ಮುಂಬೈ: 'ಭಾಗಿ 3' ಚಿತ್ರದ ನಂತರ ಟೈಗರ್ ಶ್ರಾಫ್ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. 'ಹೀರೋಪಂತಿ 2' ಬಿಟ್ಟರೆ, ಅವರ ಕೈಯಲ್ಲಿ ಹೊಸ ಚಿತ್ರ ಯಾವುದೂ ಇರಲಿಲ್ಲ. ಹೀಗಿರುವಾಗಲೇ ಟೈಗರ್ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.
ಒಬ್ಬ ನಟ ಒಂದು ಹೊಸ ಚಿತ್ರವನ್ನು ಒಪ್ಪುವುದು ವಿಶೇಷವೇನಲ್ಲ. ಹಾಗಾಗಿ ಟೈಗರ್ ಹೊಸ ಚಿತ್ರವೊಂದನ್ನು ಒಪ್ಪಿದ್ದು ದೊಡ್ಡ ಸುದ್ದಿಯೇನಲ್ಲ. ಆದರೆ, ಈ ಚಿತ್ರಕ್ಕೆ ಟೈಗರ್ ಪಡೆಯುತ್ತಿರುವ ಸಂಭಾವನೆ ಇದೆಯಲ್ಲಾ, ಅದು ವಿಶೇಷ.
ಏಕೆಂದರೆ, ಇದುವರೆಗೂ ಟೈಗರ್ ತಮ್ಮ ಯಾವ ಚಿತ್ರಕ್ಕೂ ಇಷ್ಟೊಂದು ಸಂಭಾವನೆ ಪಡೆದ ಉದಾಹರಣೆಗಳಿಲ್ಲ. ಹಾಗಾಗಿ, ಟೈಗರ್ ತಮ್ಮ ವೃತ್ತಿಜೀವನದಲ್ಲೇ ಅತೀ ಹೆಚ್ಚು ಸಂಭಾವನೆಯನ್ನು ಇದೊಂದೇ ಚಿತ್ರಕ್ಕೆ ಪಡೆಯುತ್ತಿದ್ದಾರೆ ಎಂಬ ಕಾರಣಕ್ಕೆ ಅವರು ಇದೀಗ ಸುದ್ದಿಯಲ್ಲಿದ್ದಾರೆ.
ಅಂದಹಾಗೆ, ಟೈಗರ್ ಅಭಿನಯದ ಹೊಸ ಚಿತ್ರವನ್ನು ನಿರ್ಮಿಸುತ್ತಿರುವುದು ಜಾಕಿ ಭಾಗ್ನಾನಿ ಅವರ ಪೂಜಾ ಎಂಟರ್ಟೈನ್ಮೆಂಟ್.
ಬಾಕ್ಸಿಂಗ್ ಕುರಿತಾದ ಚಿತ್ರ ಇದಾಗಿದ್ದು, ಈ ಚಿತ್ರಕ್ಕೆ ಟೈಗರ್ ನಾಯಕರಾಗಬೇಕೆನ್ನುವುದು ಜಾಕಿ ಹಠ. ಸದ್ಯದ ಸ್ಟಾರ್ ನಟ ಎಂಬ ಕಾರಣಕ್ಕಷ್ಟೇ ಅಲ್ಲ, ಆ ಪಾತ್ರಕ್ಕೆ ಟೈಗರ್ ಹೇಳಿ ಮಾಡಿಸಿದಂತಿದ್ದಾರಂತೆ. ಅದೇ ಕಾರಣಕ್ಕೆ, ತಮ್ಮ ಹೊಸ ಚಿತ್ರಕ್ಕೆ ಟೈಗರ್ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಜಾಕಿ. ಈ ಚಿತ್ರಕ್ಕೆ ಅವರಿಗೆ ಕೊಟ್ಟಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 30 ಕೋಟಿ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಎರಡು ಭಾಗಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆಯಂತೆ.
ಇದನ್ನೂ ಓದಿ: ನಷ್ಟ ತುಂಬಿಕೊಡಿ … ಮಹಾನಗರ ಪಾಲಿಕೆ ಮೇಲೆ ಕಂಗನಾ ಕೇಸ್
ಇಲ್ಲಿ ಬಾಕ್ಸಿಂಗ್ ಮುಖ್ಯವಾದರೂ, ಮಾರ್ಷಲ್ ಆರ್ಟ್ಸ್ ಸಹ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದಂತೆ. ಟೈಗರ್ ಬರೀ ಬಾಕ್ಸಿಂಗ್ ಅಷ್ಟೇ ಅಲ್ಲ, ಮಾರ್ಷಲ್ ಆರ್ಟ್ಸ್ನಲ್ಲೂ ತರಬೇತಿ ಪಡೆದಿರುವುದರಿಂದ, ಅವರನ್ನೇ ಮೊರೆಹೋಗುತ್ತಿದೆ ಚಿತ್ರತಂಡ.
ತಂದೆ-ಮಗನ ಭಾವನಾತ್ಮಕ ಕಥೆ ಹೊಂದಿರುವ ಈ ಚಿತ್ರವನ್ನು ವಿಕಾಸ್ ಬಹ್ಲ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಕೆಲಸಗಳು ಈಗಾಗಲೇ ಶುರುವಾಗಿದ್ದು, ಸದ್ಯದಲ್ಲೇ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳಲಿದೆ.