ಪ್ರತೀ ವರ್ಷ ಇದು ಸಹಜ. ಕೆಲವು ಹೀರೋಗಳ ಎರಡ್ಮೂರು ಚಿತ್ರಗಳು ಬಿಡುಗಡೆಯಾದರೆ, ಇನ್ನು ಕೆಲವರ ಹಾಜರಾತಿಯೇ ಇರುವುದಿಲ್ಲ. ಹಾಗಂತ ಅವರು ಸುಮ್ಮನೆ ಕೂತಿರುವುದಿಲ್ಲ. ಚಿತ್ರಗಳನ್ನು ಮಾಡುತ್ತಿರುತ್ತಾರಾದರೂ, ಕಾರಣಾಂತರಗಳಿಂದ ಅವರ ಚಿತ್ರಗಳು ಆ ವರ್ಷ ಬಿಡುಗಡೆ ಆಗಿರುವುದಿಲ್ಲ. ಈ ನಿಟ್ಟಿನಲ್ಲಿ 2022 ಕನ್ನಡ ಚಿತ್ರರಂಗಕ್ಕೊಂದು ಬಹಳ ಅಪರೂಪದ ವರ್ಷ ಎಂದರೆ ತಪ್ಪಿಲ್ಲ. ಈ ಬಾರಿ ಎಲ್ಲ ಸ್ಟಾರ್ ನಟರ ಒಂದಿಲ್ಲೊಂದು ಚಿತ್ರಗಳು ಬಿಡುಗಡೆ ಅಗಲಿವೆ.
ಕಳೆದ ಒಂದು ದಶಕವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅತ್ಯಂತ ಕನ್ಸಿಸ್ಟೆಂಟ್ ಆಗಿ ಹೊರಹೊಮ್ಮುವ ನಟರೆಂದರೆ ಅದು ಶಿವರಾಜಕುಮಾರ್ ಮತ್ತು ಗಣೇಶ್. ಪ್ರತೀ ವರ್ಷ ಶಿವಣ್ಣ ಮತ್ತು ಗಣೇಶ್ ಅಭಿನಯದ ಎರಡು ಚಿತ್ರಗಳಾದರೂ ಇರುತ್ತವೆ. ಮಿಕ್ಕಂತೆ ಬೇರೆ ಹೀರೋಗಳ ಚಿತ್ರಗಳು ಒಂದೋ ಪ್ರತೀ ವರ್ಷ ಬಿಡುಗಡೆಯಾಗುವುದಿಲ್ಲ, ಬಿಡುಗಡೆಯಾದರೂ ಅದು ಅವರು ಪೂರ್ಣಪ್ರಮಾಣದ ನಾಯಕರಾಗಿ ನಟಿಸಿದ ಚಿತ್ರವಾಗಿರುವುದಿಲ್ಲ. ಹಾಗಾಗಿ, ಪ್ರತೀವರ್ಷ ಎಲ್ಲ ಜನಪ್ರಿಯ ನಾಯಕ ನಟರ ಹಾಜರಾತಿ ಇದ್ದೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ, 2022 ಅದಕ್ಕೊಂದು ಅಪವಾದ. ಈ ವರ್ಷ ಎಲ್ಲ ಜನಪ್ರಿಯ ನಟರ ಒಂದೆರಡಾದರೂ ಚಿತ್ರಗಳಿವೆ. ಕೆಲವರದ್ದು ಎರಡಕ್ಕಿಂತ ಹೆಚ್ಚು ಚಿತ್ರಗಳಿವೆ. ಅದಕ್ಕೆ ಕಾರಣ, ಕಳೆದ ಎರಡು ವರ್ಷಗಳ ಕಾಲ ಕರೊನಾ, ಲಾಕ್ಡೌನ್ ಮುಂತಾದ ಕಾರಣಗಳಿಂದಾಗಿ ಕೆಲವು ನಟರ ಚಿತ್ರಗಳು ಬಿಡುಗಡೆಯಾಗಲೇ ಇಲ್ಲ. ಅವೆಲ್ಲ ಈ ವರ್ಷಕ್ಕೆ ಸೇರಿಕೊಂಡು ಈ ವರ್ಷ ಸ್ಟಾರ್ವುಯವಾಗಿದೆ ಎಂದರೆ ತಪ್ಪಿಲ್ಲ.
