ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ 54ನೇ ಜನ್ಮದಿನ ಪ್ರಯುಕ್ತ ಅವರ ಅಭಿನಯದ ಹಾಗೂ ನಿರ್ದೇಶನದ ಸಿನಿಮಾ ತಂಡದವರು ಮತ್ತು ಅಭಿಮಾನಿಗಳು ನಾನಾ ರೀತಿಯಲ್ಲಿ ಶುಭಾಶಯ ಕೋರಿ ಸಂಭ್ರಮಿಸಿದ್ದಲ್ಲದೆ, ಜನ್ಮದಿನದ ಹಿನ್ನೆಲೆಯಲ್ಲಿ ಟೀಸರ್-ಪೋಸ್ಟರ್ಗಳ ಬಿಡುಗಡೆ ಕೂಡ ಆಗಿವೆ.
ಉಪೇಂದ್ರ ಅಭಿನಯ ಮತ್ತು ನಿರ್ದೇಶನದ ಮಹತ್ವಾಕಾಂಕ್ಷಿ ಸಿನಿಮಾ 'ಯುಐ' ತಂಡದವರು ಉಪ್ಪಿಗೆ ವಿಶೇಷವಾಗಿ ವಿಷ್ ಮಾಡಿದ್ದಲ್ಲದೆ, ಸಣ್ಣ ಟೀಸರ್ವೊಂದನ್ನು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಇನ್ನೊಂದೆಡೆ ಉಪ್ಪಿ ಅಭಿನಯದ ಕಬ್ಜ ಚಿತ್ರದ ಟೀಸರ್ ನಿನ್ನೆ ಸಂಜೆ ಬಿಡುಗಡೆ ಆಗಿದ್ದು, ಭರ್ಜರಿ ಪ್ರತಿಕ್ರಿಯೆ ಪಡೆದಿದೆ.
ಆರ್. ಚಂದ್ರು ನಿರ್ದೇಶನ, ಉಪೇಂದ್ರ-ಸುದೀಪ್-ಶ್ರೀಯಾ ಶರನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಕಬ್ಜ ಚಿತ್ರದ ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲಿ ಅಂದರೆ 24 ಗಂಟೆಗಳ ಒಳಗೆ 1 ಕೋಟಿಗೂ ಅಧಿಕ ವೀಕ್ಷಣೆಯನ್ನು ಕಂಡಿದ್ದಲ್ಲದೆ, ಯೂಟ್ಯೂಬ್ನಲ್ಲಿ ನಂ. 1 ಟ್ರೆಂಡಿಂಗ್ನಲ್ಲಿದೆ.
ಇನ್ನೊಂದೆಡೆ ಜಿ. ಮನೋಹರನ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಾಣದ ಯುಐ ಚಿತ್ರತಂಡ ಉಪ್ಪಿ ಜನ್ಮದಿನ ಪ್ರಯುಕ್ತ ಇಂದು ಬೆಳಗ್ಗೆ ಟೀಸರ್ವೊಂದನ್ನು ಬಿಡುಗಡೆ ಮಾಡಿದ್ದು, ಅದು ಕೂಡ ಯೂ-ಟ್ಯೂಬ್ನಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದ್ದು, ನಂ. 2 ಟ್ರೆಂಡಿಂಗ್ನಲ್ಲಿದೆ. ಈ ಮೂಲಕ ಇಂದು ಯೂಟ್ಯೂಬ್ನಲ್ಲಿ ಉಪ್ಪಿ ಹವಾ ಎಂಬಂತಾಗಿದೆ.