ಭೂಮಂಡಲದಲ್ಲಿ ನನ್ನಂಥ ನಟಿಯಿಲ್ಲ!; ಸುಳ್ಳಾದರೆ ಅಹಂಕಾರ ಬಿಡ್ತಾರಂತೆ ಕಂಗನಾ..

Kangana
Published on

ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಕಂಗನಾ ರಣಾವತ್, ಇದೀಗ ಇನ್ನೊಂದು ಹೊಸ ಹೇಳಿಕೆ ನೀಡಿದ್ದಾರೆ. ತಮ್ಮಂತ ನಟಿಯೇ ಇಲ್ಲ ಎಂದಿರುವ ಅವರು, ಒಂದು ಪಕ್ಷ ತಮ್ಮ ಮಾತು ಸುಳ್ಳಾದರೆ ಅಹಂಕಾರವನ್ನು ಬಿಟ್ಟುಬಿಡುವುದಾಗಿ ಸವಾಲ್ ಹಾಕಿದ್ದಾರೆ.

ಕಂಗನಾ ಇದೀಗ ‘ಧಾಕಡ್’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಸ್ಪೈಥ್ರಿಲ್ಲರ್ ಶೈಲಿಯ ಸಿನಿಮಾ ಆಗಿದ್ದು, ಈ ಚಿತ್ರದಲ್ಲಿ ಏಜೆಂಟ್ ಅಗ್ನಿ ಎಂಬ ಗೂಢಾಚಾರಿಯ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿನ ಒಂದು ಫೋಟೋ ಶೇರ್ ಮಾಡಿಕೊಂಡಿರುವ ಕಂಗನಾ, ಈ ಕುರಿತು ಟ್ವೀಟ್ ಮಾಡಿದ್ದಾರೆ.

‘ಒಬ್ಬ ನಟಿಯಾಗಿ ನಾನು ಮಾಡುವಷ್ಟು ಪ್ರಯೋಗಗಳನ್ನು ಇಡೀ ಪ್ರಪಂಚದಲ್ಲೇ ಯಾರೂ ಮಾಡುವುದಿಲ್ಲ. ಹಾಲಿವುಡ್ ನಟಿ ಮೆರಿಲ್ ಸ್ಟ್ರೀಪ್ ತರಹ ಹಲವು ಆಯಾಮಗಳಿರುವ ಪಾತ್ರಗಳನ್ನೂ ಮಾಡಬಲ್ಲೆ. ‘ವಂಡರ್ ವುಮನ್’ ಖ್ಯಾತಿಯ ಗಾಲ್ ಗ್ಯಾಡಾಟ್ ತರಹ ನುರಿತ ಆಕ್ಷನ್ ದೃಶ್ಯಗಳಲ್ಲೂ ಕಾಣಿಸಿಕೊಳ್ಳಬಲ್ಲೆ’ ಎಂದು ಕಂಗನಾ ಹೇಳಿಕೊಂಡಿದ್ದಾರೆ.

‘ಈ ವಿಷಯದಲ್ಲಿ ಯಾವುದೇ ವೇದಿಕೆಯಲ್ಲಿ ಬೇಕಾದರೂ ಚರ್ಚೆಗೆ ನಾನು ಸಿದ್ಧ. ನನಗಿಂತ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುವ ಇನ್ನೊಬ್ಬ ನಟಿ ಈ ಭೂಮಂಡಲದಲ್ಲಿದ್ದರೆ ತೋರಿಸಿ, ನಾನು ನನ್ನ ಅಹಂಕಾರವನ್ನು ಬಿಟ್ಟುಬಿಡುತ್ತೇನೆ. ಅಲ್ಲಿಯವರೆಗೂ ನಾನು ಹೆಮ್ಮೆಯಿಂದ ನನ್ನ ಸಾಧನೆಯ ಬಗ್ಗೆ ಮಾತನಾಡಬಹುದು’ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ‘ತಲೈವಿ’ ಮತ್ತು ‘ಧಾಕಡ್’ ಚಿತ್ರಗಳ ವಿವಿಧ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಕಂಗನಾ ಅವರ ಈ ಹೇಳಿಕೆಗೆ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗಿದ್ದು, ಆತ್ಮವಿಶ್ವಾಸ ಎಂದರೆ ಇದೇ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಇದು ದುರಹಂಕಾರದ ಪರಮಾವಧಿ ಎಂದು ಪ್ರತಿಕ್ರಿಯಿಸಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net