ಈ ವರ್ಷ 3 ಅಥವಾ ಅದಕ್ಕಿಂತ ಹೆಚ್ಚು ಚಿತ್ರಗಳು ಬಿಡುಗಡೆಯಾಗ ಬೇಕಿರುವ ನಟರ ಸಾಲಿನಲ್ಲಿ ಮೊದಲಿರುವವರು ಧನಂಜಯ್. ಈಗಾಗಲೇ ‘ಬೈರಾಗಿ’, ‘ತೋತಾಪುರಿ’ ಮತ್ತು ‘ಮಾನ್ಸೂನ್ ರಾಗ’ ಚಿತ್ರಗಳನ್ನು ಮುಗಿಸಿರುವ ಧನಂಜಯ್, ‘ಹೆಡ್ ಬುಷ್’ ಮತ್ತು ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಉಪೇಂದ್ರ ಅಭಿನಯದ ‘ಬುದ್ಧಿವಂತ 2’, ‘ಹೋಂ ಮಿನಿಸ್ಟರ್’, ‘ತ್ರಿಶೂಲಂ’, ‘ಕಬ್ಜ’ ಚಿತ್ರಗಳ ಪೈಕಿ, ‘ಕಬ್ಜ’ ಬಿಟ್ಟರೆ ಇನ್ನೆಲ್ಲವೂ ಮುಗಿದಿವೆ. ಜಗ್ಗೇಶ್ ಮತ್ತು ಶರಣ್ ಅಭಿನಯದ ತಲಾ 3 ಚಿತ್ರಗಳು ಬಿಡುಗಡೆಗಿವೆ. ಜಗ್ಗೇಶ್ ಕಡೆಯಿಂದ ‘ತೋತಾಪುರಿ 1-2’ ಹಾಗೂ ‘ರಾಘವೇಂದ್ರ ಸ್ಟೋರ್ಸ್’ ಇದ್ದರೆ, ಶರಣ್ ಅಭಿನಯದ ‘ಅವತಾರ್ ಪುರುಷ 1-2’ ಮತ್ತು ‘ಗುರು ಶಿಷ್ಯರು ಚಿತ್ರಗಳಿವೆ. ಪ್ರಜ್ವಲ್ ಬಳಿಯೂ ‘ಅಬ್ಬರ’, ‘ವೀರಂ’ ಮತ್ತು ‘ಮಾಫಿಯಾ’ ಚಿತ್ರಗಳಿವೆ. ಇದಲ್ಲದೆ ಸತೀಶ್ ನೀನಾಸಂ, ದಿಗಂತ್, ಅಜೇಯ್ ರಾವ್, ರಿಷಬ್ ಶೆಟ್ಟಿ, ‘ಡಾರ್ಲಿಂಗ್’ ಕೃಷ್ಣ, ಪೃಥ್ವಿ ಅಂಬರ್, ವಿಜಯ್ ರಾಘವೇಂದ್ರ, ಯೋಗಿ, ನಿಖಿಲ್ ಕುಮಾರ್, ವಸಿಷ್ಠ ಸಿಂಹ ಸಹ ಕೆಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಈ ಎಲ್ಲ ನಟರ ಚಿತ್ರಗಳು ಈ ವರ್ಷ ಹಾಜರಾತಿ ಹಾಕಲಿವೆ.
