Allu Arjun : ಇತ್ತೀಚೆಗಷ್ಟೇ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಅವರು ಅಲ್ಲು ಅರ್ಜುನ್ ಬಗ್ಗೆ ಹೇಳಿರುವ ಭವಿಷ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆಯಲ್ಲಿ ಗಾಯಗೊಂಡಿರುವ ಶ್ರೀತೇಜ್ನನ್ನು ಭೇಟಿ ಮಾಡಲು ವೇಣು ಸ್ವಾಮಿ ನಿನ್ನೆ (ಡಿ.25) ಕಿಮ್ಸ್ ಆಸ್ಪತ್ರೆಗೆ ತೆರಳಿದ್ದರು. ಕುಟುಂಬದವರನ್ನು ಭೇಟಿ ಮಾಡಿ ಆರ್ಥಿಕ ಸಹಾಯವನ್ನೂ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಅಲ್ಲು ಅರ್ಜುನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದರು.
ಗಾಯಗೊಂಡಿರುವ ಶ್ರೀ ತೇಜ್ ಚೇತರಿಸಿಕೊಳ್ಳುತ್ತಿದ್ದಾನೆ. ಅವನ ಒಳಿತಿಗಾಗಿ ಮೃತ್ಯುಂಜಯ ಹೋಮ ಮಾಡುತ್ತೇನೆ. ಅಲ್ಲದೆ ಆ ಮಗುವಿಗೆ ಒಬ್ಬ ಅಕ್ಕ ಇದ್ದಾಳೆ. ಮಗುವಿಗೆ ಎರಡು ಲಕ್ಷ ರೂಪಾಯಿ ಕೊಡುತ್ತಿದ್ದೇನೆ ಎಂದು ಹೇಳಿ ಅವರ ತಂದೆಗೆ ಚೆಕ್ ಕೊಟ್ಟೆ. ನಾನು ಕೂಡ ಚಿತ್ರರಂಗದ ಹಣ ತಿಂದಿದ್ದರಿಂದ ಅವರಿಗೆ ಸಹಾಯ ಮಾಡಲು ಬಂದಿದ್ದೇನೆ ಎಂದರು.
ಇದಾದ ಬಳಿಕ ಅಲ್ಲು ಅರ್ಜುನ್ ಜಾತಕದ ಬಗ್ಗೆ ಮಾತನಾಡಿದ ವೇಣುಸ್ವಾಮಿ, ಜಾತಕದ ಪ್ರಕಾರ ಏನು ಬೇಕಾದರೂ ನಡೆಯುತ್ತದೆ. ಅಲ್ಲು ಅರ್ಜುನ್ ಜಾತಕದ ಪ್ರಕಾರ ಶನಿಯು ಆರನೇ ಮನೆಯಲ್ಲಿ ಇರುವುದರಿಂದ ಇದು ಸಂಭವಿಸುತ್ತದೆ. ಜಾತಕದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ವರ್ಷ ಮಾರ್ಚ್ 25ರವರೆಗೂ ಅಲ್ಲು ಅರ್ಜುನ್ ಜಾತಕ ಚೆನ್ನಾಗಿಲ್ಲ. ಆ ನಂತರ ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದರು.
ಕಲಿಯುಗದಲ್ಲಿ ಹಣವಿರುವ ಕಡೆ ಅಪಾಯವಿರುತ್ತದೆ. ಎಲ್ಲರಿಗೂ ಸಮಸ್ಯೆಗಳಿವೆ. ಅದು ಎದುರಾದಾಗ ಎದುರಿಸಬೇಕು. ಇದೊಂದು ಅನಿರೀಕ್ಷಿತ ಘಟನೆ. ಯಾರೂ ಉದ್ದೇಶಪೂರ್ವಕವಾಗಿ ಮಾಡಿಲ್ಲ. ಪ್ರತಿಯೊಬ್ಬರ ಜೀವನದಲ್ಲೂ ತಪ್ಪುಗಳು ನಡೆಯುತ್ತವೆ. ಆ ತಪ್ಪುಗಳಿಂದ ನಾವು ಏನು ಕಲಿಯುತ್ತೇವೆ ಎಂಬುದು ಮುಖ್ಯ ಎಂದರು. ಸೆಲೆಬ್ರಿಟಿಗಳ ಜಾತಕ ಓದುವ ವೇಣುಸ್ವಾಮಿ, ಮೊಟ್ಟಮೊದಲ ಬಾರಿಗೆ ಅಲ್ಲು ಅರ್ಜುನ್ ಜಾತಕ ಓದಿದ್ದು, ಇದೀಗ ವೇಣುಸ್ವಾಮಿ ಕಾಮೆಂಟ್ಸ್ ವೈರಲ್ ಆಗಿದೆ.
