ಸಿನಿವಾಣಿ

'ವಾಸಂತಿ ನಲಿದಾಗ' ಟ್ರೇಲರ್​ ಬಿಡುಗಡೆ ... ಅಕ್ಟೋಬರ್ 14ಕ್ಕೆ ಸಿನಿಮಾ ರಿಲೀಸ್

chetannadiger

ಬೆಂಗಳೂರು: ರವೀಂದ್ರ ವೆಂಶಿ ಸಿನಿಮಾ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಅವರು ಮೂರು ಚಿತ್ರಗಳನ್ನು ಮುಗಿಸಿದ್ದು, ಈ ಪೈಕಿ 'ವಾಸಂತಿ ನಲಿದಾಗ', ಅಕ್ಟೋಬರ್​ 14ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಇತ್ತೀಚೆಗೆ ಈ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ.

ಇದೊಂದು ಕಾಲೇಜ್​ ಲವ್​ಸ್ಟೋರಿಯಾಗಿದ್ದು, ರೋಹಿತ್ ಶ್ರೀಧರ್ ನಾಯಕನಾಗಿ, ಭಾವನಾ ಶ್ರೀನಿವಾಸ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಜೀವಿತ ವಸಿಷ್ಠ, ಸಾಯಿಕುಮಾರ್, ಸುಧಾರಾಣಿ, ಸಾಧು ಕೋಕಿಲ, ಮಂಜು ಪಾವಗಡ, ಮಿಮಿಕ್ರಿ ಗೋಪಿ ಸೇರಿದಂತೆ ಒಂದಷ್ಟು ಅನುಭವಿ ಕಲಾವಿದರು ಸಿನಿಮಾದಲ್ಲಿದ್ದಾರೆ.

'ವಾಸಂತಿ ನಲಿದಾಗ' ಚಿತ್ರವನ್ನು ಜೇನುಗೂಡು ಸಿನಿಮಾ ಬ್ಯಾನರ್ ನಡಿ ಕೆ.ಎನ್.ಶ್ರೀಧರ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, 'ಸಿನಿಮಾದ ಕೌಂಟ್​​ಡೌನ್ ಶುರುವಾಗಿದೆ. ಅಕ್ಟೋಬರ್ 14ರಂದು ಸಿನಿಮಾ ತೆರೆಗೆ ಬರುತ್ತಿದೆ. ರಾಜ್ಯಾದ್ಯಂತ ಚಿತ್ರವನ್ನು ಜಯಣ್ಣ ವಿತರಣೆ ಮಾಡುತ್ತಿದ್ದಾರೆ' ಎನ್ನುತ್ತಾರೆ.

'ವಾಸಂತಿ ನಲಿದಾಗ' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜತೆಗೆ ರವೀಂದ್ರ ವೆಂಶಿ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಶ್ರೀಗುರು ಸಂಗೀತವಿದ್ದು, ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಸಾಹಿತ್ಯವಿದೆ. ಸಿ.ರವಿಚಂದ್ರನ್ ಸಂಕಲನ, ಪ್ರಮೋದ್ ಭಾರತೀಯ ಛಾಯಾಗ್ರಾಹಣವಿದೆ.