ಸಿನಿವಾಣಿ

ಎಲ್ಲವೂ ಯೂಕ್ರೇನ್‌ಗಾಗಿಯೇ... ಯುದ್ಧದಲ್ಲಿ ಸಾವಿಗೀಡಾದ ನಟನ ಕೊನೆಯ ಸಂದೇಶ ವೈರಲ್

ಯೂಕ್ರೇನ್: ಯೂಕ್ರೇನ್ ಮೇಲೆ ರಷ್ಯಾ ದಾಳಿ ನಿಲ್ಲುವಂತೆ ಕಾಣುತ್ತಿಲ್ಲ. ಈ ಯುದ್ಧ ಫೆಬ್ರವರಿ 24 ರಂದು ಆರಂಭವಾಗಿದ್ದು, ರಷ್ಯಾ ನಿರಂತರವಾಗಿ ಯೂಕ್ರೇನ್ ಮೇಲಿನ ಯುದ್ಧವನ್ನು ಮುಂದುವರೆಸಿದೆ. ಈ ಯುದ್ಧದಲ್ಲಿ ಯೂಕ್ರೇನ್‌ನ ಅನೇಕ ನಾಗರಿಕರು, ಸೇನಾ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಯುದ್ಧದಲ್ಲಿ ಯೂಕ್ರೇನ್‌ನ ಖ್ಯಾತ ಯುವ ನಟ ಪಾಶಾ ಲೀ ಕೂಡಾ ಸಾವನ್ನಪ್ಪಿದ್ದಾರೆ. ಅಂದಹಾಗೆ, ಕಳೆದ ವಾರವಷ್ಟೇ ರಷ್ಯಾ ವಿರುದ್ಧ ಹೋರಾಡಲು 33 ವರ್ಷದ ನಟ ಪಾಶಾ ಲೀ ಅವರು ತಮ್ಮ ಯೂಕ್ರೇನ್ ದೇಶದ ಆರ್ಮಿಯನ್ನು ಸೇರಿದ್ದರು ಎಂಬ ಮಾಹಿತಿ ಇದೆ. ಇನ್ನು, ಈ ವೀರ ನಟ ರಷ್ಯಾ ವಿರುದ್ಧ ಸೆಣೆ ಸಾಡುತ್ತಾಲೇ ವೀರಮರಣವನ್ನು ಅಪ್ಪಿದ್ದಾನೆ. ನಟ ಪಾಶಾ ಲೀ ಅವರು ಯೂಕ್ರೇನ್‌ನ ಪ್ರಾದೇಶಿಕ ರಕ್ಷಣಾ ಪಡೆಯನ್ನು ಸೇರಿಕೊಂಡಿದ್ದರು.
ಯೂಕ್ರೇನ್‌ನ ಇರ್ಪಿನ್‌ನಲ್ಲಿ ಪಾಶಾ ಲೀ ಸೇನೆಯೊಂದಿಗೆ ಇದ್ದರು. ಈ ವೇಳೆ ರಷ್ಯಾ ಸೇನೆ ಶೆಲ್ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಪಾಶಾ ಲೀ ಸಾವನ್ನಪ್ಪಿದ್ದಾರೆ ಎಂದು ಹಲವು ಮಾಹಿತಗಳು ಹೇಳುತ್ತಿವೆ. ಮತ್ತೊಂದೆಡೆ, ನಟ ಪಾಶಾ ಲೀ ಸಾವಿಗೂ ಮುನ್ನ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೊನೆಯದಾಗಿ ಯುದ್ಧದ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದರು. "ಕಳೆದ 48 ಗಂಟೆಗಳಿಂದ ನಮಗೆ ಕೂತು ಕೊಳ್ಳುವುದಕ್ಕೆ ಅವಕಾಶ ಸಿಕ್ಕಿದೆ. ಹಾಗೇ ನಮ್ಮ ಮೇಲೆ ಹೇಗೆ ಬಾಂಬ್ ಎಸೆಯುತ್ತಿದ್ದಾರೆ ಎಂಬುವುದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ಕೂಡಾ ಅವಕಾಶ ಸಿಕ್ಕಿದೆ. ಹೀಗಿದ್ದರೂ, ನಾವು ನಗುತ್ತಿದ್ದೇವೆ. ಯಾಕಂದರೆ ನಾವು ಈ ಸಂದರ್ಭವನ್ನು ನಿಭಾಯಿಸುತ್ತೇವೆ ಎಂಬ ನಂಬಿಕೆ ಇದೆ. ಎಲ್ಲವೂ ಯೂಕ್ರೇನ್‌ಗಾಗಿಯೇ, ನಾವು ಅದಕ್ಕಾಗಿಯೇ ಕೆಲಸ ಮಾಡುತ್ತೇವೆ." ಎಂದು ಪಾಶಾ ಲೀ ಬರೆದುಕೊಂಡಿದ್ದರು.
ನಟ ಪಾಶಾ ಲೀ ಕೇವಲ ನಟನಾಗಿ ಅಲ್ಲದೇ ಬೇರೆ ಬೇರೆ ಪ್ರತಿಭೆಗಳನ್ನು ಹೊಂದಿದ್ದರು. ಅವರು ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡಾ ಕೆಲಸ ಮಾಡಿದ್ದರು. ಹೌದು, ಹಾಲಿವುಡ್ ಸಿನಿಮಾಗಳು ಯೂಕ್ರೇನ್ ಭಾಷೆಗೆ ಡಬ್ ಆದಾಗ, ಅಂತಹ ಅನೇಕ ಸಿನಿಮಾಗಳಿಗೆ ಪಾಶಾ ಲೀ ಅವರು ಡಬ್ ಮಾಡಿದ್ದಾರೆ. ಇನ್ನು, ಯೂಕ್ರೇನಿನ DOM ಚಾನೆಲ್‌ನಲ್ಲಿ ನಿರೂಪಕರಾಗಿಯೂ ಪಾಶಾ ಲೀ ಕೆಲಸ ಮಾಡಿದ್ದಾರೆ. ತಮ್ಮ ದೇಶಕ್ಕಾಗಿ ಹೋರಾಡಲು ಸೇನೆ ಸೇರಿದ ಹಲವು ಯೂಕ್ರೇನ್ ನಾಗರಿಕರು, ಸಿನಿತಾರೆಯರು, ಮಾಡೆಲ್​ಗಳು ಕೂಡಾ ಸಾವನ್ನಪ್ಪುತ್ತಿರುವುದು ಇಡೀ ಪ್ರಪಂಚದಲ್ಲಿ ಜನರಿಗೆ ಬೇಸರವಾಗುತ್ತಿದೆ. ಸದ್ಯ, ನಟ ಪಾಶಾ ಲೀ ಅವರ ಕೊನೆಯ ಸಂದೇಶ, ಫೋಟೋಗಳು ವೈರಲ್ ಆಗುತ್ತಿದ್ದು, ನೆಟ್ಟಿಗರು ಬೇಜಾರಾಗಿದ್ದಾರೆ.