ಬೆಂಗಳೂರು: ಕನ್ನಡ ಚಿತ್ರರಂಗದ ಸಖತ್ ಬಿಜಿ ನಟ ಎಂದರೆ ಅದು ಅಚ್ಯುತ್ ಕುಮಾರ್. ಈಗಾಗಲೇ ಅವರ ಅಭಿನಯದ ಹಲವು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. 'ಕಾಂತಾರ', 'ಮಾನ್ಸೂನ್ ರಾಗ', 'ತುರ್ತು ನಿರ್ಗಮನ', 'ಸಕುಟುಂಬ ಸಮೇತ', 'ತ್ರಿಕೋನ', 'ಫೋರ್ ವಾಲ್ಸ್' ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಮುಂತಾದ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಈಗ ಅಚ್ಯುತ್ ಕುಮಾರ್ ಸದ್ದಿಲ್ಲದೆ ಹೊಸದೊಂದು ದಾಖಲೆ ಮಾಡುವುದಕ್ಕೆ ಹೊರಟಿದ್ದಾರೆ. ಈ ವಾರ ನಾಲ್ಕೈದು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಈ ಪೈಕಿ ಮೂರು ಚಿತ್ರಗಳಲ್ಲಿ ಅಚ್ಯುತ್ ಕುಮಾರ್ ನಟಿಸಿದ್ದಾರೆ ಎಂಬುದು ವಿಶೇಷ.
ಹೌದು, ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳ ಪೈಕಿ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್', ಇಶಾನ್ ಅಭಿನಯದ 'ರೆಮೋ' ಮತ್ತು ರಾಕೇಶ್ ಮಯ್ಯ ಅಭಿನಯದ 'ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರಗಳಲ್ಲಿ ಅಚ್ಯುತ್ ಕುಮಾರ್ ನಟಿಸಿದ್ದಾರೆ. ಈ ಪೈಕಿ 'ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರದಲ್ಲಿ ಅವರು ಇನ್ಸ್ಪೆಕ್ಟರ್ ಪಾತ್ರ ಮಾಡಿದರೆ, ಇನ್ನೆರಡು ಚಿತ್ರಗಳಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ ಗಣೇಶ್ ಮೂವರು ನಾಯಕಿಯರೊಂದಿಗೆ ತ್ರಿಬಲ್ ರೈಡಿಂಗ್ ಮಾಡಿದರೆ, ಈ ಕಡೆ ಅಚ್ಯುತ್ ಕುಮಾರ್ ಸಹ ಒಂದೇ ವಾರ ಮೂರು ಚಿತ್ರಗಳೊಂದಿಗೆ ತ್ರಿಬಲ್ ರೈಡಿಂಗ್ ಹೊರಟಿದ್ದಾರೆ.
ಒಬ್ಬ ನಟನ ಒಂದೋ, ಎರಡೋ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುವುದು ಹೊಸದೇನಲ್ಲ. ಆದರೆ, ಅಚ್ಯುತ್ ಅಭಿನಯದ ಮೂರು ಚಿತ್ರಗಳು ಒಟ್ಟಿಗೇ ಒಂದೇ ದಿನ ಬಿಡುಗಡೆಯಾಗುತ್ತಿರುವುದು ಸದ್ಯದ ಮಟ್ಟಿಗೆ ಒಂದು ದಾಖಲೆಯೇ.