ಸಿನಿವಾಣಿ

ಈ ವರ್ಷ ಬಾಲಿವುಡ್​ನಲ್ಲಿ ಗಟ್ಟಿಮೇಳ ಗಟ್ಟಿಮೇಳ ...

ಮುಂಬೈ: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ವರುಣ್​ ಧವನ್​ ಮತ್ತು ಅವರ ಬಹುಕಾಲದ ಗೆಳತಿ ನತಾಶಾ ದಲಾಲ್​ ಅವರ ಮದುವೆ 2019ರಲ್ಲೇ ಆಗಬೇಕಿತ್ತು. ಬ್ಯುಸಿ ಇದ್ದ ಕಾರಣ 2020ಕ್ಕೆ ಮುಂದೂಡಲಾಯಿತು. ಲಾಕ್​ಡೌನ್​ ಇದ್ದ ಕಾರಣ, ಆ ಮದುವೆ ಇದೀಗ ಇದೇ ವರ್ಷ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಹೌದು, ತಮ್ಮ ಗೆಳತಿಯನ್ನು ಈ ವರ್ಷ ಮದುವೆಯಾಗುವ ಸಾಧ್ಯತೆ ಇದೆ ಎಂದು ಸ್ವತಃ ವರುಣ್​ ಧವನ್​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ಎಲ್ಲರೂ ನಮ್ಮ ಮದುವೆಯ ಬಗ್ಗೆ ಕಳೆದ ಎರಡು ವರ್ಷಗಳಿಂದ ಮಾತನಾಡುತ್ತಲೇ ಇದ್ದಾರೆ. ನಮಗೂ ಮದುವೆಯಾಗಬೇಕು ಅಂತ ಆಸೆ ಇದೆ. ಆದರೆ, ಯಾವುದೂ ಪಕ್ಕಾ ಆಗಿಲ್ಲ. ಜಗತ್ತಿನಲ್ಲಿ ಈಗ ಎಲ್ಲ ವಿಷಯಗಳಲ್ಲೂ ಸಾಕಷ್ಟು ಗೊಂದಲ ಇದ್ದು, ಎಲ್ಲವೂ ಸ್ವಲ್ಪ ತಣ್ಣಗಾದ ನಂತರ ಯೋಚಿಸಬಹುದು. ಬಹುಶಃ ಈ ವರ್ಷದ ಕೊನೆಯ ಹೊತ್ತಿಗೆ ಮದುವೆಯಾಗುವ ಸಾಧ್ಯತೆ ಇದೆ' ಎಂದು ಹೇಳಿಕೊಂಡಿದ್ದರು.

ಬರೀ, ವರುಣ್​ ಧವನ್​ ಒಬ್ಬರೇ ಅಲ್ಲ, ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​, ಅಲಿ ಫಜಲ್​ ಮತ್ತು ರಿಚಾ ಚಡ್ಡಾ ಸಹ ಕಳೆದ ವರ್ಷವೇ ಮದುವೆ ತಯಾರಿ ನಡೆಸಿದ್ದರು. ಆದರೆ, ಲಾಕ್​ಡೌನ್​ನಿಂದಾಗಿ ಮದುವೆ ಈ ವರ್ಷಕ್ಕೆ ಮುಂದೂಡಲ್ಪಟ್ಟಿದೆ.

ಆದರೆ, ಅದಕ್ಕೂ ಮುನ್ನ ಎಲ್ಲರೂ ತಮ್ಮ ಹಳೆಯ ಕಮಿಟ್​ಮೆಂಟ್​ಗಳನ್ನು ಮುಗಿಸಬೇಕಿದೆ. ಏಕೆಂದರೆ, ಕಳೆದ ವರ್ಷ ಕರೊನಾ ಮತ್ತು ಲಾಕ್​ಡೌನ್​ನಿಂದ ಯಾರೂ ಸರಿಯಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಒಪ್ಪಿದ್ದ ಚಿತ್ರಗಳೆಲ್ಲವೂ ಮುಂದಕ್ಕೆ ಹೋದ ಕಾರಣ, ಈ ವರ್ಷ ಆ ಕೆಲಸಗಳನ್ನು ಮುಗಿಸಿ, ಆ ನಂತರ ಮದುವೆಯಾಗುವ ಬಗ್ಗೆ ಯೋಚಿಸುವ ಸಾಧ್ಯತೆ ಇದೆ.

ಹಾಗಾಗಿ, ವರ್ಷದ ಮೊದಲಾರ್ಧಕ್ಕಿಂತ ದ್ವಿತೀಯಾರ್ಧದಲ್ಲಿ ಬಾಲಿವುಡ್​ನಲ್ಲಿ ಮದುವೆ ಸಂಭ್ರಮ ಜೋರಿರಲಿದೆ ಎಂದು ಹೇಳಲಾಗುತ್ತಿದೆ.