ಸಿನಿವಾಣಿ

10 ವರ್ಷಗಳ ಹಿಂದಿನ ಶೀರ್ಷಿಕೆ, ಈಗ ಚಿತ್ರವಾಗುತ್ತಿದೆ …

ಬೆಂಗಳೂರು: ನಿರ್ದೇಶಕ ಸುನಿ 10 ವರ್ಷಗಳ ಹಿಂದೆ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಎಂಬ ಚಿತ್ರ ಮಾಡಿದ್ದು ಗೊತ್ತೇ ಇದೆ. ಮೊದಲು ಆ ಚಿತ್ರಕ್ಕೆ ‘ಒಂದು ಸರಳ ಪ್ರೇಮಕಥೆ’ ಎಂಬ ಹೆಸರಿಡುವುದಕ್ಕೆ ಅವರು ಯೋಚಿಸಿದ್ದರಂತೆ. ಆದರೆ, ಕಾರಣಾಂತರಗಳಿಂದ ಹೆಸರು ಬದಲಾಗಿ, 'ಒಂದು ಸರಳ ಪ್ರೇಮಕಥೆ' ಅವರ ಬಳಿಯಢ ಉಳಿದಿದೆ. ಕಳೆದ 10 ವರ್ಷದಿಂದ ಟೈಟಲ್ ರಿನಿವಲ್ ಮಾಡಿಕೊಂಡು ಬಂದಿದ್ದ ಅವರು, ಈಗ ಕೊನೆಗೂ ಆ ಹೆಸರಿನ ಚಿತ್ರ ಮಾಡುತ್ತಿದ್ದಾರೆ.

'ಒಂದು ಸರಳ ಪ್ರೇಮಕಥೆ' ಚಿತ್ರದಲ್ಲಿ ವಿನಯ್​ ರಾಜಕುಮಾರ್​ ಹೀರೋ ಆಗಿ ನಟಿಸಿದರೆ, ನಾಯಕಿಯರಾಗಿ ಸ್ವಾತಿಷ್ಠ ಕೃಷ್ಣನ್ ಮತ್ತು ‘ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ನಟಿಸುತ್ತಿದ್ದಾರೆ. ಸದ್ಯ ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣದಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಪೋಸ್ಟರ್​ ಸಹ ಬಿಡುಗಡೆ ಮಾಡಿದೆ.

ಈ ಚಿತ್ರದ ಕುರಿತು ಮಾತನಾಡುವ ಸುನಿ, 'ಚಿತ್ರಕ್ಕೆ ಪ್ರಸನ್ನ ಅವರು ಕಥೆ ಬರೆದಿದ್ದಾರೆ. ಜನವರಿ 23ರಂದು ಸಿನಿಮಾ ಮುಹೂರ್ತ ಆಗಿತ್ತು, ಬೆಂಗಳೂರು, ಚಿಕ್ಕಪೇಟೆಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಈಗಾಗಲೇ ಶೇಕಡಾ 50ರಷ್ಟು ಚಿತ್ರೀಕರಣ ಮುಗಿದಿದೆ' ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ ಅವರು.

ವಿನಯ್​ ರಾಜಕುಮಾರ್​ ಅವರಿಗೆ ಮೊದಲಿನಿಂದಲೂ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ನಟಿಸಲು ಇಷ್ಟವಂತೆ. ಅದರಲ್ಲೂ ಸುನಿ ನಿರ್ದೇಶನದ ಶೈಲಿ ಬಹಳ ಇಷ್ಟವಂತೆ. 'ಸುನಿ ಈ ಸಿನಿಮಾ ಕಥೆ ಹೇಳಲು ಬಂದಾಗ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡ್ತಿದ್ದೀನಿ ಅನ್ನೋದೇ ತುಂಬಾ ಖುಷಿ ಕೊಟ್ಟಿತ್ತು. ಈ ಚಿತ್ರದಲ್ಲಿ ಅತಿಶಯ್ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಸಂಗೀತ ನಿರ್ದೇಶಕನ ಪಾತ್ರ. ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗಬೇಕು ಅನ್ನೋದು ಅವನ ಕನಸು. ಆತನ ಮನಸ್ಸಲ್ಲಿ ಒಂದು ಹುಡುಗಿಯ ಹುಡುಕಾಟ ಯಾವಾಗಲೂ ಇರುತ್ತೆ' ಎಂದು ಸಿನಿಮಾದ ಎಳೆಯ ಬಗ್ಗೆ ಹೇಳುತ್ತಾರೆ ವಿನಯ್​.

'ಒಂದು ಸರಳ ಪ್ರೇಮಕಥೆ' ಚಿತ್ರದಲ್ಲಿ ಸಾಧು ಕೋಕಿಲ, ರಾಜೇಶ್ ನಟರಂಗ, ಅರುಣ ಬಾಲರಾಜ್ ಸೇರಿದಂತೆ ಹಲವು ನಟ-ನಟಿಯರಿದ್ದಾರೆ. ಕಾರ್ತಿಕ್ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ ಈ ಚಿತ್ರಕ್ಕಿದೆ.