ಶಿವರಾಜಕುಮಾರ್ ಅಭಿನಯದ ‘ಬೈರಾಗಿ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದರೆ, 125ನೇ ಚಿತ್ರವಾದ ‘ವೇದ’ ಅರ್ಧ ಮುಗಿದಿದೆ. ಮುಂದಿನ ಎಂಟು ತಿಂಗಳಲ್ಲಿ ಈ ಎರಡೂ ಚಿತ್ರಗಳು ಬಿಡುಗಡೆಯಾಗಲಿವೆ. ಪುನೀತ್ ಅಭಿನಯದ ‘ಜೇಮ್್ಸ’ ಮತ್ತು ‘ಲಕ್ಕಿ ಮ್ಯಾನ್’ ಚಿತ್ರಗಳು ಸಂಪೂರ್ಣವಾಗಿದ್ದು, ಈ ಪೈಕಿ ‘ಜೇಮ್್ಸ’, ಮಾರ್ಚ್ 17ರ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ. ಆ ನಂತರ ‘ಲಕ್ಕಿ ಮ್ಯಾನ್’ನ ಸರದಿ. ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಫೆಬ್ರವರಿ 24ರಂದು ಬಿಡುಗಡೆಯಾಗಲಿದ್ದು, ‘ಕಬ್ಜ’ ಇನ್ನಷ್ಟೇ ಮುಗಿಯಬೇಕಿದೆ. ಗಣೇಶ್ ಅಭಿನಯದ ‘ಗಾಳಿಪಟ 2’ ಮತ್ತು ‘ತ್ರಿಬಲ್ ರೈಡಿಂಗ್’ ಎರಡೂ ಮುಕ್ತಾಯವಾಗಿದ್ದು, ‘ಗಾಳಿಪಟ 2’ ಮೊದಲು ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಯಶ್, ರಕ್ಷಿತ್ ಶೆಟ್ಟಿ ಮತ್ತು ಧ್ರುವ ಅಭಿನಯದ ಚಿತ್ರಗಳು ಎರಡೋ, ಮೂರೋ ವರ್ಷಕ್ಕೊಮ್ಮೆ ಬಿಡುಗಡೆಯಾಗುತ್ತವೆ. ವಿಶೇಷವೆಂದರೆ, ಈ ಮೂವರೂ ನಟರ ಒಂದೊಂದು ಚಿತ್ರಗಳು ಈ ವರ್ಷ ತೆರೆಗೆ ಬರಲಿವೆ. ಯಶ್ ಅಭಿನಯದ ‘ಕೆಜಿಎಫ್ 2’ ಚಿತ್ರದ ಬಿಡುಗಡೆ ಈಗಾಗಲೇ ಏ.14ಕ್ಕೆ ಘೋಷಣೆಯಾಗಿದೆ. ಧ್ರುವ ಅಭಿನಯದ ‘ಮಾರ್ಟಿನ್’ ಅರ್ಧ ಮುಗಿದಿದ್ದು, ಈ ವರ್ಷವೇ ತೆರೆ ಕಾಣಲಿದೆ. ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸೆನ್ಸಾರ್ ಆಗಿದ್ದು, ಬಿಡುಗಡೆಯ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ. ಅವರ ಇನ್ನೊಂದು ಚಿತ್ರ ‘ಸಪ್ತ ಸಾಗರದಾಚೆ ಎಲ್ಲೋ’ ಅರ್ಧ ಮುಗಿದಿದ್ದು, ಅದು ವರ್ಷಾಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ಇನ್ನು, ಕೆಲವು ನಟರ ಚಿತ್ರಗಳ ಬಗ್ಗೆ ಗೊಂದಲವಿದೆ. ಪ್ರಮುಖವಾಗಿ, ತೆಲುಗು ಚಿತ್ರ ಮುಗಿಸಿದ ನಂತರ ಕನ್ನಡದಲ್ಲಿ ಹೊಸ ಚಿತ್ರವನ್ನು ಒಪ್ಪಿಕೊಳ್ಳುವುದಾಗಿ ‘ದುನಿಯಾ’ ವಿಜಯ್ ಹೇಳಿದ್ದರು. ಹಾಗಾಗಿ, ಹೊಸ ಚಿತ್ರ ಯಾವಾಗ ಶುರುವಾಗಿ, ಯಾವಾಗ ಬಿಡುಗಡೆಯಾಗುತ್ತದೆ ಎಂದು ಈಗಲೇ ಹೇಳುವುದು ಕಷ್ಟ. ‘ಮದಗಜ’ ಮುಗಿಯುತ್ತಿದ್ದಂತೆಯೇ, ಶ್ರೀಮುರಳಿ ಅಭಿನಯದ ‘ಬಘೀರ’ ಚಿತ್ರ ಸೆಟ್ಟೇರುತ್ತದೆ ಎಂದು ಹೇಳಲಾಗಿತ್ತು. ಆದರೆ, ಸದ್ಯಕ್ಕೆ ಚಿತ್ರತಂಡದಿಂದ ಯಾವುದೇ ಸುದ್ದಿ ಇಲ್ಲದಿರುವುದರಿಂದ, ‘ಬಘೀರಾ’ ಇದೇ ವರ್ಷ ಬಿಡುಗಡೆ ಎಂದು ಹೇಳುವುದು ಕಷ್ಟ. ‘ಪ್ರೇಮಂ ಪೂಜ್ಯಂ 2’ ಚಿತ್ರದಲ್ಲಿ ಪ್ರೇಮ್ ಅಭಿನಯಿಸುತ್ತಿರುವ ಸುದ್ದಿ ಆಗಿದೆಯಾದರೂ, ಆ ಚಿತ್ರದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.