ಸಿನಿವಾಣಿ

ಅಜೇಯ್​ ನಿರ್ಮಾಣದ ಎರಡನೇ ಚಿತ್ರದ ಮೊದಲ ಪೋಸ್ಟರ್​ ಹೀಗಿದೆ ನೋಡಿ …

ಬೆಂಗಳೂರು: 'ಕೃಷ್ಣ ಲೀಲಾ' ನಂತರ ಅಜೇಯ್​ ರಾವ್​ ನಿರ್ಮಾಣದಲ್ಲಿ ತೊಡಗಿಸಿಕೊಂಡಿರಲಿಲ್ಲ. ಒಂದೇ ಚಿತ್ರದ ನಿರ್ಮಾಣಕ್ಕೆ ಅವರು ಸುಸ್ತಾಗಿ ಹೋದರಾ ಎಂಬ ಪ್ರಶ್ನೆ ಬರುವಾಗಲೇ, ಅವರು ಪವನ್​ ಭಟ್​ ನಿರ್ದೇಶನದ ಒಂದು ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಸುದ್ದಿಯಾಗಿತ್ತು. ಈ ಚಿತ್ರದಲ್ಲಿ ಅವರೇ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು.

ಈಗ ಅದು ಅಧಿಕೃತವಾಗಿದೆ. ಅಜೇಯ್​ ರಾವ್ ನಿರ್ಮಾಣದ ಎರಡನೇ ಚಿತ್ರದ ಮೊದಲ ಪೋಸ್ಟರ್​ ಇಂದು ಬಿಡುಗಡೆಯಾಗಿದ್ದು, ಚಿತ್ರದ ಟೈಟಲ್​ ಏನಿರಬಹುದು ಎಂದು ನವೆಂಬರ್​ 25ಕ್ಕೆ ಗೊತ್ತಾಗಲಿದೆ. ಅಂದು ಟೈಟಲ್​ ಟೀಸರ್​ ಬಿಡುಗಡೆ ಮಾಡುವ ಮೂಲಕ ಅಜೇಯ್​ ತಮ್ಮ ಹೊಸ ಚಿತ್ರದ ಟೈಟಲ್​ ಏನು ಎಂದು ಹೇಳಲಿದ್ದಾರೆ.

ಈ ಚಿತ್ರದ ಮೊದಲ ಪೋಸ್ಟರ್​ ನೋಡಿದರೆ, ಇದರಲ್ಲಿ ಅಜೇಯ್​ ಲಾಯರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹಾಗೆ ಕಾಣುತ್ತದೆ. ಕರಿ ಕೋಟು ತೊಟ್ಟು ಟೇಬಲ್​ಗೆ ಅಜೇಯ್​ ಒರಗಿ ನಿಂತಿದ್ದು, ಹಿಂದೆ ಕ್ಯಾಲೆಂಡರ್​ನಲ್ಲಿ ಮಾರ್ಚ್​ 2023 ಎಂದು ನಮೂದಿಸಲಾಗಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಬಹುಶಃ 2023ರ ಮಾರ್ಚ್​ನಲ್ಲಿ ಚಿತ್ರ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಪವನ್​ ಭಟ್​ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಕೆ.ಬಿ. ಪ್ರವೀಣ್​ ಅವರ ಸಂಗೀತ ಮತ್ತು ಕಾರ್ತಿಕ್​ ಶರ್ಮ ಅವರ ಛಾಯಾಗ್ರಹಣವಿದೆ. ಯೂಟ್ಯೂಬ್​ನ ಎ2 ಮ್ಯೂಸಿಕ್​ ಚಾನಲ್​ನಲ್ಲಿ ಟೀಸರ್​ ಬಿಡುಡೆಯಾಗಲಿದೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ 'ದಿಲ್​ ಪಸಂದ್​' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಜೇಯ್​ ರಾವ್​, 'ಬ್ಯಾಂಕ್​ ಆಫ್​ ಭಾಗ್ಯಲಕ್ಷ್ಮೀ' ಎಂಬ ಚಿತ್ರದಲ್ಲೂ ನಾಯಕನಾಗಿ ಕಾಣಿಸಿಕಳ್ಳುತ್ತಿದ್ದಾರೆ.