ಕನ್ನಡಿಗ ಕೆಎಲ್​ ರಾಹುಲ್​ಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಶಕದ ಸಂಭ್ರಮ; ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ವಿಶೇಷ ಸಾಧನೆ ಅವಕಾಶ!

web kl rahul
Published on

ಮೆಲ್ಬೋರ್ನ್​: ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯ ಟೀಮ್​ ಇಂಡಿಯಾ ಬ್ಯಾಟರ್​ ಹಾಗೂ ಕನ್ನಡಿಗ ಕೆಎಲ್​ ರಾಹುಲ್​ ಪಾಲಿಗೆ ಸ್ಮರಣೀಯ ಕ್ಷಣವಾಗಿದೆ. ಗುರುವಾರ ಈ ಪಂದ್ಯದ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ವರ್ಷಗಳನ್ನು ಪೂರೈಸಲಿದ್ದಾರೆ.

2014ರಲ್ಲಿ ಮೆಲ್ಬೋರ್ನ್​ನಲ್ಲಿ ನಡೆದ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲೇ ರಾಹುಲ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ದೇಶೀಯ ಕ್ರಿಕೆಟ್​ನಲ್ಲಿ ತೋರಿದ ಅಮೋ ನಿರ್ವಹಣೆಯಿಂದಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ ರಾಹುಲ್​, ಡಿಸೆಂಬರ್​ 26ರಿಂದ 30ರವರೆಗೆ ಆಡಿದ ಚೊಚ್ಚಲ ಟೆಸ್ಟ್​ನಲ್ಲಿ ಮಧ್ಯಮ ಕ್ರಮಾಂಕದಲ್ಲಿ 3, 1 ರನ್​ ಗಳಿಸಿ ನಿರಾಸೆ ಅನುಭವಿಸಿದ್ದರು. ನಂತರ ಸಿಡ್ನಿಯಲ್ಲಿ ಆಡಿದ 2ನೇ ಟೆಸ್ಟ್​ನಲ್ಲಿ ಶತಕ ಸಿಡಿಸುವ ಮೂಲಕ ಸಾಮರ್ಥ್ಯ ನಿರೂಪಿಸಿದ್ದರು.

ಎರಡು ವರ್ಷಗಳ ನಂತರ 2016ರಲ್ಲಿ ಏಕದಿನ ಮತ್ತು ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಮೂಲಕ ರಾಹುಲ್​ ಮೂರೂ ಮಾದರಿಯ ಕ್ರಿಕೆಟ್​ನಲ್ಲಿ ಭಾರತ ತಂಡದ ಪ್ರಮುಖ ಭಾಗವಾಗಿದ್ದರು. ಆದರೆ ಸದ್ಯಕ್ಕೆ ಟಿ20 ತಂಡದಿಂದ ಅವರು ಕಡೆಗಣಿಸಲ್ಪಟ್ಟಿದ್ದಾರೆ. ಇದುವರೆಗೆ ಆಡಿರುವ 205 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟಾರೆ 17 ಶತಕಗಳ ಸಹಿತ 8 ಸಾವಿರಕ್ಕೂ ಅಧಿಕ ರನ್​ ಬಾರಿಸಿದ್ದಾರೆ. ಗಾಯ, ಅಸ್ಥಿರ ನಿರ್ವಹಣೆಯ ನಡುವೆ ವೃತ್ತೀಜಿವನದಲ್ಲಿ ಹಲವಾರು ಏರುಪೇರುಗಳನ್ನೂ ಕಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ ಸಾಧನೆ

