿಗರೊಬ್ಬರು ಹಳೇ ಜಾಹೀರಾತಿನ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಅದೇ ಖಾತೆದಾರರು ಮೆಹೆಂದಿ ಚಿತ್ರ ಎಂದು ಹೇಳಿ 2016ರ ಚಿತ್ರವೊಂದರ ಚಿತ್ರೀಕರಣದ ಸಮಯದ ಥ್ರೋಬ್ಯಾಕ್​ ಪಿಕ್​ಗಳನ್ನೂ ಶೇರ್​ ಮಾಡಿದ್ದಾರೆ.

ಇನ್ನು ವಿಕಿ ಕೌಶಲ್​ರ ವಿಷಯಕ್ಕೆ ಬಂದರೆ, ಇನ್​​ಸ್ಟಾಗ್ರಾಂನಲ್ಲಿ ರಾಜಸ್ಥಾನೀ ಪಾರಂಪರಿಕ ಉಡುಗೆ ತೊಟ್ಟಿರುವ ಹಳೇ ಆ್ಯಡ್​ ಕ್ಯಾಂಪೇನಿನ ಫೋಟೋ ಶೇರ್​ ಮಾಡಿದ್ದು, ಅದೂ ಕೂಡ, ಮದುಮಗನ ವೇಷದಲ್ಲಿ ವಿಕಿಯ ಫೋಟೋ ಎಂಬಂತೆ ವೈರಲ್ ಆಗಿದೆ. ವಿಷಾದದ ಸಂಗತಿಯೆಂದರೆ, ಅಭಿಮಾನಿಗಳು ಕಣ್ತುಂಬಿಸಿಕೊಳ್ಳಲು ವಿಕಿ-ಕತ್ರೀನಾರ ಈ ವಿಶೇಷ ದಿನದ ಒಂದೂ ಅಸಲಿ ಚಿತ್ರ ಇದುವರೆಗೂ ಹೊರಬಿದ್ದಿಲ್ಲ. (ಏಜೆನ್ಸೀಸ್)