ನವದೆಹಲಿ: ಐಪಿಎಲ್ನಲ್ಲಿ ನಿರಂತರ ವೈಫಲ್ಯ ಕಾಣುತ್ತಿರುವುದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್. ಧೋನಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಪ್ರಕರಣ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಧೋನಿಗೆ ಆದಂತಹ ಕಹಿ ಅನುಭವ ಇದೀಗ ತಮಿಳು ನಟ ವಿಜಯ್ ಸೇತುಪತಿಗೂ ಎದುರಾಗಿದೆ.
ಕಾಲಿವುಡ್ನಲ್ಲಿ ವಿವಾದದ ಅಲೆ ಎಬ್ಬಿಸಿರುವ ಶ್ರೀಲಂಕಾ ಕ್ರಿಕೆಟ್ ದಿಗ್ಗಜ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಬಯೋಪಿಕ್ "800" ಹೆಸರಿನ ಚಿತ್ರದಿಂದ ಸಾಮಾಜಿಕ ಒತ್ತಡದಿಂದಾಗಿ ವಿಜಯ್ ಸೇತುಪತಿ ಹೊರ ನಡೆದಿದ್ದಾರೆ. ಅಲ್ಲದೆ, ಟ್ವೀಟ್ ಮೂಲಕವೂ ಇದನ್ನು ಖಚಿತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸೇತುಪತಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದ್ದು, ಅವರ ಮಗಳನ್ನು ಅತ್ಯಾಚಾರ ಮಾಡುವ ಬೆದರಿಕೆ ಸಂದೇಶವೊಂದು ಇದೀಗ ಭಾರಿ ಚರ್ಚೆ ಹುಟ್ಟುಹಾಕಿದೆ. ಸ್ವತಃ ನೆಟ್ಟಿಗರೇ ಕೆಟ್ಟ ಕಾಮೆಂಟ್ ಮಾಡಿದವನ ವಿರುದ್ಧ ಕಿಡಿಕಾರಿದ್ದಾರೆ. ನೆಟ್ಟಿಗರು ಮಾತ್ರವಲ್ಲ ಸಿನಿಮಾ ಮಂದಿಯು ಸಹ ಅಸಮಾಧಾನ ಹೊರಹಾಕಿದ್ದಾರೆ.
ಅನೇಕ ಟ್ವಿಟ್ಟಿಗರು ಕೆಟ್ಟ ಕಾಮೆಂಟ್ ಮಾಡಿದವನ ಟ್ವಿಟರ್ ಖಾತೆಯನ್ನು ಶೇರ್ ಮಾಡಿ, ಪ್ರತಿಯೊಬ್ಬರು ಈತನ ವಿರುದ್ಧ ವರದಿ ಮಾಡಿ ಎಂದು ಮನವಿ ಮಾಡಿದ್ದಾರೆ. ಗಾಯಕಿ ಚಿನ್ಮಯಿ ಶ್ರೀಪಾದ್ ಸಹ ಬೆದರಿಕೆ ಟ್ವೀಟ್ವುಳ್ಳ ಸ್ಕ್ರೀನ್ಶಾಟ್ ಅನ್ನ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡು, ಕ್ರಮಕ್ಕೆ ಆಗ್ರಹಿಸಿದ್ದಾರೆ. ವ್ಯಕ್ತಿಯೊಬ್ಬ ಸಾರ್ವಜನಿಕವಾಗಿಯೇ ಮಕ್ಕಳ ಅತ್ಯಾಚಾರ ಬೆದರಿಕೆ ಹಾಕುವುದು ಒಂದು ಅಪರಾಧ. ಈ ವ್ಯವಸ್ಥೆಯಲ್ಲಿ ಯಾರೂ ಇದನ್ನು ಬದಲಾಯಿಸಲು ಆಗುವುದಿಲ್ಲವೇ? ಎಂದು ಪ್ರಶ್ನಿಸಿ ಚೆನ್ನೈ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
ಈ ಮೋಸದ ಸಮಾಜ ಇದನ್ನೇಕೆ ಮಾಡುತ್ತಿದೆ? ಇಂತಹ ಘಟನೆಗಳು ನಡೆದಾಗ ಮೌನವಾಗಿ ನೋಡುವುದೇಕೆ? ಅತ್ಯಾಚಾರ ಬೆದರಿಕೆ ಹಾಕುವಂತೆ ವ್ಯಕ್ತಿಯನ್ನು ಹೇಗೆ ಬೆಳೆಸಲಾಗುತ್ತದೆ? ವಯಸ್ಕರು ಕತ್ತೆ ಕಿರುಬಗಳ ರೀತಿಯಲ್ಲಿ ವರ್ತಿಸುವಾಗಿ ಮಹಿಳೆಯರು ಮತ್ತು ಮಕ್ಕಳು ತೊಂದರೆ ಅನುಭವಿಸಬೇಕಾಗುತ್ತದೆ. ಇಷ್ಟೆಲ್ಲ ಗೊತ್ತಿದ್ದರೂ ಏನೂ ಕ್ರಮ ಕೈಗೊಳ್ಳದೇ ಮೌನವಾಗಿ ನೋಡುವವರಿಗೆ ನಾಚಿಕೆಯಾಗಬೇಕು ಎಂದು ಚಿನ್ಮಯಿ ಮತ್ತೊಂದು ಟ್ವೀಟ್ನಲ್ಲಿ ಖಂಡಿಸಿದ್ದಾರೆ.
800 ಚಿತ್ರಕ್ಕೇಕೆ ತೀವ್ರ ಅಸಮಾಧಾನ
ಪ್ರಮುಖವಾಗಿ ಮುತ್ತಯ್ಯ ಮುರಳೀಧರ್ ಅವರು ಶ್ರೀಲಂಕಾದ ತಮಿಳರ ಮೇಲೆ ದೌರ್ಜನ್ಯಗಳಾದಾಗ ಯಾವತ್ತೂ ಪ್ರತಿಭಟಿಸಿರಲಿಲ್ಲವಂತೆ. ಕನಿಷ್ಠ ಪಕ್ಷ ಆ ವಿಷಯದ ಕುರಿತಾದ ಒಮ್ಮೆಯೂ ಮಾತನಾಡಿರಲಿಲ್ಲವಂತೆ. ಹೀಗಿರುವಾಗ ಅಂಥವರ ಬಗ್ಗೆ ಸಿನಿಮಾ ಆಗುತ್ತಿರುವುದು ಮತ್ತು ಮುತ್ತಯ್ಯನ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿರುವುದು ಹಲವರಿಗೆ ಬೇಸರವಾಗಿದೆ. ಅದೇ ಕಾರಣಕ್ಕೆ, ವಿಜಯ್ ಸೇತುಪತಿ ಕುರಿತಾಗಿ ಆಕ್ರೋಶ ಹೆಚ್ಚಾಗಿದೆ. ತೀವ್ರ ಒತ್ತಡ ಹೇರಿದ್ದರಿಂದ ಇದೀಗ ಸೇತುಪತಿ ಚಿತ್ರದಿಂದಲೇ ಹೊರಬಂದಿದ್ದಾರೆ. (ಏಜೆನ್ಸೀಸ್)