ಪ್ರಕಾರ   ಪಂದ್ಯ ಇನಿಂಗ್ಸ್​  ರನ್​       ಸರಾಸರಿ  ಗರಿಷ್ಠ    100/50    ಸಿಕ್ಸರ್​

ಟೆಸ್ಟ್​      56      97       3,216   34.58     199     8/17           26

ಏಕದಿನ  77      72       2,851   49.15       112       7/18           61

ಟಿ20    72        68      2,265   37.75       110*    2/22          99

ಯಾವ ಪಾತ್ರಕ್ಕೂ ಸೈ

ರಾಹುಲ್​ ಭಾರತ ತಂಡದಲ್ಲಿ 10 ವರ್ಷಗಳ ಅವಧಿಯಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಆರಂಭಿಕ, ವನ್​ಡೌನ್​ನಿಂದ ಮಧ್ಯಮ ಕ್ರಮಾಂಕದವರೆಗೆ ಇವರ ಬ್ಯಾಟಿಂಗ್​ ಕ್ರಮಾಂಕ ಆಗಾಗ ಬದಲಾವಣೆ ಕಂಡಿದೆ. ಜತೆಗೆ ತಂಡಕ್ಕೆ ಅಗತ್ಯ ಬಿದ್ದಾಗ, ಪ್ರಮುಖವಾಗಿ ರಿಷಭ್​ ಪಂತ್​ ಗಾಯಗೊಂಡಾಗ 2023ರ ಏಕದಿನ ವಿಶ್ವಕಪ್​ನಲ್ಲಿ ವಿಕೆಟ್​ ಕೀಪರ್​ ಪಾತ್ರದಲ್ಲೂ ಗಮನಾರ್ಹ ನಿರ್ವಹಣೆ ತೋರಿದ್ದಾರೆ.

ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಹ್ಯಾಟ್ರಿಕ್​ ಶತಕದ ಚಾನ್ಸ್​

ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲೇ ಪದಾರ್ಪಣೆ ಮಾಡಿರುವ ಕಾರಣದಿಂದಲೋ ಏನೋ, ರಾಹುಲ್​ಗೆ ನಂತರದಲ್ಲೂ ಬಾಕ್ಸಿಂಗ್​ ಡೇ ಟೆಸ್ಟ್​ಗಳು ಸ್ಮರಣೀಯವೆನಿಸಿವೆ. ಇದೀಗ ಅವರು ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಹ್ಯಾಟ್ರಿಕ್​ ಶತಕ ಸಾಧನೆ ಮಾಡಿದ ಮೊದಲ ಭಾರತೀಯರೆನಿಸುವ ಅವಕಾಶ ಹೊಂದಿದ್ದಾರೆ. ಈ ಮುನ್ನ 2021ರಲ್ಲಿ ದ. ಆಫ್ರಿಕಾದ ಸೆಂಚುರಿಯನ್​ನಲ್ಲಿ ಆಡಿದ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ 123 ರನ್​ ಸಿಡಿಸಿದ್ದ ರಾಹುಲ್​ ನಂತರ 2023ರಲ್ಲೂ ಅಲ್ಲೇ ಆಡಿದ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲೂ ಶತಕ ಬಾರಿಸಿದ್ದರು. ಸಚಿನ್​ ತೆಂಡುಲ್ಕರ್​ ಮತ್ತು ಅಜಿಂಕ್ಯ ರಹಾನೆ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಸತತ 2 ಶತಕ ಬಾರಿಸಿರುವ ಇನ್ನಿಬ್ಬರು ಭಾರತೀಯರಾಗಿದ್ದು, ಎಂಸಿಜಿಯಲ್ಲೂ ಶತಕ ಬಾರಿಸಿದರೆ ರಾಹುಲ್​ ಈ ದಾಖಲೆ ಮುರಿಯಲಿದ್ದಾರೆ.

ದಶಕ ಕಂಡ 8ನೇ ಕನ್ನಡಿಗ

ಕೆಎಲ್​ ರಾಹುಲ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ವರ್ಷಗಳ ಕಾಲ ಆಡಿದ 8ನೇ ಕನ್ನಡಿಗ ಎನಿಸಲಿದ್ದಾರೆ. ಎರಾಪಳ್ಳಿ ಪ್ರಸನ್ನ (16 ವರ್ಷ), ಬಿಎಸ್​ ಚಂದ್ರಶೇಖರ್​ (15 ವರ್ಷ), ಜಿಆರ್​ ವಿಶ್ವನಾಥ್​ (14 ವರ್ಷ), ಸಯ್ಯದ್​ ಕಿರ್ಮಾನಿ (10 ವರ್ಷ), ಅನಿಲ್​ ಕುಂಬ್ಳೆ (18 ವರ್ಷ), ಜಾವಗಲ್​ ಶ್ರೀನಾಥ್​ (12 ವರ್ಷ), ರಾಹುಲ್​ ದ್ರಾವಿಡ್​ (16 ವರ್ಷ) ಹಿಂದಿನ ಸಾಧಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net