ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಉತ್ತರಕಾಂಡ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆದಿತ್ತು. ಈ ಮಧ್ಯೆ, ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ನಟಿಸುವುದು ಅಧಿಕೃತವಾಗುತ್ತಿದ್ದಂತೆ ಅಭಿಮಾನಿಗಳು ಖುಷಿಯಾಗಿದ್ದಾರೆ.
ರಮ್ಯಾ, ರಾಜ್ ಬಿ. ಶೆಟ್ಟಿ ನಿರ್ದೇಶನದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡಲು ಸಿದ್ಧರಾಗಿದ್ದರು. ಈ ಸಿನಿಮಾವನ್ನು ರಮ್ಯಾ ತಮ್ಮ ಆ್ಯಪಲ್ ಬಾಕ್ಸ್ ಸಂಸ್ಥೆಯ ಮೂಲಕ ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ, ಹೊಸಬರ ಚಿತ್ರಗಳನ್ನು ನಿರ್ಮಿಸುವುದಕ್ಕೆ ಹುಟ್ಟುಹಾಕಿರುವ ಸಂಸ್ಥೆಯಾದ್ದರಿಂದ, ಆ ಚಿತ್ರದಲ್ಲಿ ಹೊಸಬರು ಇರುತ್ತಾರೆ, ತಾನು ಇನ್ನೊಂದು ಚಿತ್ರದ ಮೂಲಕ ಬರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇದೀಗ ಉತ್ತರಕಾಂಡ ಸಿನಿಮಾ ಮೂಲಕ ರಮ್ಯಾ ಮತ್ತೆ ತೆರೆಮೇಲೆ ಬರಲು ಸಜ್ಜಾಗಿದ್ದಾರೆ.
ಈ ಸಿನಿಮಾಗೆ ಎಂಟ್ರಿ ಕೊಡುತ್ತಿರುವ ಉತ್ಸಾಹದಲ್ಲಿರುವ ರಮ್ಯಾ, ಟ್ವೀಟ್ ಮಾಡಿ ಸಂತೋಷ ಹಂಚಿಕೊಂಡಿದ್ದಾರೆ. ನಾನು ಹತ್ತು ವರ್ಷಗಳ ನಂತರ ಉತ್ತರಕಾಂಡ ಸಿನಿಮಾ ಮೂಲಕ ಬೆಳ್ಳಿ ಪರದೆಗೆ ಹಿಂತಿರುಗುತ್ತಿದ್ದೇನೆ. ಈ ಹಿಂದೆ ರತ್ನನ್ ಪ್ರಪಂಚ ಸಿನಿಮಾದಲ್ಲಿ ಧನಂಜಯ್ ಜತೆ ನಟಿಸಬೇಕಿತ್ತು. ಆದರೆ ಈಗ ಅದೇ ತಂಡದ ಜತೆಗೆ ಸಿನಿಮಾ ಮಾಡುತ್ತಿರುವುದು ಸಂತಸ ತಂದಿದೆ. ಉತ್ತರಕಾಂಡ ಸಿನಿಮಾ ಸ್ಕ್ರಿಪ್ಟ್ ಅದ್ಭುತವಾಗಿದೆ. 'ಇನ್ ಮ್ಯಾಲಿಂದ ಫುಲ್ ಗುದ್ದಾಮ್ ಗುದ್ದಿ..! ಎಂದು ರಮ್ಯಾ ಸಂತಸ ಹಂಚಿಕೊಂಡಿದ್ದಾರೆ.
ವಿಜಯ್ ಕಿರಗಂದೂರು ಅರ್ಪಿಸುತ್ತಿರುವ ‘ಉತ್ತರಕಾಂಡ’ ಚಿತ್ರವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯಡಿ ಕಾರ್ತಿಕ್ ಗೌಡ ಮತ್ತು ಯೋಗಿ.ಜಿ.ರಾಜ್ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಇನ್ನು, ರೋಹಿತ್ ಪದಕಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದು, ಸ್ವಾಮಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.