ಬೆಂಗಳೂರು:
ವಿಜಯ್ ರಾಘವೇಂದ್ರ ಅಭಿನಯದ ವಿಭಿನ್ನ ಕಥಾಹಂದರವಿರುವ ಚಿತ್ರ ‘ಕದ್ದ ಚಿತ್ರ’. ಸ್ಪೂರ್ತಿ ಪಡೆದ ಕಥೆ ಎಂಬ ಹೆಸರಿನಲ್ಲಿ ಅಥವಾ ಹೇಳದೆಯೇ ಕಥೆ ಅಥವಾ ಸನ್ನಿವೇಶ ಕದ್ದು ಸಿನಿಮಾ ಮಾಡಿರುವ ಹಲವು ಉದಾಹರಣೆಗಳಿವೆ. ಆದರೆ, ಯುವ ನಿರ್ದೇಶಕ ಸುಹಾಸ್ ಕೃಷ್ಣ ‘ಕದ್ದ ಚಿತ್ರ’ ಎಂಬ ಟೈಟಲ್‌ನಲ್ಲಿಯೇ ಸಿನಿಮಾ ಮಾಡಿದ್ದಾರೆ.
ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಈ ವಿಭಿನ್ನ ಕಥೆಯಲ್ಲಿ, ಅಷ್ಟೇ ವಿಭಿನ್ನ ಪಾತ್ರದಲ್ಲಿ ನಾಯಕ ವಿಜಯ್ ರಾಘವೇಂದ್ರ ಮಿಂಚಿದ್ದಾರೆ. ‘ಈ ರೀತಿಯ ಪಾತ್ರ ಮಾಡಲು ಮೊದಲು ಹಿಂದೇಟು ಹಾಕಿದ್ದೆ. ಆದರೆ, ಕಥೆ ಹಿಡಿಸಿತು. ನನ್ನಂತೆಯೇ ನಿಮಗೂ ಈ ಸಿನಿಮಾ ಹಿಡಿಸುವ ವಿಶ್ವಾಸವಿದೆ’ ಎಂದು ಚಿತ್ರದ ಬಗ್ಗೆ ಅವರು ಭರವಸೆ ವ್ಯಕ್ತಪಡಿಸಿದರು. ಚೊಚ್ಚಲ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿರುವ ಸಂಭ್ರಮದಲ್ಲಿರುವ ನಿರ್ದೇಶಕ ಸುಹಾಸ್ ಕೃಷ್ಣ, ‘ಇದು ನನ್ನ ಮೊದಲನೇ ಸಿನಿಮಾ. ಸ್ವಂತ ಕಥೆಯ ಚಿತ್ರ. ಕೃತಿಚೌರ್ಯದ ಅಪಾಯದ ಬಗ್ಗೆ ಹಾಗೂ ಬರಹಗಾರನೊಬ್ಬನ ಜೀವನಗಾಥೆ ಚಿತ್ರದಲ್ಲಿದೆ. ಈ ಸಿನಿಮಾದಲ್ಲಿ ಕ್ರೈಂ-ಸಸ್ಪೆನ್ಸ್ ಅಂಶಗಳಿವೆ’ ಎಂದು ಮಾಹಿತಿ ನೀಡುತ್ತಾರೆ.
ವಿಜಯ್‌ಗೆ ನಮ್ರತಾ ಸುರೇಂದ್ರನಾಥ್ ನಾಯಕಿಯಾಗಿದ್ದು ಉಳಿದಂತೆ ರಾಘು ಶಿವಮೊಗ್ಗ, ಬೇಬಿ ಆರಾಧ್ಯ ತಾರಾಗಣದಲ್ಲಿದ್ದಾರೆ. ಶುಕ್ರವಾರ ಸಿನಿಮಾ ರಿಲೀಸ್ ಆಗಲಿದ್ದು, ಚಿತ್ರಕ್ಕೆ ಕೃಷ್ಣರಾಜ್ ಸಂಗೀತ, ಗೌತಮ್ ಛಾಯಾಗ್ರಾಹಣವಿರಲಿದೆ.