ಸೈಬರ್‌ ಕಳ್ಳರ ಕನ್ನ; 1 ಲಕ್ಷ ರೂ. ಕಳೆದುಕೊಂಡ ನಟಿ ನಗ್ಮಾ!

Nagma
Published on

ಚೆನ್ನೈ: ಸೈಬರ್ ಖದೀಮರ ಮೋಸದ ಜಾಲಕ್ಕೆ ನಟಿ ನಗ್ಮಾ ಸಿಕ್ಕಿ ಬಿದ್ದು, ಭಾರಿ ಮೊತ್ತದ ಹಣವನ್ನು ಕಳೆದುಕೊಂಡಿದ್ದಾರೆ.  ಬ್ಯಾಂಕ್ ಹೆಸರಿನಲ್ಲಿ ನಗ್ಮಾಗೆ ಕರೆ ಮಾಡಿದ್ದ ವಂಚಕರು, ಕ್ಷಣಾರ್ಧದಲ್ಲೇ ಅವರ ಖಾತೆಯಲ್ಲಿದ್ದ ಹಣವನ್ನು ದೋಚಿದ್ದಾರೆ. ಈ ಕುರಿತಾಗಿ ನಟಿ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಗ್ಮಾ ಅವರ ಮೊಬೈಲ್ ಸಂಖ್ಯೆಗೆ ಫೆಬ್ರವರಿ 28 ರಂದು ಮಸೇಜ್ ಬಂದಿದೆ. ಬ್ಯಾಂಕ್ ಖಾತೆಗಾಗಿ ಕೆವೈಸಿ ಭರ್ತಿ ಮಾಡಿ ಎಂದು ಮಸೇಜ್ ಬಂದಿದೆ. ನಂತರ ಖದೀಮರು ಫೋನ್​​ ಕಾಲ್​​ ಮಾಡಿ ಹೇಳಿದಂತೆ ಭರ್ತಿ ಮಾಡಲು ತಿಳಿಸಿದ್ದಾರೆ. ಅದು ಬ್ಯಾಂಕ್ ನಿಂದ ಬಂದಿರುವ ಕರೆ ಎಂದು ನಂಬಿರುವ ನಗ್ಮಾ ಕೆವೈಸಿ ಭರ್ತಿ ಮಾಡಿದ್ದಾರೆ. ಕ್ಷಣಾರ್ಧಲ್ಲೆ ಅವರ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂಪಾಯಿ ಡ್ರಾ ಆಗಿದೆ.

"ವಂಚಕ ನನ್ನ ಫೋನ್‌ನ ರಿಮೋಟ್‌ ಆಕ್ಸೆಸ್‌ ಕೂಡ ಆತ ತೆಗೆದುಕೊಂಡಿದ್ದ. ಲಿಂಕ್‌ನಲ್ಲಿ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಿದ ನಂತರ ಫಲಾನುಭವಿ ಖಾತೆಯನ್ನು ರಚಿಸಿದ್ದನು. ಆ ಬಳಿಕ ರಾಷ್ಟ್ರೀಕೃತ ಬ್ಯಾಂಕ್‌ಗೆ ನನ್ನ ಖಾತಿಯಿಂದ ರೂ 1 ಲಕ್ಷವನ್ನು ವರ್ಗಾವಣೆ ಮಾಡಿದ್ದ. ನಾನು ಇದಕ್ಕಾಗಿ ಸಾಕಷ್ಟು ಒಟಿಪಿ ಕೂಡ ಸ್ವೀಕರಿಸಿದ್ದೇನೆ. ಆತ ಕನಿಷ್ಠ 20 ಪ್ರಯತ್ನಗಳನ್ನು ಮಾಡಿದ್ದಾನೆ ಎಂದು ತೋರಿಸಿದೆ. ಅದೃಷ್ಟವಶಾತ್, ನಾನು ದೊಡ್ಡ ಮೊತ್ತವನ್ನು ಕಳೆದುಕೊಳ್ಳಲಿಲ್ಲ," ಎಂದು ಅವರು ಹೇಳಿದ್ದಾರೆ.

ಈ ಮೋಸದ ಜಾಲ ಕುರಿತಾಗಿ ಸೈಬರ್ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರಿಗೆ ಬಲೆ ಬಿಸಿ ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net