ಸಿನಿವಾಣಿ

'ಹೆಡ್ ​​ಬುಷ್'​​ ವಿರುದ್ಧ ನೃತ್ಯ ಮಾಡುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದ ವೀರಗಾಸೆ ಕಲಾವಿದರು

ವಿಜಯನಗರ: ನಟ ಡಾಲಿ ಧನಂಜಯ್​​​ ನಟನೆಯ 'ಹೆಡ್ ​ಬುಷ್​​' ಸಿನಿಮಾದಲ್ಲಿ ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಲಾಗಿದೆ. ಚಿತ್ರತಂಡ ಕ್ಷಮೆ ಕೋರಬೇಕು ಜತೆಗೆ ಸಿನಿಮಾದಲ್ಲಿನ ವೀರಗಾಸೆ ದೃಶ್ಯಕ್ಕೆ ಕತ್ತರಿ ಹಾಕಬೇಕೆಂದು ಒತ್ತಾಯಿಸಿ ವಿಜಯನಗರದ ಹೊಸಪೇಟೆಯಲ್ಲಿ ವೀರಗಾಸೆ ಕಲಾವಿದರು ಮತ್ತು ಸಮುದಾಯದ ಮುಖಂಡರು ವೀರಗಾಸೆ ವೇಷಧಾರಿಯಾಗಿ ನೃತ್ಯ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಹೊಸಪೇಟೆಯ ಪ್ರಮುಖ ವೃತ್ತಗಳಲ್ಲಿ ಕಲಾವಿದರು ವೀರಗಾಸೆ ವೇಷ ತೊಟ್ಟು ಪ್ರತಿಭಟನಾ ಮೆರವಣಿಗೆ ನಡೆಸಿದರು. ತಹಸೀಲ್ದಾರ್​ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಪತ್ರ ಸಲ್ಲಿಸಿದರು.

ಹೆಡ್​​ ಬುಷ್​​ ಸಿನಿಮಾದಲ್ಲಿ ಡಾನ್​ ಜಯರಾಜ್​​ ಪಾತ್ರಧಾರಿಯಾದ ಡಾಲಿ ಧನಂಜಯ್​ರಿಂದ ವೀರಗಾಸೆ ಕಲಾವಿದರಿಗೆ ಅಪಮಾನವಾಗಿದೆ. ಇದು ಸರಿಯಲ್ಲ. ಸಂಬಂಧಪಟ್ಟವರು ಕ್ಷಮೆ ಕೋರಬೇಕು ಜತೆಗೆ ಸಿನಿಮಾದಲ್ಲಿನ ವೀರಗಾಸೆ ದೃಶ್ಯಕ್ಕೆ ಕತ್ತರಿ ಹಾಕಬೇಕೆಂದು ಒತ್ತಾಯಿಸಿದರು.

ಈ ವಿವಾದ ಕುರಿತು ಈಗಾಗಲೇ ಸಿನಿಮಾ ತಂಡ ಪ್ರತಿಕ್ರಿಯೆ ನೀಡಿದೆ. ಸಿನಿಮಾದಲ್ಲಿ ವೀರಗಾಸೆ ಕಲಾವಿದರಿಗೆ ಯಾವುದೇ ರೀತಿಯಲ್ಲೂ ನಾವು ಅಪಮಾನ ಮಾಡಿಲ್ಲ ಎಂದು ಡಾಲಿ ಧನಂಜಯ್​​ ಹೇಳಿದ್ದಾರೆ. ಇದೇ ಚಿತ್ರದ ಮತ್ತೊಂದು ದೃಶ್ಯದಲ್ಲಿ 'ಜುಜುಬಿ ಕರಗ' ಎಂಬ ಪದ ಬಳಕೆ ವಿರುದ್ಧವೂ ವ್ಯಾಪಕ ಪ್ರತಿರೋಧ ವ್ಯಕ್ತವಾಗಿತ್ತು. ಕೊನೆಗೆ ಸಿನಿಮಾ ತಂಡ ಆ ಪದವನ್ನು ಮ್ಯೂಟ್​ ಮಾಡಲು ನಿನ್ನೆಯೇ(ಗುರುವಾರ) ಒಪ್ಪಿದೆ.

ರಾಜ್ಯಾದ್ಯಂತ ಕೆಲವು ಸಂಘಟನೆಗಳು ಮತ್ತು ವೀರಗಾಸೆ ಕಲಾವಿದರು ಈ ಸಿನಿಮಾದ ವಿರುದ್ಧ ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ಡಾಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ 'we stand with daalidhananjay' ಎಂಬ ಹ್ಯಾಶ್​ಟ್ಯಾಗ್​ಗಳ ಅಭಿಯಾನ ನಡೆಸುತ್ತಿದ್ದಾರೆ. 'ಬಡವರ ಮಕ್ಕಳನ್ನು ಬೆಳೆಯಲು ಬಿಡಿ' ಎಂದು ಸಿನಿಮಾ ನಟರೂ ಡಾಲಿ ಪರ ನಿಂತಿದ್ದಾರೆ.