ಬೆಂಗಳೂರು: ‘ಶ್ಯಾಡೋ’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾದಾಗಲೇ, ಚಿತ್ರವನ್ನು ಬಹಳ ಆತುರಾತುರವಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು ವಿನೋದ್ ಆತಂಕ ವ್ಯಕ್ತಪಡಿಸಿದ್ದರು. ಈಗ ಅದು ನಿಜವಾಗಿದೆ. ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆಯೇನೋ ಸಿಕ್ಕಿದೆ. ಆದರೆ, ಕಲೆಕ್ಷನ್ ಇಲ್ಲವಂತೆ.
ಸರಿಯಾದ ಪ್ರಮೋಷನ್ ಇಲ್ಲದೆಯೇ ಚಿತ್ರವನ್ನು ಬಿಡುಗಡೆ ಮಾಡಿರುವುದರಿಂದ ಹೀಗೆಲ್ಲ ಆಗಿದೆ ಎಂಬುದು ವಿನೋದ್ ಅವರ ಅಭಿಪ್ರಾಯ. ಅಷ್ಟೇ ಅಲ್ಲ, ಈಗಷ್ಟೇ ಪ್ರೇಕ್ಷಕರು ಹೊರಬರುತ್ತಿರುವುದರಿಂದ, ಇನ್ನೊಂದಿಷ್ಟು ಸಮಯ ನೋಡಿ ಆ ನಂತರ ಚಿತ್ರ ಬಿಡುಗಡೆ ಮಾಡಬಹುದಿತ್ತು ಎಂದು ಅವರು ಹೇಳಿಕಂಡಿದ್ದಾರೆ.
ಈ ಕುರಿತು ಚಿತ್ರದ ಸಂತೋಷಕೂಟದಲ್ಲಿ ಬೇಸರ ಹಂಚಿಕೊಂಡ ವಿನೋದ್, ‘ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಕಲೆಕ್ಷನ್ ಇಲ್ಲ. ರಾಂಗ್ ಟೈಮ್ ರಿಲೀಸ್ ಎಂದರೆ ತಪ್ಪಿಲ್ಲ. ಕೋವಿಡ್‌ನಿಂದಾಗಿ ಒಂದು ವರ್ಷವೇ ಕಾದಿದ್ದೇವೆ. ಇನ್ನೂ ಕೆಲವು ದಿನಗಳು ಕಾದಿದ್ದರೆ, ಒಳ್ಳೆಯ ಲಿತಾಂಶ ಸಿಗುತ್ತಿತ್ತು. ಆದರೆ, ನಿರ್ಮಾಪಕರು ಆತುರ ಮಾಡಿದರು. ನಾನು ಹೀರೋ ಆಗಿ ಅಭಿನಯಿಸಿರುವ ಸಿನಿಮಾ ಯಾವಾಗ ಬಿಡುಗಡೆ ಎಂದು ನನಗೇ ಗೊತ್ತಿರದಿದ್ದರೆ, ಪ್ರೇಕ್ಷಕರಿಗೆ ಹೇಗೆ ಗೊತ್ತಿರುತ್ತದೆ ಹೇಳಿ? ಚಿತ್ರದ ಬಿಡುಗಡೆ ಬಗ್ಗೆ ನಿರ್ಮಾಪಕರು ನನಗೆ ಒಂದು ಮಾತೂ ಹೇಳಲಿಲ್ಲ. ಬಿಡುಗಡೆಯ ಪೋಸ್ಟರ್ ನೋಡಿದಾಗಲೇ ನನಗೆ ಗೊತ್ತಾಗಿದ್ದು. ಬಿಡುಗಡೆಗೆ ಇದು ಸರಿಯಾದ ಸಮಯ ಅಲ್ಲ ಎಂದರೆ ನನ್ನ ಮಾತು ಕೇಳಲಿಲ್ಲ. ನಾನು ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅನಿವಾರ್ಯವಾಗಿ ಪ್ರಮೋಷನ್‌ಗೆ ಬರಬೇಕಾಯಿತು’ ಎನ್ನುತ್ತಾರೆ ವಿನೋದ್.
ಒಂದೊಳ್ಳೆಯ ಸಿನಿಮಾ, ಸರಿಯಾ ಪ್ರಚಾರವಿಲ್ಲದೆ ತಪ್ಪು ಸಮಯದಲ್ಲಿ ಬಿಡುಗಡೆಯಾಯಿತು ಎನ್ನುವ ಅವರು, ‘ಚಿತ್ರದ ಹಕ್ಕುಗಳು ಮೊದಲೇ ಮಾರಾಟವಾಗಿದ್ದರಿಂದ ನಿರ್ಮಾಪಕರು ಸೇಫ್ ಆಗಿದ್ದಾರೆ. ಆದರೆ, ಕಲೆಕ್ಷನ್ ಕಡಿಮೆಯಾಗಿರುವುದಿಂದ, ವೈಯಕ್ತಿಕವಾಗಿ ನನ್ನ ಸಿನಿಮಾ ಕೆರಿಯರ್‌ಗೆ ಹಿನ್ನಡೆ ಆದಂತಾಗಿದೆ. ಇಷ್ಟು ವರ್ಷಗಳ ಕಾಲ ಒಂದೊಂದೇ ಹೆಜ್ಜೆ ಇಟ್ಟು ಈ ಹಂತಕ್ಕೆ ಬಂದಿದ್ದೇನೆ. ಯಾರೋ ಒಬ್ಬ ನಿರ್ಮಾಪಕರು ಹೀಗೆ ಮಾಡುವುದರಿಂದ, ನನ್ನ ವೃತ್ತಿಗೆ ಬ್ಲಾಕ್ ಮಾರ್ಕ್ ಆಗುತ್ತದೆ’ ಎಂದು ವಿನೋದ್ ಬೇಸರ ವ್ಯಕ್ತಪಡಿಸಿದ್ದಾರೆ.