ಅಂದಹಾಗೆ ವೇಣುಸ್ವಾಮಿ ಅವರು ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ತುಂಬಾ ಫೇಮಸ್. ಇವರ ಭವಿಷ್ಯವನ್ನು ಆರಂಭದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಟಾಲಿವುಡ್ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರೂ ಆಗ ವೇಣುಸ್ವಾಮಿ ಅವರ ಭವಿಷ್ಯವನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ ಅನೇಕ ಸೆಲೆಬ್ರಿಟಿಗಳ ನೆಚ್ಚಿನ ಜ್ಯೋತಿಷಿಯಾಗಿದ್ದಾರೆ.
ಇನ್ನು ಜಾನಿ ಮಾಸ್ಟರ್ ಕೂಡ ಶ್ರೀತೇಜ್ ಅವರನ್ನು ಭೇಟಿ ಮಾಡಿದ್ದು, ಕೊರಿಯೋಗ್ರಾಫರ್ಸ್ ಅಸೋಸಿಯೇಷನ್ ಕುಟುಂಬಕ್ಕೆ ಸಹಾಯ ಮಾಡಲಿದೆ ಎಂದಿದ್ದಾರೆ. ಅಲ್ಲದೆ, ಅಲ್ಲು ಅರವಿಂದ್, ದಿಲ್ ರಾಜು ಮತ್ತು ಪುಷ್ಪ ನಿರ್ಮಾಪಕರು ಕೂಡ ಮತ್ತೊಮ್ಮೆ ಆಸ್ಪತ್ರೆಗೆ ಬಂದು ಬಾಲಕ ಮತ್ತು ಕುಟುಂಬವನ್ನು ಭೇಟಿ ಮಾಡಿದರು. ಅಲ್ಲು ಅರ್ಜುನ್ ಕುಟುಂಬ ಒಂದು ಕೋಟಿ ರೂಪಾಯಿ, ನಿರ್ದೇಶಕ ಸುಕುಮಾರ್ 50 ಲಕ್ಷ ಮತ್ತು ಪುಷ್ಪಾ ನಿರ್ಮಾಪಕರು 50 ಲಕ್ಷ ಸೇರಿ ಒಟ್ಟು 2 ಕೋಟಿ ರೂಪಾಯಿಗಳನ್ನು ಕುಟುಂಬಕ್ಕೆ ನೀಡಿದ್ದಾರೆ.
ಡಿಸೆಂಬರ್ 4ರಂದು ಹೈದರಾಬಾದ್‌ನ ದಿಲ್‌ಸುಖ್‌ನಗರ ಮೂಲದ ರೇವತಿ (39) ತನ್ನ ಪತಿ ಭಾಸ್ಕರ್ ಮತ್ತು ಮಕ್ಕಳಾದ ಶ್ರೀತೇಜ್ (9) ಮತ್ತು ಸಾನ್ವಿಕ್ (7) ಅವರೊಂದಿಗೆ ಸಂಧ್ಯಾ ಥಿಯೇಟರ್‌ನಲ್ಲಿ ಪ್ರೀಮಿಯರ್ ಶೋ ವೀಕ್ಷಿಸಲು ಬಂದಿದ್ದರು. ಇದೇ ವೇಳೆ ಅಲ್ಲು ಅರ್ಜುನ್ ಆಗಮಿಸಿದ್ದರಿಂದ ಅವರನ್ನು ನೋಡುಲು ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ಕಾಲ್ತುಳಿತ ಉಂಟಾಯಿತು. ನೂಕು ನುಗ್ಗಲಿನಲ್ಲಿ ಸಿಲುಕಿಕೊಂಡ ರೇವತಿ ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದರು. ಈ ವೇಳೆ ಜನರು ರೇವತಿಯನ್ನು ತುಳಿದಾಡಿದ್ದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಯಿತು. ರೇವತಿ ಅವರ ಮಗ ಶ್ರೀತೇಜ್ ಕೂಡ ಇದೇ ಸಂದರ್ಭದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರೇವತಿಯ ಪ್ರಾಣವನ್ನು ಉಳಿಸಲಾಗಲಿಲ್ಲ. ಸದ್ಯ ಶ್ರೀತೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. (ಏಜೆನ್ಸೀಸ್)